
ಬೆಂಗಳೂರು: ಅಮೆರಿಕಾ–ಇರಾನ್ ಸಂಘರ್ಷದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು. ಆದರೆ ಜುಲೈ 1ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ 183.50 ರೂ. ಇಳಿಕೆ ಮಾಡಲಾಗಿದ್ದು, ಹೋಟೆಲ್ ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಸ್ವಲ್ಪ ನಿರಾಳತೆ ಸಿಕ್ಕಂತಾಗಿದೆ.
ಈ ವರ್ಷದ ಆರಂಭದಲ್ಲಿ ಇರಾನ್ ಪ್ರದೇಶದಲ್ಲಿ ನಡೆದ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಗೆ ಹೊಡೆತ ನೀಡಿತ್ತು. ಅದರ ಪರಿಣಾಮವಾಗಿ ಕಚ್ಚಾ ತೈಲ ಹಾಗೂ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ದೇಶಗಳಲ್ಲಿ ಇಂಧನ ಮತ್ತು ಗ್ಯಾಸ್ ದರಗಳು ಏರಿಕೆ ಕಂಡಿದ್ದವು. ಕಳೆದ ಜೂನ್ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,198 ರೂ.ಗೆ ತಲುಪಿದ್ದರೆ, ಈಗ ಅದು 3,021 ರೂ.ಗೆ ಇಳಿಕೆಯಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ಇಂಧನ ಪೂರೈಕೆ ಸಮಸ್ಯೆಯ ಬಳಿಕ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ದರವನ್ನು ಹಲವು ಹಂತಗಳಲ್ಲಿ ಏರಿಸಲಾಗಿತ್ತು. ಮಾರ್ಚ್ನಲ್ಲಿ 144 ರೂ., ಏಪ್ರಿಲ್ನಲ್ಲಿ 195.50 ರೂ., ಮೇನಲ್ಲಿ 993 ರೂ. ಹಾಗೂ ಜೂನ್ನಲ್ಲಿ 42 ರೂ. ಹೆಚ್ಚಳ ಮಾಡಿ ಒಟ್ಟು 1,374.50 ರೂ. ಏರಿಕೆ ಮಾಡಲಾಗಿತ್ತು.
ಇದರ ಜೊತೆಗೆ, ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರವೂ ಎರಡು ಹಂತಗಳಲ್ಲಿ ಒಟ್ಟು 89 ರೂ. ಹೆಚ್ಚಳ ಕಂಡಿತ್ತು. ಮಾರ್ಚ್ನಲ್ಲಿ 60 ರೂ. ಹಾಗೂ ಜೂನ್ನಲ್ಲಿ 29 ರೂ. ಹೆಚ್ಚಿಸಲಾಗಿತ್ತು.








































