
ಕಲಬುರಗಿ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ಕೊಡೋದಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರುಕಟ್ಟೆ ಪ್ರದೇಶಗಳಲ್ಲಿ ಜನೌಷಧಿ ಮಳಿಗೆಗಳು ಇರಲಿ, ನಾನು ಅದಕ್ಕೆ ವಿರೋಧಿಸೋದಿಲ್ಲ. ಆಸ್ಪತ್ರೆಗಳಿದ್ದಲ್ಲೇ ಯಾಕೆ ಇರಬೇಕು? ನಾವು ಬಡವರಿಗೆ ಎಲ್ಲಾ ಔಷಧಿಗಳನ್ನು ಉಚಿತ ಪೂರೈಸುವ ಸಂಕಲ್ಪ ಮಾಡಿದ್ದೇವೆ. ಮತ್ತೆ ಸರ್ಕಾರಿ ಆಸ್ಪತ್ರೆಗಳ ಅಂಗಳದಲ್ಲೇ ಜನೌಷಧಿ ಮಳಿಗೆ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮಲ್ಲಿಯೇ ಎಲ್ಲಾ ಔಷಧಿಗಳು ಸಂಪೂರ್ಣ ಉಚಿತವಾಗಿ ದೊರೆಯುವಾಗ ಖರೀದಿಸುವ, ಮಾರಾಟದ ಮಾತೇಕೆ? ನಮ್ಮಲ್ಲಿ ಸಿಗದಿರುವ ಔಷಧಿಗಳು ಖರೀದಿಸಬಹುದು ಎನ್ನುವ ಮಾತೇ ಇಲ್ಲ. ನಮ್ಮಲ್ಲಿಯೇ ಎಲ್ಲಾ ರೀತಿಯ ಔಷಧಿಗಳು ಉಚಿತವಾಗಿ ಸಿಗುತ್ತವೆ. ಸರ್ಕಾರಿ ಆಸ್ಪತ್ರೆ ವೈದ್ಯರು ಒಂದೇ ಒಂದು ಔಷಧಿ ಚೀಟಿ ಬರೆದು ಕೊಡುವಂತಿಲ್ಲ ಎಂದು ಹೇಳಿದರು.ಜನೌಷಧಿ ಕೇಂದ್ರದ ಮಳಿಗೆಗಳನ್ನು ಬೇಕಾದ್ರೆ ಮಾರ್ಕೆಟ್‌ಗಳಲ್ಲಿ ಹಾಕಿಕೊಳ್ಳಲಿ. ಈ ವಿಚಾರದಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಅಂತಹ ರಾಜಿ ಮಾಡಿಕೊಳ್ಳುವ ಚಿಲ್ಲರೆ ವ್ಯಕ್ತಿ ನಾನಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದರು.













