
ನವದೆಹಲಿ: 8ನೇ ಬಾರಿ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಕಾಂಗ್ರೆಸ್ ಆಡಳಿತದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಾರಿಗೆ ತಂದಿರುವ ಉಚಿತ ಯೋಜನೆಗಳಿಗೆ ಹಣ ನೀಡಲು ಅಲ್ಲಿನ ಸರ್ಕಾರಗಳ ಬಳಿ ಹಣವಿಲ್ಲ. ಅವುಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ’ ಎಂದು ಟೀಕಿಸಿದ್ದಾರೆ.
‘ಇಂತಹ ಉಚಿತಗಳ ಘೋಷಣೆ ಮಾಡುವ ಮುನ್ನ ರಾಜ್ಯದ ಆರ್ಥಿಕ ಸಾಮರ್ಥ್ಯದ ಕುರಿತು ಅಧ್ಯಯನ ಮಾಡುವುದು ಅಗತ್ಯ. ಇಂತಹ ತಯಾರಿಯನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳು ಯೋಚನೆ ಮಾಡಿಯೇ ಉಚಿತ ಯೋಜನೆಗಳನ್ನು ಘೋಷಿಸುತ್ತವೆ. ಬಿಜೆಪಿ ಆಡಳಿತ ಇರುವ ಯಾವ ರಾಜ್ಯವನ್ನು ಬೇಕಾದರೂ ನೋಡಿ. ಚುನಾವಣೆ ಸಮಯದಲ್ಲಿ ಅವುಗಳು ಮಾಡುವ ಘೋಷಣೆಗಳು ಬಜೆಟ್‌ಗೆ ಅನುಗುಣವಾಗಿರುತ್ತವೆ. ಆದರೆ ಹಿಮಾಚಲ ಹಾಗೂ ಕರ್ನಾಟಕ ರಾಜ್ಯಗಳು ದೊಡ್ಡದೊಡ್ಡ ಭರವಸೆಗಳನ್ನು ನೀಡಿ, ಅವುಗಳನ್ನು ಈಡೇರಿಸಲು ಹೆಣಗಾಡುತ್ತಿವೆ. ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಯಲ್ಲೇ ಇದ್ದ ಕರ್ನಾಟಕ, ಹಿಮಾಚಲದಂಥ ರಾಜ್ಯಗಳು ಈಗ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ’ ಎಂದಿದ್ದಾರೆ.





















