
ಉಡುಪಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅವರು ನಗರದ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಈ ವೇಳೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿದಾರರು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಆದೇಶ 2025 ನಿಯಮದನ್ವಯ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳು, ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿದಾರರು ನೀಡುವ ದುಬಾರಿ ಬಡ್ಡಿಗಳಿಂದ ಜನರು ತೊಂದರೆಗಳಿಗಾಗುವುದರ ಜೊತೆಗೆ ಕೆಲವು ಸಂಸ್ಥೆಗಳು ಬಲವಂತವಾಗಿ ವಸೂಲಾತಿ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು, ಆರ್ಥಿಕ ದುರ್ಬಲರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸುವ ಪ್ರಕರಣಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ನಿಯಂತ್ರಣಕ್ಕೆ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಆದೇಶ 2025 ಜಾರಿಗೆ ಬಂದಿದ್ದು ಇದರ ಅನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳು 30 ದಿನಗಳ ಒಳಗೆ ಸೂಕ್ತ ಪ್ರಾಧಿಕಾರದ ಮುಂದೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.