
ಭುವನೇಶ್ವರ: ಭಾರತೀಯ ಹವಮಾನ ಇಲಾಖೆಯು ಭಾನುವಾರ ಎಚ್ಚರಿಕೆಯಿಂದಲೂ ನೀಡಿದ್ದು ಅದೇನೆಂದರೆ ಇದೇ ಅಕ್ಟೋಬರ್ 23ರ ವೇಳೆಗೆ ಮುಂಗಾರು ಮಳೆ ಋತುವಿನ ನಂತರ ಮೊದಲ ಉಷ್ಣವಲಯದ ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಡಾ. ಮೃತ್ಯುಂಜಯ ಮೊಹಾಪಾತ್ರ ಭಾನುವಾರ ಕೇಂದ್ರ ಅಂಡಮಾನ್ ಸಮುದ್ರದ ಮೇಲಿನ ಗಾಳಿಯ ಚಂಡಮಾರುತವು ಉತ್ತರ ಅಂಡಮಾನ್ ಸಮುದ್ರಕ್ಕೆ ಚಲಿಸಿದ್ದು ಇದರಿಂದಾಗಿ ಮುಂದಿನ 24 ಗಂಟೆಗಳಲ್ಲಿ ಪೂರ್ವ-ಮಧ್ಯ ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆ ಇದೆ.
ಅಕ್ಟೋಬರ್ 22ರ ವೇಳೆಗೆ ವಾಯುಭಾರ ಕುಸಿತ ತೀವ್ರಗೊಳ್ಳಲಿದ್ದು 23ರಂದು ಪೂರ್ವ ಮಧ್ಯ ಬಂಗಾಳಕೊಲ್ಲಿಯ ಮೇಲೆ ಚಂಡಮಾರುತವಾಗಿ ಆವರಿಸಬಹುದು. ತದನಂತರ ವಾಯುವ್ಯಕ್ಕೆ ಚಲಿಸಲಿದ್ದು ಅಕ್ಟೋಬರ್ 24ರ ವೇಳೆಗೆ ಓಡಿಸ್ಸಾ ಪಶ್ಚಿಮ ಬಂಗಾಳ ಕರಾವಳಿಯಿಂದ ವಾಯುವ್ಯ ಬಂಗಾಳಕೊಲ್ಲಿಯನ್ನು ತಲುಪುವ ನಿರೀಕ್ಷೆ ಇದೆ.
ಗಾಳಿಯ ವೇಗವು ಗಂಟಿಗೆ 120 ಕಿಲೋಮೀಟರ್ ತಲುಪಲಿದ್ದು ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡು ವಾಯುಭಾರ ಕುಸಿತವಾಗಿ ಬಲಗೊಂಡ ನಂತರ ಹೆಚ್ಚು ಸ್ಪಷ್ಟವಾಗಬಹುದು ಎಂದು ತಿಳಿಸಿದ್ದಾರೆ.













