
ಮಂಗಳೂರು: ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಲಿಪಿ ಈಗ “ಯುನಿಕೋಡ್’’ ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ.
ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದ್ದು ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು
ಟೆಕ್ಸ್ಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇವೆಲ್ಲವನ್ನೂ ಮಾಡಲು ಸಾಧ್ಯವಾಗಲಿದೆ. ಗೂಗಲ್‌ನಲ್ಲಿ ಈಗಾಗಲೇ ಇಂಗ್ಲಿಷ್ ಟು ತುಳು ಟ್ರಾನ್ಸ್‌ಲೇಶನ್ ಒದಗಿರುವ ಕಾರಣ ಯುನಿಕೋಡ್‌ನಲ್ಲಿ ಹಲವು ಸಾಧ್ಯತೆಗಳು ಮುಂದಿನ ದಿನಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆಯಿದೆ.
2016ರ ಆ. 6ರಂದು ತುಳು ವಿಕಿಪೀಡಿಯ ಆರಂಭವಾಗಿದ್ದು ಮುಂದುವರಿದ ಭಾಗವಾಗಿ ಯುನಿಕೋಡ್ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯು 2017ರಲ್ಲಿ ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಒಂದು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ. ಪವನಜ ಅವರು ತಾಂತ್ರಿಕ ಸಲಹೆ ನೀಡಿದ್ದು ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿದ್ದು ಇದೇ ಸಂದರ್ಭ “ತಿಗಳಾರಿ ಲಿಪಿ’ ಎಂದು ಪ್ರತ್ಯೇಕ ಪ್ರಸ್ತಾವನೆ ಕೂಡ ಸಲ್ಲಿಕೆ ಆಗಿತ್ತು. ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳ ಅನಂತರ ಅಂತಿಮವಾಗಿ “ತುಳು-ತಿಗಳಾರಿ’ ಹೆಸರಿನಲ್ಲಿ ಲಿಪಿಯನ್ನು ಯುನಿಕೋಡ್‌ಗೆ ಸೇರಿಸಲಾಗಿದೆ.













