
ಬೆಂಗಳೂರು : ಇಂದು ಶಿವಾನಂದ ಸರ್ಕಲ್‌ನಲ್ಲಿ ನಿರ್ಮಾಪಕರ ಸಂಘದ ನೂತನ ಕಟ್ಟಡಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ನಟ ಹಾಗೂ ರಾಜಕಾರಣಿ ಜಗ್ಗೇಶ್ ಚಿತ್ರರಂಗದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಮಾತನಾಡಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಯತ್ನಗಳು ವ್ಯರ್ಥವಾಗುತ್ತಿದೆ. ಚಿತ್ರರಂಗದವರಲ್ಲಿ ಶಿಸ್ತು ಕಮ್ಮಿಯಾಗಿದೆ. ಮುಂಚೆ ಎಲ್ಲಾ ಸಿನಿಮಾ ಮಾಡಬೇಕಾದರೆ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳೋರು. ಬಜೆಟ್ ಲಿಸ್ಟ್ ರೆಡಿ ಮಾಡೋರು. ಈಗ ಹೀಗೆಲ್ಲಾ ಇಲ್ಲ. ಸಿನಿಮಾಗೆ ಭಾಷೆ ಇಲ್ಲದಂಗೆ ಆಗಿದೆ. ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್ ಇರಲ್ಲ. ಈ ನಡುವೆ ಇನ್ನೂ ದರ್ಶನ್ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ನೋ ರಿಯಾಕ್ಷನ್ ಎಂದು ಹೇಳಿದ್ದಾರೆ.
ಚಿತ್ರರಂಗದ ಕೆಲಸಗಳನ್ನು ಪಟ್ಟು ಹಿಡಿದು ಮಾಡಿಸಬೇಕು, ಸಿದ್ದರಾಮಯ್ಯ ಅವರು ಬಂದಾಗ ಹೇಳಿ ಸುಮ್ಮನಾಗುವುದಲ್ಲ, ಆಗಾಗ್ಗೆ ಹೋಗಿ ಅವರ ತಲೆ ನಿನ್ನುತ್ತಿರಬೇಕು, ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲಸದ ಭಾರ ತುಂಬಾ ಇರುತ್ತದೆ. ಒಟಿಟಿ ಎಂಬುದು ಒಳ್ಳೆಯ ಯೋಜನೆ. ಇದನ್ನು ಸರ್ಕಾರ ಮಾಡಿದ್ರೆ ಪ್ರಾಫಿಟ್ ತಂದು ಕೊಡುತ್ತದೆ. ಈಗಾಗಲೇ ಮಲ್ಟಿ ನ್ಯಾಷನಲ್ ಕಂಪನಿ ಮಾಡಿಕೊಂಡಿದೆ. ನಮ್ಮ ದುಡ್ಡು ಹೊರ ರಾಜ್ಯಕ್ಕೆ ಹೋಗ್ತಿದೆ ಎಂದು ಜಗ್ಗೇಶ್ ಹೇಳಿದರು.