
ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ಅಶೋಕ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .

ವಿದ್ಯಾರ್ಥಿಗಳಾದ ಪಲ್ಲವಿ,ಕವನ ಹಾಗೂ ದೀಪಿಕಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಹಿರಿಯ ಉಪನ್ಯಾಸಕಿ ಡಾ.ಸುಮತಿ ಪಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಮೋಹನ್ ದಾಸ್ ಜಿ ಪ್ರಭುರವರು ಉಪಸ್ಥಿತರಿದ್ದು ವಿದ್ಯಾಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಶುಭ ಹಾರೈಸಿದರು .ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿದಂತಹ ಸಾಣೂರಿನ ಶ್ರೀ ನರಸಿಂಹ ಕಾಮತ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿಜ್ಞಾ ವಿಧಿಯಲ್ಲಿ ಉಲ್ಲೇಖಿಸಿದಂತೆ ವಿದ್ಯಾರ್ಥಿಗಳು ಸಂವಿಧಾನದ ಆಶಯಕ್ಕೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ವಿದ್ಯಾ ಸಂಸ್ಥೆಯ ನೀತಿ ನಿಯಮಗಳಿಗೆ ಬದ್ಧರಾಗಿ ನಡೆದುಕೊಂಡು, ವಿದ್ಯಾಭ್ಯಾಸವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ ಕಾಲೇಜಿಗೆ ಪ್ರಥಮ ಸ್ಥಾನಿಯಾದ ವಾಣಿಜ್ಯ ವಿಭಾಗದ ವಿರೇಂದ್ರ ಜೈನ್, ದ್ವಿತೀಯ ಸ್ಥಾನ ಪಡೆದ ಕಲಾ ವಿಭಾಗದ ಸೌಮ್ಯ ಆಚಾರ್ಯ, ತೃತೀಯ ಸ್ಥಾನ ಪಡೆದ ವಾಣಿಜ್ಯ ವಿಭಾಗದ ಸಮೀಕ್ಷ ಹಾಗೂ ಕಲಾ ವಿಭಾಗದ ಸೌಮ್ಯ ಆಚಾರ್ಯ, ವಿಜ್ಞಾನ ವಿಭಾಗದಿಂದ ಮಾನಸ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೃತಜ್ಞತೆ ಸೂಚಿಸಿದರು.ವೇದಿಕೆಯಲ್ಲಿ ಕೊಡುಗೈ ದಾನಿಗಳಾದ,ವಿದ್ಯಾಭಿಮಾನಿಗಳೂ ಆದ ಶ್ರೀಯುತ ಪ್ರಶಾಂತ್ ಕಾಮತ್, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸುಚೇತಾ ಕಾಮತ್,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ಹಾಗೂ ಅಣ್ಣಿಮೇರ ಉಪಸ್ಥಿತರಿದ್ದರು.
ಇತಿಹಾಸ ಉಪನ್ಯಾಸಕಿ ಶ್ರೀಮತಿ ಸೀಮಾ ರೈ ಹಾಗೂ ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರೇಮಮ್ಮ ಆರ್ ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.ಅತಿಥಿ ಗಣ್ಯರೆಲ್ಲ ಸೇರಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 34 ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ತ್ರೋಬಾಲ್, ವಾಲಿಬಾಲ್ ಹಾಗೂ ಕಬಡ್ಡಿಯಲ್ಲಿ ತರಬೇತಿ ನೀಡಿದ ಎಂ ಪಿ ಎಂ ಕಾಲೇಜಿನ ದೈಹಿಕ ಶಿಕ್ಷಣಾಧಿಕಾರಿ ಡಾ.ಜಯಭಾರತಿಯವರ ಪರವಾಗಿ ಶ್ರೀ ಚಂದ್ರಶೇಖರ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಜಗದೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ ನರೇಶ್ ಆಚಾರಿ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













