
ಮುಂಬೈ: ತಂದೆ ತಾಯಿಗಳಿಬ್ಬರೂ ಐಎಎಸ್ ಅಧಿಕಾರಿಗಳಾಗಿ ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ದಂಪತಿಯ ಮಗಳು ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯಗಳ ಸಮೀಪದ ಇರುವ ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾಳೆ.
ಐಎಎಸ್ ಅಧಿಕಾರಿಗಳಾದ ರಾಧಿಕಾ ರಸ್ತೋಗಿ ಹಾಗೂ ವಿಕಾಸ್ ರಸ್ತೋಗಿ ಅವರ ಪುತ್ರಿಯಾದ 27 ವರ್ಷದ ಲಿಪಿ ರಸ್ತೋಗಿ ಮಹಡಿಯಿಂದ ಕೆಳಗೆ ಬಿದ್ದಿದ್ದು ಆ ಕೂಡಲೇ ಆಕೆಯನ್ನು ಅಲ್ಲಿದ್ದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಪೊಲೀಸರು ಘಟನೆಯ ಬಳಿಕ ಆಕೆ ವಾಸವಿದ್ದ ಕೋಣೆಯಿಂದ ಪತ್ರವೊಂದನ್ನು ವಶಕ್ಕೆ ಪಡೆದಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂತಹ ಆಘಾತಕಾರಿ ನಿರ್ಧಾರ ಕೈಗೊಳ್ಳುವುದರ ಹಿಂದಿನ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
27 ವರ್ಷದ ಲಿಪಿ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆಯಲ್ಲಿ ತನ್ನ ಸಾಧನೆಯ ಬಗ್ಗೆ ಆಕೆಗೆ ಸಂತೃಪ್ತಿಯಿರಲಿಲ್ಲ, ಇದರಿಂದ ಆಕೆ ಅಸಮಾಧಾನಗೊಂಡಿದ್ದಳು. ಇತ್ತ ಆಕೆಯ ತಂದೆ ವಿಕಾಸ್ ರಸ್ತೋಗಿ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅಮ್ಮ ರಾಧಿಕಾ ರಸ್ತೋಗಿ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಆದರೆ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆದ ಇವರ ಪುತ್ರಿ ಹೀಗೆ ಜೀವನವನ್ನು ದುರಂತಮಯವಾಗಿ ಅಂತ್ಯಗೊಳಿಸಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.