
ಕಾನ್ಪುರ: “ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತಿದ್ದೇನೆ. ನಿಮಗೆ ಅಭಿನಂದನೆಗಳು…” ಎಂಬ ಮನಕಲಕುವ ಸಾಲುಗಳನ್ನು ಬರೆದು 23 ವರ್ಷದ ಯುವ ವಕೀಲ ಪ್ರಿಯಾಂಶು ಶ್ರೀವಾಸ್ತವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್‌ನೋಟ್ ಮತ್ತು ವಾಟ್ಸಾಪ್ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರ ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ತಂದೆಯ ಕಠಿಣ ನಡವಳಿಕೆ ಮತ್ತು ನಿರಂತರ ಮಾನಸಿಕ ಒತ್ತಡದಿಂದ ಬೇಸತ್ತ ಪ್ರಿಯಾಂಶು, ಕಾನ್ಪುರ ನ್ಯಾಯಾಲಯದ ಐದನೇ ಮಹಡಿಯಿಂದ ಜಿಗಿದು ಜೀವತ್ಯಾಗ ಮಾಡಿದ್ದಾರೆ. ಘಟನೆ ವೇಳೆ ಅವರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ಪ್ರಿಯಾಂಶು ತಮ್ಮ ಡೆತ್‌ನೋಟ್‌ನಲ್ಲಿ ಬಾಲ್ಯದಿಂದಲೇ ಅನುಭವಿಸಿದ ಕಿರುಕುಳವನ್ನು ವಿವರಿಸಿದ್ದಾರೆ. “ನನಗೆ ಆರು ವರ್ಷವಿದ್ದಾಗ ಫ್ರಿಡ್ಜ್‌ನಿಂದ ಜ್ಯೂಸ್ ಕುಡಿದ ಕಾರಣಕ್ಕೆ ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಹಾಕಿದ್ದರು. ಪೋಷಕರು ಶಿಸ್ತು ಕಲಿಸಬೇಕು, ಆದರೆ ಅದು ಮಕ್ಕಳಿಗೆ ಉಸಿರುಗಟ್ಟುವಂತಿರಬಾರದು” ಎಂದು ಅವರು ಹೇಳಿದ್ದಾರೆ.
ಇನ್ನು, ತಮ್ಮ ಆಸಕ್ತಿಯ ದೈಹಿಕ ಶಿಕ್ಷಣ ವಿಷಯವನ್ನು ಓದಲು ಅವಕಾಶ ನೀಡದೇ, ಕಂಪ್ಯೂಟರ್ ಸೈನ್ಸ್ ಓದಲು ತಂದೆ ಒತ್ತಾಯಿಸಿದ್ದರೆಂದು ಆರೋಪಿಸಿರುವ ಪ್ರಿಯಾಂಶು “ನಾನು ಯಾರ ಜೊತೆ ಮಾತನಾಡುತ್ತೇನೆ, ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ಸದಾ ಪ್ರಶ್ನಿಸುತ್ತಿದ್ದರು. ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರು. ಇಂತಹ ಬದುಕಿಗಿಂತ ಸಾವು ಮೇಲು” ಎಂದು ಅವರು ನೋವನ್ನು ವ್ಯಕ್ತಪಡಿಸಿದ್ದಾರೆ.
“ನನ್ನ ಸಾವಿನ ನಂತರ ತಂದೆ ನನ್ನ ಶವವನ್ನು ಮುಟ್ಟಬಾರದು. ಆದರೆ ಕುಟುಂಬಕ್ಕೆ ತೊಂದರೆ ಆಗಬಾರದು ಎಂದು ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬೇಡಿ” ಎಂದು ಅವರು ಕೊನೆಯ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ, “ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ, ಅವರಿಗೆ ತಮ್ಮ ಇಷ್ಟದಂತೆ ಬದುಕಲು ಅವಕಾಶ ನೀಡಿ” ಎಂದು ಪೋಷಕರಿಗೆ ಸಂದೇಶ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ನ್ಯಾಯಾಲಯ ಆವರಣದಲ್ಲಿ ನಡೆದ ಈ ಘಟನೆ ವಕೀಲರ ವಲಯದಲ್ಲಿ ದುಃಖದ ವಾತಾವರಣವನ್ನು ಮೂಡಿಸಿದೆ.













