
ಕಾರ್ಕಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕುಕ್ಕುಂದೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿಯವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದಿದೆ.ಅವರನ್ನು ಅಂಗನವಾಡಿ ಕೇಂದ್ರದ ಹೆಚ್ಚುವರಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ರನ್ನು ಆಹ್ವಾನ ಮಾಡಲಿಲ್ಲ ಎಂದು ಸೆಪ್ಟೆಂಬರ್ 5 ರಂದು ಇಲಾಖೆ ಅಮಾನತು ಮಾಡಿತ್ತು.ಅಮಾನತು ಆದೇಶ ಬಳಿಕ ಪುನಃ ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಇಂದು ಅವರನ್ನು ಮರಳಿ ಗೌರವ ಧನ ಸೇವೆಗೆ ತೆರಳಲು ಇಲಾಖೆ ಆದೇಶಿಸಿದೆ.
ತಾಲೂಕು ಅಂಗನವಾಡಿ ಕಾರ್ಯಕರ್ತ ಸಹಾಯಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಜಯಪಾಲ್ ಕೋಟ್ಯಾನ್ ಅವರು ಇಲಾಖೆಯ ತಪ್ಪನ್ನು ಕಾರ್ಯಕರ್ತೆಯ ಮೇಲೆ ಹೊರಿಸಿ ಅಮಾಯಕಳನ್ನು ಅಮಾನತು ಮಾಡಿದ ಕಾರ್ಯವನ್ನು ಖಂಡಿಸಿದ್ದಾರೆ.













