
ಕಾರ್ಕಳ : ಹಿರ್ಗಾನ ಶ್ರೀ ಮಹಾಲಕ್ಷ್ಮಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಹಿರ್ಗಾನ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಜೂನ್ 8ರಂದು ಸ್ಥಳೀಯ ಸಮಾಜ ಮಂದಿರದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಶುಭ ಕಡಂಬ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ರೋಹಿಣಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಜಯಲಕ್ಷ್ಮಿ ಮಹಾಸಭೆಯ ಕರೆಯೋಲೆಯನ್ನು ವಾಚಿಸಿ ಸಭೆಗೆ ಮಾಹಿತಿ ನೀಡಿದರು.
ಸಭೆಯ ನಡವಳಿಯನ್ನು ಜಯಂತಿ ಮಂಡಿಸಿದರೆ, ಜಮಾ-ಖರ್ಚಿನ ವರದಿಯನ್ನು ವಿಶಾಲ ಹಾಗೂ ವಾರ್ಷಿಕ ವರದಿಯನ್ನು ಅಧ್ಯಕ್ಷೆ ಶುಭ ಸಭೆಯ ಮುಂದಿಟ್ಟರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಒಕ್ಕೂಟದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಸ್ಥಳೀಯ ವೈದ್ಯಾಧಿಕಾರಿ ಶಮ ಶುಕುರ್ ಮಳೆಗಾಲದಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು, ರಕ್ತಹೀನತೆ, HPV ಗರ್ಭಕಂಠದ ಕ್ಯಾನ್ಸರ್ ಹಾಗೂ ಲಸಿಕೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು.ಕೆನರಾ ಬ್ಯಾಂಕ್ ಸಮಾಲೋಚಕ ಪ್ರದೀಪ್ ವಿಮಾ ಯೋಜನೆಗಳ ಕುರಿತು ವಿವರಿಸಿದರು.
ನಿಕಟಪೂರ್ವ ಅಧ್ಯಕ್ಷೆ ಸುನೀತಾ, ಸಂತೋಷ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ರವಿಚಂದ್ರ ಕಾರಂತ ಶುಭ ಹಾರೈಕೆ ಸಲ್ಲಿಸಿದರು.ತಾಲೂಕು ಮೇಲ್ವಿಚಾರಕಿ ಬಬಿತ ಸಂಜೀವಿನಿ ಒಕ್ಕೂಟದ ಉದ್ದೇಶ, ಮಹಿಳೆಯರಿಗೆ ಲಭ್ಯವಿರುವ ತರಬೇತಿ ಕಾರ್ಯಕ್ರಮಗಳು ಹಾಗೂ ಭಾಗವಹಿಸುವಿಕೆಯ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ದೀರ್ಘಕಾಲ MBK ಆಗಿ ಸೇವೆ ಸಲ್ಲಿಸಿ ಹುದ್ದೆಗೆ ರಾಜೀನಾಮೆ ನೀಡಿದ ಸುಗಂಧಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಪಶುಸಖಿಯಾದ ಶೋಭಾ ನಿರ್ವಹಿಸಿದ್ದು, LCRP ವಸಂತಿ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.

































