
ಮಂಗಳೂರು : ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಕಲಾಭಿ ರಂಗೋತ್ಸವದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಶ್ರವಣ್ ಹೆಗ್ಗೋಡು ನಿರ್ದೇಶನದ “ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್” ಜೂನ್ 9ರಂದು ಸಂಜೆ 6.45ಕ್ಕೆ’ ಪ್ರದರ್ಶನಗೊಳ್ಳಲಿದೆ.
ನಿರ್ದಿಗಂತ ಪ್ರಾಜೆಕ್ಟ್ ಭಾಗವಾಗಿ ಸಿದ್ಧಗೊಂಡ ಈ ಪ್ರಸ್ತುತಿ ಈಗಾಗಲೇ ಹಲವಾರು ರಂಗಮಂದಿರದಲ್ಲಿ ಪ್ರದರ್ಶನಗೊಂಡು ಜನಮನ ಗೆದ್ದಿದೆ. ಅಂತಾರಾಷ್ಟ್ರೀಯ ಮಟ್ಟದ ಪಪ್ಪೆಟ್ ರಂಗ ಕಾರ್ಯಾಗಾರದಲ್ಲೂ ಭಾಗವಹಿಸಿದ ಶ್ರವಣ್ ಹೆಗ್ಗೋಡು ರೆಕ್ಸ್‌ಅವರ್ಸ್ , ಹಕ್ಕಿ ಕತೆ ಮುಂತಾದ ಹಲವು ಅದ್ಭುತ ಪಪ್ಪೆಟ್ ರಂಗ ಪ್ರಯೋಗಗಳ ಮೂಲಕ ಜನಪ್ರಿಯತೆ ಹೊಂದಿರುವ ಇವರು ಇದೀಗ ‘ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್’ ಮೂಲಕ ಹೃದಯ ಸ್ಪರ್ಶಿ ಕಥಾ ಹಂದರದೊಂದಿಗೆ ದೈತ್ಯ ಪಪ್ಪೆಟ್ ಆನೆಯನ್ನು ರಂಗದ ಮೇಲೆ ತರಲಿದ್ದಾರೆ. ಕಲಾಭಿ ತಂಡದ ಕಲಾವಿದರ ಮನಸ್ಪೂರ್ತಿಯ ಅಭಿನಯ ಮತ್ತೊಂದು ವಿಶೇಷವಾಗಿದೆ. ಸದ್ಯ ಮಂಗಳೂರು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಸೆಳೆಯುತ್ತಿರುವ ಕಲಾಭಿ ತಂಡದ ಈ ವಿನೂತನ ಪ್ರಯೋಗಕ್ಕೆ ಕರಾವಳಿಯ ಗಣ್ಯ ಹಾಗೂ ದಿಗ್ಗಜ ಕಲಾವಿದರು ಸಾಕ್ಷಿಯಾಗಲಿದ್ದಾರೆ.