
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿಯ ಸಿ.ಟಿ.ರವಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು ಪ್ರಕರಣ ಸಂಬಂಧ ಸಿ.ಟಿ.ರವಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಿ.ಟಿ.ರವಿ ಈ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿದ ಹೈಕೋರ್ಟ್ ಈ ಮಧ್ಯೆ, ಸಿಐಡಿ ತಂಡ ತನಿಖೆ ಭಾಗವಾಗಿ ಸ್ಥಳ ಮಹಜರಿಗೆ ಮತ್ತೊಮ್ಮೆ ಪ್ರಯತ್ನ ನಡೆಸಲು ಮುಂದಾಗಿದೆ. ಇದಕ್ಕೆ ಸಭಾಪತಿಗಳು ಕೋಪಗೊಂಡಿದ್ದು ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ಒಪ್ಪಿಸಿ ಆದೇಶಿಸಿದ್ದಾರೆ.
ನ್ಯಾಯಾಲಯಕ್ಕೂ ಸಹ ಶಾಸಕಾಂಗಕ್ಕೆ ಆದೇಶ ನೀಡುವ ಅಧಿಕಾರ ಇಲ್ಲ. ಇಂತಹದರಲ್ಲಿ ನೀವು ಯಾವ ಆಧಾರದ ಮೇಲೆ ಸಿಐಡಿ ತನಿಖೆ ಪ್ರಕರಣ ನೀಡಿದ್ದೀರಿ? ಯಾವ ರೀತಿ ಸ್ಥಳ ಮಹಜರು ಮಾಡುತ್ತೀರಿ ಅಂತ ಸಿಐಡಿಗೆ ಪ್ರಶ್ನೆ ಮಾಡಿದಾಗ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಸದನ ಎಥಿಕ್ಸ್ ಕಮಿಟಿಗೆ ಪ್ರಕರಣ ವರ್ಗಾವಣೆ ಮಾಡಿದ್ದೇನೆ ಎಂದು ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.





















