
ನವದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿಯವರು ರಾಜ್ಯಸಭಾ ಸದಸ್ಯರಾಗಿ ರಾಜಕೀಯದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು ನಿನ್ನೆ ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ವೇಳೆ ಅವರು ಮಹಿಳೆಯರ ಆರೋಗ್ಯ ಹಾಗೂ ದೇಶಿಯ ಪ್ರವಾಸೋದ್ಯಮದ ಬಗ್ಗೆ ಉತ್ತೇಜಿಸುವ ಬಗ್ಗೆ ಮಾತನಾಡಿ ದೇಶದಲ್ಲಿ ಪ್ರತಿವರ್ಷ ಗರ್ಭಕಂಠದ ಕಾನ್ಸರ್‌ನಿಂದಾಗಿ ಸಾವಿರಾರು ಮಹಿಳೆಯರು ಉಸಿರು ಚೆಲ್ಲುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರದ ಪ್ರಾಯೋಜಕತ್ವದಲ್ಲಿ ಲಸಿಕೆ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡಿದರು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆಯೊಂದನ್ನು ಕೊಡಲಾಗುತ್ತದೆ. ಪ್ರಸ್ತುತ ಇದರ ಬೆಲೆ 1,400 ರೂಪಾಯಿ ಇದ್ದು, ಸರ್ಕಾರದ ಮಧ್ಯಪ್ರವೇಶದಿಂದ ಇದನ್ನು 700 ರಿಂದ 800ಕ್ಕೆ ಇಳಿಕೆ ಮಾಡಿದರೆ ಅನೇಕರಿಗೆ ಸಹಾಯವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ನಡೆಸಿದಂತೆ ಇದಕ್ಕೆ ಸಂಬಂಧಿಸಿದ ಲಸಿಕಾ ಕಾರ್ಯಕ್ರಮ ಆಯೋಜಿಸಬೇಕು ಎಂದು ಮನವಿ ಮಾಡಿದ್ದಲ್ಲದೆ ಇದರ ಜೊತೆಗೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಮನವಿ ಮಾಡಿದರು.
ಭಾರತದ 42 ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲಾಗಿದೆಯಾದರೂ 57 ಜಾಗಗಳಿಗೆ ಆ ಸ್ಥಾನ ಸಿಗುವುದು ಬಾಕಿಯಿದೆ. ಅವುಗಳ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಪ್ರವಾಸೋದ್ಯಮವನ್ನೂ ಉತ್ತೇಜಿಸಬೇಕು ಎಂದು ಹೇಳಿದರು.