
ಬೀದರ್: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆಯ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಕಠಿಣ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದು ಗೊಬ್ಬರ ಮಾರಾಟ ಮಾಡಿದರೆ ಸಂಬಂಧಿಸಿದವರ ಲೈಸೆನ್ಸ್ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಎಪಿ ಗೊಬ್ಬರದ ಕೊರತೆ ನಿವಾರಣೆಗೆ ಬಫರ್ ಸ್ಟಾಕ್ನಿಂದ ಪೂರೈಕೆ ಮಾಡಬೇಕು ಹಾಗೂ ಗೊಬ್ಬರ ಮಾರಾಟದ ವಿವರಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.
ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಹೇಳಿದ ಸಚಿವರು, ಕೃಷಿ ಇಲಾಖೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಸಮಸ್ಯೆ ಮುಂದುವರಿದರೆ ಕೃಷಿ ಸಹಾಯಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹಿಂದೆಯೂ ಇದೇ ವಿಷಯವಾಗಿ ಸೂಚನೆ ನೀಡಿದ್ದರೂ ಸುಧಾರಣೆ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರ ಹಿತಾಸಕ್ತಿಗೆ ಆದ್ಯತೆ ನೀಡುವಂತೆ ಸೂಚಿಸಿದರು.

































