
ನವದೆಹಲಿ: ಸೋಮವಾರ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 3400 ಕೋಟಿ ರುಪಾಯಿ. ಬರ ಪರಿಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವು 18000 ಕೋಟಿ ರು. ಪರಿಹಾರ ಕೇಳಿದ್ದೆವು, ಆದರೆ ಕೇಂದ್ರ ಕಡಿಮೆ ಪರಿಹಾರ ನೀಡಿದೆ ಎಂದು ಆರೋಪಿಸಿದೆ.
ಸೋಮವಾರ ನ್ಯಾ.ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಕೇಂದ್ರದ ವಿರುದ್ಧ ಕರ್ನಾಟಕ ಸರ್ಕಾರ ಬರ ಪರಿಹಾರಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿ ಮತ್ತೊಮ್ಮೆ ವಿಚಾರಣೆ ನಡೆಸಿದಾಗ ರಾಜ್ಯದ ಪರ ವಕೀಲ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರಾದ ಆರ್.ವೆಂಕಟರಮಣಿ , ಬರ ಪರಿಶೀಲನೆ ನಡೆಸಿದ ಅಂತರ್ ಸಚಿವಾಲಯ ಸಮಿತಿಯು ಶಿಫಾರಸು ಮಾಡಿದ ಪರಿಹಾರವನ್ನು ರಾಜ್ಯಕ್ಕೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಆಗ ಪೀಠವು ಆ ಶಿಫಾರಸು ವರದಿ ನೀಡುವಂತೆ ಕೇಳಿದಾಗ ಸದ್ಯಕ್ಕೆ ತಮ್ಮ ಬಳಿ ಇಲ್ಲ ಎಂದು ವಕೀಲರು ಹೇಳಿದಾಗ, ಮುಂದಿನ ವಿಚಾರಣೆ ವೇಳೆ ಆ ವರದಿ ಸಲ್ಲಿಸುವಂತೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದರು.