
ಬೆಂಗಳೂರು: ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಜಿಬಿಎ ವ್ಯಾಪ್ತಿಯ ಎಲ್ಲಾ ಐದೂ ಪಾಲಿಕೆಗಳ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದ್ದು ಈ ವೇಳೆ ಬೆಂಗಳೂರು ಮಹಾನಗರದ ಸ್ವಚ್ಛತೆ, ಸುಗಮ ಸಂಚಾರ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರ, ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿ ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರತಿದಿನ ಬೆಳಗ್ಗೆ ಪಾಲಿಕೆಗಳ ಆಯುಕ್ತರು ನಗರ ಸಂಚಾರದ ಬಗ್ಗೆ ನನಗೆ ಮಾಹಿತಿ ನೀಡಬೇಕು, ಯಾವುದೇ ಕೆಲಸ ತೆಗೆದುಕೊಂಡರೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಕೆಲಸ ಮಾಡಲಾಗಿದೆ ಎಂದು ಯಾರೂ ಬೋಗಸ್ ಬಿಲ್ ಬರೆಯುವಂತಿಲ್ಲ. ಒಂದೊಮ್ಮೆ ಈ ರೀತಿಯಾದರೆ ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆ. ಯಾವುದೇ ಇಂಜಿನಿಯರ್ ಗಳನ್ನು ನಂಬಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು













