
ಉಡುಪಿ: ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಯುವಕನೋರ್ವ ಯುವತಿಗೆ ಚೂರಿ ಇರಿದ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಶುಕ್ರವಾರ (ಸೆ.12) ನಡೆದಿದೆ.
ಸಂತ್ರಸ್ಥ ಯುವತಿಯನ್ನು ಕೊಕ್ಕರ್ಣೆ ಚೆಗ್ರಿಬೆಟ್ಟು ನಿವಾಸಿ ರಕ್ಷಿತಾ (24 ವ) ಎಂದು ಗುರುತಿಸಲಾಗಿದೆ. ಆಕೆಯ ನೆರೆ ಮನೆಯಾತ ಆರೋಪಿ.
ಪ್ರೀತಿಯ ವಿಚಾರದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ರಕ್ಷಿತಾಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆಕೆಯ ಮನೆಯವರು ನಿರಾಕರಿಸಿದ್ದರು. ರಕ್ಷಿತಾ ಕೂಡಾ ಆತನನ್ನು ಬ್ಲಾಕ್ ಮಾಡಿದ್ದಳು.
ಇದರಿಂದ ಕುಪಿತಗೊಂಡಿದ್ದ ಆರೋಪಿಯು ರಕ್ಷಿತಾ ಇಂದು ಬೆಳಗ್ಗೆ ಕೆಲಸಕ್ಕೆಂದು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬಂದು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಹುಟ್ಟಿದ ದಿನದಂದೇ ಆಕೆಯ ಕುತ್ತಿಗೆ ಮತ್ತು ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ ಮತ್ತು ಎದೆಯ ಸುತ್ತ ಬಲ ಮತ್ತು ಎಡ ಪಕ್ಕೆಲುಬಿನ ಪ್ರದೇಶದಲ್ಲಿ ಇರಿತದ ಗಾಯವಾಗಿದೆ. ಅಲ್ಲೆ ಕುಸಿದು ಬಿದ್ದ ಆಕೆಯನ್ನು, ಸದ್ಯ ಆಕೆಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













