
ಕಾರ್ಕಳ: ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ನಿಯಂತ್ರಣ ಮಾಹಿತಿ ಕಾರ್ಯಕ್ರಮ ಕಾಲೇಜಿನ ಐ.ಕ್ಯೂ.ಎ.ಸಿ ಯ ಸಹಯೋಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ವತಿಯಿಂದ ಪ್ರಥಮ ಪದವಿಯ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ತಾಲೂಕಿನ ಆರೋಗ್ಯಾಧಿಕಾರಿಗಳಾದ ಶ್ರೀ ಸಂದೀಪ್ ಕುಡ್ವ ಮಾತನಾಡಿ, ಜನಸಂಖ್ಯಾ ನಿಯಂತ್ರಣ ಏರುಪೇರಾದಾಗ ಪರಿಸರದಿಂದ ಹಿಡಿದು ಎಲ್ಲದಕ್ಕೂ ತೊಂದರೆಯಾಗುತ್ತದೆ. ಜನಸಂಖ್ಯೆ ಹೆಚ್ಚಾದಾಗ ಸಹಜವಾಗಿ ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ. ಇದು ಆರ್ಥಿಕತೆಗೆ ಪೆಟ್ಟು ಕೊಡುತ್ತದೆ. ಜನಸಂಖ್ಯಾ ನಿಯಂತ್ರಣದ ಜೊತೆಗೆ ಗಂಡು ಹೆಣ್ಣಿನ ಅನುಪಾತದಲ್ಲಿಯೂ ವ್ಯತ್ಯಾಸ ಆದಾಗ ಬೇರೆ ಬೇರೆ ರೀತಿಯ ಸಮಸ್ಯೆಗಳು ಆರಂಭಗೊಂಡು ಬಡತನ, ನಿರುದ್ಯೋಗ, ಅನಾರೋಗ್ಯ ತಾಂಡವವಾಡಿ ಇಡೀ ಭಾರತದ ಆರ್ಥಿಕ ಸ್ಥಿತಿ ಏರುಪೇರಾಗಿಬಿಡುವ ಸಾಧ್ಯತೆ ಇರುತ್ತದೆ. ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಅದು ಸಮಾಜಕ್ಕೆ ಹೊರೆಯಾಗಿಬಿಡುತ್ತದೆ. ಮುಂದಿನ ತಲೆಮಾರಿಗೆ ನಾವು ಆರೋಗ್ಯವಂತ ಜೀವನದ ಮಾದರಿಯನ್ನು ದಾಟಿಸುವ ಅಗತ್ಯ ಇದೆ. ಜನಸಂಖ್ಯೆಯಲ್ಲಿ ನಿಯಂತ್ರಣ, ತಾಯಿ ಮಗುವಿನ ಆರೋಗ್ಯ ಕಾಳಜಿ, ಬಡತನ, ನಿರುದ್ಯೋಗ ಇವೆಲ್ಲವೂ ದೂರಾಗಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ನಿಮ್ಮ ಭವಿಷ್ಯದ ದಿನಗಳಲ್ಲಿ ಈ ಕುರಿತ ಮಾಹಿತಿ ಅಗತ್ಯವಾಗಿ ಬೇಕು. ಅದನ್ನು ಒದಗಿಸುವ ಕೆಲಸ ಆರೋಗ್ಯ ಕೇಂದ್ರಗಳಿಂದ ನಡೆಯುತಿದೆ. ಈ ಮಾಹಿತಿಯನ್ನು ನೀವು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಶೀಲ ಕೆ, ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ. ಉಪಸ್ಥಿತರಿದ್ದರು. ರಾ. ಸೇ. ಯೋ. ಅಧಿಕಾರಿಯಾದ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.






















































