
ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವನ್ನು ರೂಢಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ನಾಯಕರು ಪದೇ ಪದೆ ಸಂವಿಧಾನ ಬದಲಿಸುವ, ರದ್ದು ಪಡಿಸುವ ಹೇಳಿಕೆಗಳನ್ನು ನೀಡುತ್ತಿದ್ದರೂ ಈ ಕುರಿತು ಒಂದೇ ಒಂದು ಮಾತನಾಡುತ್ತಿಲ್ಲ. ಮೋದಿಯವರು ಕೇವಲ 25 ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆ ಜನರಿಗೆ 16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದು, ದೇಶದ ರೈತರು ಹಾಗೂ ನಿರುದ್ಯೋಗಿಗಳ ಕುರಿತು ಮಾತನಾಡುವುದಿಲ್ಲ ಎಂದು ಎ ಐ ಸಿ ಸಿ ಮುಖಂಡ ರಾಹುಲ್ ಗಾಂಧಿ ಟೀಕಿಸಿದರು.
ಬಿಜೆಪಿ ದೇಶದ ಸಂವಿಧಾನವನ್ನು ಬದಲಿಸುತ್ತೇವೆ, ರದ್ದು ಮಾಡುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಆ ಸಂವಿಧಾನವನ್ನು ಉಳಿಸುವ ಕೆಲಸ ಮಾಡುತ್ತದೆ. ಸಮಸಮಾಜ ನಿರ್ಮಾಣ, ನಿಜವಾದ ಸಮುದಾಯಕ್ಕೆ ಮೀಸಲಾತಿ ಹಂಚಿಕೆ, ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರ ಅಭಿವೃದ್ಧಿಗೆ ಅಗತ್ಯವಾದ ಅಂಶಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು.ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ ಮಾಡಿಸಿ, ದೇಶದ ಸಂಪತ್ತಿನಲ್ಲಿ ಯಾವ ಯಾವ ಜಾತಿಯವರ ಆಸ್ತಿ ಎಷ್ಟಿದೆ ಎಂಬುವುದನ್ನ ಬಯಲಿಗೆ ತರುತ್ತೇವೆ. ಜೊತೆಗೆ ದಲಿತರಿಗೆ, ಹಿಂದುಳಿದ ವರ್ಗ ಮತ್ತು ಆದಿವಾಸಿ ಜನಾಂಗದವರಿಗೆ ತಮ್ಮ ಆಸ್ತಿ ಎಷ್ಟಿದೆ ಎಂಬುವುದು ಗೊತ್ತಾಗಲಿದೆ. ಜಾತಿಗಣತಿ ನಿಮ್ಮ ಕೈ ಸೇರಿದ ಆ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಹೇಳಿದರು.