
ಬೆಂಗಳೂರು: ಕಳೆದ ಬಾರಿಯ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ನದ್ದು ಉತ್ತಮ ಸಾಧನೆ ಎನ್ನಬಹುದಾದರೂ, ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯ ಮಧ್ಯೆಯೂ ನಿರೀಕ್ಷಿತ ಗುರಿ ಮುಟ್ಟುವುದು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಕೂಗು ಕೇಳಿ ಬರುವುದು ಖಚಿತ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಒಂದಷ್ಟು ರಾಜಕೀಯ ಏರಿಳಿತದ ಸಾಧ್ಯತೆಯಿದ್ದು ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಹೆಚ್ಚಾಗುವ ಸಾಧ್ಯತೆ ಇದೆ. ‘ಒನ್ ಮ್ಯಾನ್ ಒನ್ ಪೋಸ್ಟ್’ ಪಾಲಿಸಿಗೆ ಹಿರಿಯ ನಾಯಕರು ಒತ್ತಾಯ ಹೇರಬಹುದು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಿದ್ದು ಪರಿಣಾಮವಾಗಿ ಸಚಿವರ ಖಾತೆಗಳು ಅದಲು ಬದಲಾದರೂ ಆಗಬಹುದು. ಸಮುದಾಯವಾರು ಡಿಸಿಎಂ ಹುದ್ದೆಗಳ ಸೃಷ್ಟಿಗೆ ಮತ್ತೆ ಒತ್ತಾಯ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.