
ಬೆಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಯೋಜನೆ ದುರುಪಯೋಗವಾಗುತ್ತಿರುವ ಹಿನ್ನೆಲೆ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಡಿ.ಕೆ. ಶಿವಕುಮಾರ್ ಮರು ಅರ್ಜಿ ಸಲ್ಲಿಕೆಗೆ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿದ ಬಳಿಕ 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರ ಖಾತೆಗಳಿಗೆ ಹಣ ಜಮೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ 1.94 ಲಕ್ಷ ಮಂದಿ ಮತ್ತು ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಖಾತೆಗಳೂ ಸೇರಿವೆ.
ಜಿಲ್ಲಾವಾರು ಪರಿಷ್ಕರಣೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, ಬಳಿಕ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳು ಸ್ಥಾನ ಪಡೆದಿವೆ.
ಈ ಕ್ರಮದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದ್ದು, ಮುಂದಿನ ದಿನಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

































