
ಕಾರ್ಕಳ: ಕುಕ್ಕುಂದೂರು ಗ್ರಾಮದ ಜಯಂತಿ ನಗರ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಎಂಬವರು ಕಟ್ಟಡ ಉದ್ಘಾಟನೆಯ ವಿಚಾರವಾಗಿ ಪ್ರೊಟೊಕಾಲ್ ಪಾಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕುಕ್ಕುಂದೂರಿನ ಜಯಂತಿ ನಗರ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚುವರಿ ಕೊಠಡಿಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಅನುದಾನದಿಂದ ನಿರ್ಮಿಸಲಾಗಿದ್ದು ಈ ಹಿನ್ನೆಲೆ ಆಗಸ್ಟ್ 28ರಂದು ಗಣ ಹೋಮದೊಂದಿಗೆ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈ ಮಾಹಿತಿಯನ್ನು ಕ್ಷೇತ್ರದ ಶಾಸಕರ ಗಮನಕ್ಕೆ ತರದೆ ಪ್ರೋಟೋಕಾಲ್ ಪಾಲಿಸಲಿಲ್ಲ ಎಂದು ಆರೋಪಿಸಿ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಅವರ ವಿರುದ್ಧ ದೂರು ನೀಡಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಈ ಕುರಿತು ತನಿಖೆ ನಡೆಸಿ ಇದು ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕರ್ತವ್ಯ ಲೋಪ ಎಸಗಿದ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಅವರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ.













