
ಪುಣೆಯಲ್ಲಿ ವಿಶ್ವಗುರು ಭಾರತ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಎಲ್ಲೆಂದರಲ್ಲಿ ರಾಮ ಮಂದಿರದಂತಹ ವಿವಾದಗಳನ್ನು ಹುಟ್ಟುಹಾಕಬೇಡಿ. ಭಾರತವು ಎಲ್ಲಾ ಧರ್ಮಗಳು ಮತ್ತು ಸಿದ್ಧಾಂತಗಳ ಸಾಮರಸ್ಯದ ಸಹಬಾಳ್ವೆಗೆ ಮಾದರಿಯಾಗಬೇಕು ಎಂದು ಹೇಳಿದ್ದಾರೆ.
ತಮ್ಮ ತಪ್ಪುಗಳಿಂದ ಭಾರತೀಯರು ಪಾಠ ಕಲಿಯಬೇಕು, ವಿವಾದಾತ್ಮಕ ವಿಷಯಗಳನ್ನು ತಪ್ಪಿಸುವ ಮೂಲಕ ಒಳ್ಳೆಯತನಕ್ಕೆ ಮಾದರಿಯಾಗಬೇಕು. ಉಗ್ರವಾದ, ಆಕ್ರಮಣಶೀಲತೆ, ಬಲಪ್ರಯೋಗ ಮತ್ತು ಇತರರ ದೇವರನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಒತ್ತಿ ಹೇಳಿದ್ದಾರೆ.
ಈ ದೇಶದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಪೂಜಾ ವಿಧಾನವನ್ನು ಅನುಸರಿಸುತ್ತಿದ್ದು ಭಾರತ ವಿಶ್ವಕ್ಕೆ ಮಾದರಿಯಾಗಬೇಕು, ವಿಭಿನ್ನ ಧರ್ಮಗಳು ಮತ್ತು ಸಿದ್ಧಾಂತಗಳು ವಿವಾದಗಳಿಲ್ಲದೆ ಹೇಗೆ ಒಟ್ಟಿಗೆ ಬದುಕುತ್ತವೆ ಎಂಬುದನ್ನು ನಾವು ತೋರಿಸಬೇಕು ಎಂದು ಸಲಹೆ ನೀಡಿದರು.