ಭ್ರಮೆಯ ಪರೆ ಕಳಚಿದಾಗ ಮಾತ್ರ ನೈಜತೆಯ ಅನಾವರಣ…
ಪ್ರಜ್ವಲಾ ಶೆಣೈ, ಕಾರ್ಕಳ

ಅಬ್ಬಬ್ಬಾ! ಎಂತೆಂಥಾ ಜನರಿರುತ್ತಾರೆ ನಮ್ಮ ಸುತ್ತ ಮುತ್ತ. ನಾವೇನೇ ಮಾಡಿದ್ರು,ಅದರ ಬಗ್ಗೆ ಒಂದು ಕೊಂಕು ಮಾತು ಇದ್ದೇ ಇರುವುದು.ನಮ್ಮದೇ ಮನೆಗಳಲ್ಲಿ,ಸಮಾಜದಲ್ಲಿ,ಉದ್ಯೋಗದ ಸ್ಥಳಗಳಲ್ಲಿ ಇಂತಹದ್ದೊಂದು ಅನುಭವ ಎಲ್ಲರಿಗೂ ಆಗಿಯೇ ಇರುತ್ತದೆ.ಆಗೆಲ್ಲಾ ಮನಸ್ಸಿಗೆ ಕಿರಿ ಕಿರಿ ಅನ್ನಿಸಿ ದಿನವಿಡೀ ಮನಸ್ಸಿನಲ್ಲೇನೂ ತಳಮಳ.ಯಾಕೆ ಹೀಗಾಯಿತು? ಎನ್ನುವ ಕಾರಣ ಹುಡುಕಿ ಹುಡುಕಿ ಹತಾಶರಾಗುತ್ತೇವೆ. ನಾವಿಟ್ಟ ಹೆಜ್ಜೆ ಸರಿ ಇದೆಯೇ? ಎಂದು ಮತ್ತೆ ಮತ್ತೆ ಪರೀಕ್ಷಿಸಿ ಕೊಳ್ಳುತ್ತೇವೆ.ಒಳಮನಸ್ಸು ಸರಿ ತಪ್ಪುಗಳ ತಕ್ಕಡಿ ಹಿಡಿದು ಅಳೆದು ತೂಗಿದರೂ ಪರಿಹಾರವಂತೂ ಸಿಗುವುದಿಲ್ಲ. ಇದೆಲ್ಲಾ ಗೋಜಲುಗಳಿಂದ ದೂರ ಹೋಗಬೇಕೆಂದರೂ ಸಾಧ್ಯವಾಗದು.ಜೇಡರ ಬಲೆಯಲ್ಲಿ ಸಿಲುಕಿದ ಜೀವವೊಂದು ಬಿಡಿಸಿ ಕೊಳ್ಳಲಾಗದೆ ಒದ್ದಾಡುವಂತೆ ಸಿಕ್ಕು ಸಿಕ್ಕಾದ ಮನಸ್ಸಿನ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತೇವೆ.
ಬದುಕು ಕಲಿಸುವ ಪಾಠ
ಬದುಕು ಎಂಬ ಮೂರಕ್ಷರದ ಪದ ಒಬ್ಬೊಬ್ಬರಿಗೆ ಒಂದೊಂದು ಪಾಠ ಕಲಿಸುತ್ತದೆ.ಅನುಭವದಿಂದ ಕಲಿತ ಪಾಠ ದೊಡ್ಡದು.ಇದು ಯಾವ ಪದವಿಯಲ್ಲಿಯೂ ಸಿಗದು.ಬದುಕೇ ಬೇಡ ಎಂದು ಕುಗ್ಗಿ ಹೋದಾಗ,ಕಾದು ಬಸವಳಿದ ನೆಲಕ್ಕೆ ತಂಪೆರೆಯುವ ಮಳೆಯಂತೆ ಮತ್ತೆ ಬದುಕುವ ಆಸೆ ಹುಟ್ಟಿಸುವುದು ಈ ಬದುಕೇ, ಮತ್ತೆ ಜೀವನೋತ್ಸಾಹ ಪುಟಿಯುವಂತೆ ಮಾಡುವುದು ಈ ಬದುಕೇ,ನಮ್ಮ ಓಡುವ ವೇಗಕ್ಕೆ ತಡೆ ಒಡ್ಡಿ ನಿಧಾನ ನಡೆಯುವಂತೆ ಮಾಡುವುದು ಈ ಬದುಕೇ.
ನಾವೆಣಿಸಿದಂತೆ ನಮ್ಮ ಜೀವನದಲ್ಲಿ ನಡೆದಾಗ ಒಂದೇ ಯಶಸ್ಸಿಗೆ ಬೀಗುತ್ತೇವೆ.ನಮ್ಮ ಲೆಕ್ಕಾಚಾರಗಳು ತಲೆ ಕೆಳಗಾದಾಗ ಒಂದೇ ಸೋಲಿಗೆ ಎದೆಗುಂದಿ ಬದುಕಿನ ಬಗ್ಗೆ ಜಡತ್ವ ಮೂಡಿಸಿ ಕೊಳ್ಳುತ್ತೇವೆ.ಜೀವನವನ್ನು ಅರ್ಥ ಮಾಡಿ ಕೊಳ್ಳಲು ಈ ಜನ್ಮವಿಡೀ ದೊರೆತರೂ ಸಾಲದು.ನಮ್ಮ ಬದುಕಿನ ಹಳೆಯ ಅಧ್ಯಾಯಗಳನ್ನು ತಿರುಗಿಸಿ ನೋಡದೇ ಇನ್ನೊಬ್ಬರ ಜೀವನದ ಪುಟಗಳನ್ನು ತಿರುವಿ ನೋಡುವುದರಲ್ಲಿಯೇ ಕಾಲ ಕಳೆಯುತ್ತೇವೆ.ಆದರೆ ಒಂದು ಕ್ಷಣ ಯೋಚಿಸಿ,ಬೇರೆಯವರ ಬಗ್ಗೆ ಯೋಚಿಸುತ್ತಾ ಕಾಲಹರಣ ಮಾಡುವ ಬದಲು ನಮ್ಮ ತಪ್ಪಿನಿಂದ ಪಾಠ ಕಲಿತು ಸನ್ಮಾರ್ಗದಲ್ಲಿ ನಡೆಯಬಹುದಲ್ಲವೇ? ಮತ್ತೆ ಹೊಸ ದಿನವನ್ನು ಸ್ವಾಗತಿಸುವಾಗ ಹಳೆಯ ಕಹಿ ದಿನಗಳನ್ನು ಕನಸಿನಂತೆ ಮರೆತು ಬಿಡಬೇಕು.ಹೊಸ ಆರಂಭವನ್ನು ಹೊಸತನದೊಂದಿಗೆ ಸ್ವಾಗತಿಸಬೇಕು.
ನಾನು ಎಂಬ ಭ್ರಮೆ…..
ಅದೆಷ್ಟೋ ಬಾರಿ ನಮ್ಮನ್ನು ನಾವು ಅರ್ಥೈಸಿಕೊಳ್ಳಲು ಸೋಲುತ್ತೇವೆ. ನಾವೆಂದರೆ ಹಲವರಿಗೆ ತುಂಬಾ ಇಷ್ಟ,ನನ್ನನ್ನು ಎಲ್ಲರೂ ಮೆಚ್ಚುತ್ತಾರೆ,ಎನ್ನುವ ಭ್ರಮೆಯಲ್ಲಿ ನಾವಿರುತ್ತೇವೆ. ಭ್ರಮಾಲೋಕದಲ್ಲಿ ತೇಲುತ್ತಾ ಇದ್ದರೆ ನಮ್ಮತನ ಅರಿವಾಗುವುದೇ ಇಲ್ಲ.ನಮ್ಮ ಮೇಲಿನ ಇಷ್ಟಗಳು ಹಲವಾರು ನಿರೀಕ್ಷೆಗಳೆಂಬ ಮಹಾನ್ ಪರೀಕ್ಷೆಗೆ ನಮ್ಮನ್ನು ಒಡ್ಡುತ್ತವೆ.ತಮಗೆ ಬೇಕಾದದ್ದು ಸಾಧಿಸುವ ತನಕ ಮಾತ್ರ ನಮ್ಮ ಅಗತ್ಯತೆ ಇರುತ್ತದೆ.ಹೀಗಾಗಿ ನಮ್ಮ ಬಗ್ಗೆ ನಮಗಿರುವ ವಿಪರೀತ ಸ್ವ ಅಭಿಮಾನ,ಆಘಾತಕ್ಕೆ ಕಾರಣವಾಗಬಹುದು.ಭ್ರಮೆಯ ಪರೆ ಕಳಚಿದಾಗ ಮಾತ್ರ ನೈಜತೆಯ ಅನಾವರಣವಾಗುವುದು.
ತಪ್ಪು ಎಂಬ ಕಪ್ಪು ಚುಕ್ಕಿ….
ತಪ್ಪು ,ಸರಿ ಎರಡೂ ಬದುಕಿನ ಎರಡು ಮುಖಗಳು.ಮುಖದ ಕಪ್ಪು ಕಲೆಯನ್ನು ಅಳಿಸಲು ನೂರು ದಾರಿ ಹುಡುಕುವ ನಾವು ಮನಸ್ಸಿನ ಕಪ್ಪು ಕಲೆಯನ್ನು ಅಳಿಸಲು ಒಮ್ಮೆಯಾದರೂ ಯೋಚಿಸಬೇಕಲ್ಲವೇ? ನಮ್ಮ ಸಣ್ಣ ಸಣ್ಣ ತಪ್ಪನ್ನೇ ದೊಡ್ಡದಾಗಿ ಬಿಂಬಿಸಿ ಹೀಯಾಳಿಸಿ ವಿಕೃತ ಖುಷಿ ಪಡುವವರು ಇರುತ್ತಾರೆ.ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ತಪ್ಪು ಮಾಡಿಯೇ ಮಾಡಿರುತ್ತೇವೆ.ಆದರೆ ನಮ್ಮ ತಪ್ಪುಗಳು ನಮ್ಮ ಬೆನ್ನಿದ್ದಂತೆ ,ನಮಗೆ ಕಾಣಿಸುವುದಿಲ್ಲ.ಬೇರೆಯವರ ತಪ್ಪುಗಳು ಬೇಗ ಗಮನಕ್ಕೆ ಬರುವುದು.ಇತರರ ಚಿಕ್ಕ ಚಿಕ್ಕ ತಪ್ಪುಗಳನ್ನು ಬೆಟ್ಟು ಮಾಡುವ ನಾವು ಸೋತದ್ದು ಎಲ್ಲಿ ಎನ್ನುವ ಅರಿವು ನಮಗಾಗುವುದೇ ಇಲ್ಲ.ಸಣ್ಣ ಪುಟ್ಟ ಕಾರಣಗಳಿಗಾಗಿ ಎಲ್ಲರನ್ನೂ ದೂರ ಮಾಡಿಕೊಳ್ಳುತ್ತೇವೆ.ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಮೊದಲು ನಾವು ಸರಿಯಾಗಿದ್ದೇವೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿ ಕೊಳ್ಳಬೇಕು.ದೂರುಗಳು ಹೆಚ್ಚಾದಂತೆ ಮನಸ್ಸು ಭಾರವಾಗಿ ಮನಸ್ಸಿನ ಒಳಗೊಂದಿಷ್ಟು ಗೋಡೆಗಳು ರೂಪುಗೊಳ್ಳುತ್ತವೆ.ನಮ್ಮ ಭಾವನೆಗಳ ನಡುವೆ ಕಟ್ಟಿದ ಅಹಂಕಾರವೆಂಬ ಗೋಡೆಯನ್ನು ಒಡೆಯದ ಹೊರತು ನಮ್ಮ ಬದುಕು ಹಸನಾಗದು. ನಮ್ಮ ವರ್ತನೆ, ಹಠ, ಸೇಡು ನಮ್ಮ ಸುಂದರವಾದ ನಾಳೆಯನ್ನು ಕಸಿದು ಕೊಳ್ಳಬಾರದು.ನಮ್ಮ ಇಂದಿನ ವರ್ತನೆ ಭವಿಷ್ಯದ ಕನಸಿಗೆ
ಮುನ್ನುಡಿಯಾಗಲಿ,ಹೊಸ ಕನಸು ಹಳೆಯ ವೈಷಮ್ಯ ಗಳನ್ನೆಲ್ಲಾ ಹೊಡೆದೋಡಿಸಲಿ.ಅಲ್ಲವೇ?…
