
ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸದಲ್ಲಿದ್ದು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪೊಲೀಸ್ ಪಡೆಯ ಬಲ ವರ್ಧನೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಮಂಜೂರಾತಿ ಕುರಿತು ಮಾತನಾಡಿದ್ದಾರೆ.
ಕೇಂದ್ರ ಸರ್ಕಾರ 80 ಕೋಟಿ ರೂ. ವೆಚ್ಚದಲ್ಲಿ India Reserve Battalion ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 2 ಬೆಟಾಲಿ ಯನ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ 200 ಕೋಟಿ ರು.ನಂತೆ ಒಟ್ಟು 1000 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡುವುದು, ಹೈಕೋರ್ಟ್ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ ಕ್ಯಾಮೆರಾ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ 175 ಕೋಟಿ ರು. ವೆಚ್ಚದಲ್ಲಿ 58,546 ಕ್ಯಾಮೆರಾ ಖರೀದಿಸುವ ಅಗತ್ಯವಿದ್ದು 100 ಕೋಟಿ ರು. ನೆರವು ನೀಡುವಂತೆ ಕೋರಿದ ಸಿ ಎಂ ಸಿದ್ದರಾಮಯ್ಯ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗೂ ಕ್ಯಾಂಟೀನ್ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒದಗಿಸುವುದು, ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಮತ್ತಿತರ ವಿಷಯಗಳ ಕುರಿತೂ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.