
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಹಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ,ತಮ್ಮ ಕುಟುಂಬ ಅಂದರೆ ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ವೈಯಕ್ತಿಕ ವಿಚಾರದಲ್ಲಿ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ, ವರದಿಗಾರರಿಗೆ , ನಿರೂಪಕರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೋರ್ಟ್‌ನಿಂದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು ಈ ಬಗ್ಗೆ ಇಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಮೊದಲಿಗೆ ಮೃತ ಶ್ರೀ ರೇಣುಕಾಸ್ವಾಮಿ ಕುಟುಂಬಕ್ಕೆ ನನ್ನ ಹೃದಯದಿಂದ ಸಾಂತ್ವಾನ ಹೇಳುತ್ತೇನೆ. ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಹದಿಹರೆಯದ ಮಗ ಮತ್ತು ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ನೋವು ಅನುಭವಿಸುತ್ತಿದ್ದೇವೆ. ಗೌರವಾನ್ವಿತ ನ್ಯಾಯಾಲಯವು ಹೊರಡಿಸಿದ ಈ ಆದೇಶದಿಂದ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಮಾಧ್ಯಮಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಮತ್ತು ಅಸತ್ಯಗಳನ್ನು ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಚಾಮುಂಡೇಶ್ವರಿ ಮತ್ತು ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಕ್ಕೆ ಜಯವಾಗಲಿ. ಸತ್ಯಮೇವ ಜಯತೆ!’ ಎಂದು ಬರೆದು ಹಂಚಿಕೊಂಡಿದ್ದಾರೆ.













































































































