
ಅಯೋಧ್ಯೆ: ತಿರುಪತಿ ಲಡ್ಡು ತಯಾರಿಕೆಯಲ್ಲಿ ತುಪ್ಪ ಕಲಬೆರಕೆ ವಿವಾದದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಹೊರಗಿನಿಂದ ಬರುವ ಪ್ರಸಾದಗಳನ್ನು ದೇವರಿಗೆ ಅರ್ಪಿಸುವುದನ್ನು ನಿಷೇಧಿಸಲಾಗಿದೆ.
ಜತೆಗೆ ದೇವಾಲಯಗಳಲ್ಲಿ ಅಲ್ಲಿನ ಅರ್ಚಕರ ಮೇಲ್ವಿಚಾರಣೆಯಲ್ಲೇ ಪ್ರಸಾದವನ್ನು ತಯಾರಿಸಬೇಕು ಎಂದು ಕೋರಿದ್ದಲ್ಲದೇ ಎಲ್ಲ ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳಲ್ಲಿ ಹೊರಗಿನಿಂದ ತಂದ ಪ್ರಸಾದಗಳನ್ನು ದೇವರಿಗೆ ಅರ್ಪಿಸಲು ಸಂಪೂರ್ಣ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಈ ಕುರಿತು ಮಾತನಾಡಿ “ತಿರುಪತಿ ಪ್ರಸಾದದಲ್ಲಿ ಕೊಬ್ಬು ಬಳಕೆಯಾದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಕ್ತರು ಹಾಗೂ ಧಾರ್ಮಿಕ ಮುಖಂಡರು ಇದನ್ನು ಖಂಡಿಸಿದ್ದು, ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ದೇಶದಲ್ಲಿ ಮಾರಾಟವಾಗುತ್ತಿರುವ ತುಪ್ಪ ಹಾಗೂ ಎಣ್ಣೆಯ ಶುದ್ಧತೆ ಬಗ್ಗೆಯೂ ಸರಕಾರ ಪರೀಕ್ಷೆ ನಡೆಸಬೇಕು ಎಂದ ಅವರು, ದೇಶದ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.













