
ಬೆಂಗಳೂರು: ಚಿಕನ್ ಮತ್ತು ಮೊಟ್ಟೆ ದರಗಳು ಕಳೆದ ಒಂದು ವಾರದಿಂದ ನಿರಂತರ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಬಾಯ್ಲರ್ ಚಿಕನ್ ಬೆಲೆ ದಾಖಲೆ ಮಟ್ಟ ತಲುಪಿದೆ. ಚರ್ಮವಿಲ್ಲದ ಚಿಕನ್ ಪ್ರತಿ ಕೆಜಿಗೆ ₹360 ಹಾಗೂ ಚರ್ಮ ಸಮೇತ ಚಿಕನ್ ₹340ಕ್ಕೆ ಮಾರಾಟವಾಗುತ್ತಿದೆ. ಕೆಲವೇ ದಿನಗಳ ಹಿಂದೆ ₹300ರ ಆಸುಪಾಸಿನಲ್ಲಿದ್ದ ದರ ಈಗ ₹350-360ಕ್ಕೆ ಏರಿಕೆಯಾಗಿದೆ.
ಮೊಟ್ಟೆ ದರವೂ ಏರಿಕೆ ಕಂಡಿದ್ದು, ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ ₹8 ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ₹8.30ರಿಂದ ₹9ರವರೆಗೆ ಮಾರಾಟವಾಗುತ್ತಿದೆ. ಮೂರು ದಿನಗಳ ಹಿಂದೆ ₹7ರಿಂದ ₹7.50 ಇದ್ದ ಬೆಲೆ ಇದೀಗ ₹9ಕ್ಕೆ ತಲುಪಿದೆ.
ವ್ಯಾಪಾರಿಗಳ ಪ್ರಕಾರ, ಕೋಳಿಗಳ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಹಾಗೂ ಇತರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ದರ ಏರಿಕೆಯಾಗಿದೆ.
ಈ ದುಬಾರಿ ದರದಿಂದ ಗ್ರಾಹಕರ ಸಂಖ್ಯೆಯೂ ಇಳಿಕೆಯಾಗಿದ್ದು ಈ ಹಿಂದೆ ಒಂದು ಕೆಜಿ ಚಿಕನ್ ಖರೀದಿಸುತ್ತಿದ್ದವರು ಈಗ ಅರ್ಧ ಕೆಜಿ ಅಥವಾ 750 ಗ್ರಾಂಗೆ ಸೀಮಿತವಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಮೊಟ್ಟೆ ಕರಿ ಸೇರಿದಂತೆ ಹಲವು ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.













































