
ಮುದ್ರಾಡಿಯಲ್ಲಿ 5 ನೇ ವರ್ಷದ ಶಾರದೋತ್ಸವ, ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ
“ಶಾರದೆಯ ಆರಾಧನೆಯೊಂದಿಗೆ ಸಂಸ್ಕಾರದ ಶಿಕ್ಷಣವನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ಪಡೆಯೋಣ ” -ಮುನಿರಾಜ ರೆಂಜಾಳ ಹೆಬ್ರಿ : ಮುದ್ರಾಡಿಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯಿಂದ 5 ನೇ ವರ್ಷದ ಮುದ್ರಾಡಿ ಶಾರದೋತ್ಸವವು ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘ ಆವರಣದಲ್ಲಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರ ನೇತೃತ್ವದಲ್ಲಿ. ಒ. 11 ರಂದು ಜರಗಿತು.
ಮುದ್ರಾಡಿ ನಾರಾಯಣ ಭಟ್ ಇವರ ಪೌರೊಹಿತ್ಯ ದಲ್ಲಿ ಮೂರ್ತಿ ಪ್ರತಿಷ್ಠೆ ಪೂಜೆ ಪ್ರಾರಂಭವಾಗಿ ಶಾರದಾ ಪೂಜೆ ನಡೆಯಿತು.ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಲಿಖಿತ ಮತ್ತು ಮೌಖಿಕ ರಸ ಪ್ರಶ್ನೆ ಕಾರ್ಯಕ್ರಮ ಮತ್ತು 3ವರ್ಷದೊಳಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು. . ರಸಪ್ರಶ್ನೆಯ ಉದ್ಘಾಟನೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಭಂಡಾರಿ ನೆರವೇರಿಸಿದರು.ಪ್ರಕಾಶ ಪೂಜಾರಿ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಸುಂದರ ರಾವ್, ಎಮ್. ಎನ್. ಡಿ. ಎಸ್.ಎಮ್. ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಹಾಗೂ ಮುನಿಯಾಲು ಕೆ. ಪಿ.ಎಸ್. ನ ಉಪನ್ಯಾಸಕಿ ದಿವ್ಯಜ್ಯೋತಿ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮದ್ಯಾಹ್ನ ಮಹಾಪೂಜೆ ನಡೆದಾಗ ಅಸಂಖ್ಯಾತ ಭಕ್ತರು ಪಾಲ್ಗೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಹೆಬ್ರಿಯ ಉದ್ಯಮಿ ಸತೀಶ್ ಪೈ ಉದ್ಘಾಟಿಸಿ ಮಾತನಾಡಿ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು. ಎಲ್ಲರ ತಾಯಿ ಶಾರದಾ ಮಾತೆ.ಜನ್ಮವೆತ್ತ ತಾಯಿಯನ್ನು ಮತ್ತು ವಿದ್ಯೆ ಬುದ್ದಿ ನೀಡುವ ಶಾರದಾ ಮಾತೆಯನ್ನು ಮರೆಯದಿರೋಣ. ಸಂಘಟನೆಯ ಮೂಲಕ ಪ್ರತಿ ವರ್ಷ ಸಾರ್ವಜನಿಕ ಶಾರದೋತ್ಸವನ್ನು ಆಯೋಜಿಸಿದ ಮಂಜುನಾಥ ಪೂಜಾರಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುನಿರಾಜ್ ರೆಂಜಾಳ ಧಾರ್ಮಿಕ ದಿಕ್ಸೂಚಿ ಬಾಷಣ ಮಾಡುತ್ತಾ ಕನ್ನಡಿಗರ ನಾಡ ಹಬ್ಬ ನವರಾತ್ರಿ ಉತ್ಸವ. ಜಗನ್ಮಾತೆಯನ್ನು ಒಂಬತ್ತು ರೂಪದಲ್ಲಿ ನವರಾತ್ರಿಯ ದಿವಸಗಳಂದು ಆರಾಧಿಸಿಕೊಂಡು ಬರುತ್ತಿದ್ದೇವೆ. ಸರಸ್ವತಿ ದೇವಿಯನ್ನು ಆರಾಧಿಸುವುದು ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ಮನೆಯಲ್ಲಿರುವ ತಾಯಿಯನ್ನು ಗೌರವಿಸುವುದು. ಸರಸ್ವತಿ ಎಂದರೆ ಸಾಮಾನ್ಯವಾಗಿ ಕಾಣುವ ರೂಪ ಎಂದರೆ ಚತುರ್ಬುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಜಪ ಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಜ್ಞಾನ, ಶಿಕ್ಷಣ, ಕಲಿಕೆ, ಕಲೆಗಳ ಮತ್ತು ಸಂಸ್ಕೃತಿಯ ದೇವತೆ ಎಂದು ಪೂಜಿಸಲಾಗುತ್ತಿದೆ.ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಿ.ಮಕ್ಕಳ ಶಿಕ್ಷಣಕ್ಕೆ ಪೋಷಕರು ಪ್ರಾಮುಖ್ಯತೆ ಕೊಡುವುದಾದರೂ, ಜೀವನವನ್ನು ಅರ್ಥಮಾಡಿಕೊಳ್ಳಲು ಬಾಲ್ಯದಿಂದಲೇ ಕೆಲಸ ಕೊಡಿ. ವಿದ್ಯೆ, ಬುದ್ದಿಯನ್ನು ದಯಪಾಲಿಸುವ ಶಾರದಾ ಮಾತೆಯನ್ನು ಪೂಜಿಸಿ ನಾವೆಲ್ಲರೂ ಧನ್ಯರೋಗೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ, ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಜರುವತ್ತು, ಕಾಡುಹೊಳೆ ಜನಪ್ರಿಯ ರೈಸ್ ಮಿಲ್ಲಿನ ಮಾಲಕರಾದ ಲಯನ್ ಕೆ. ಮಂಜುನಾಥ, ಉದ್ಯಮಿ ತಾರನಾಥ ಕೋಟ್ಯಾನ್ ಉಡುಪಿ, ವರಂಗ ವ್ಯವಸಾಯಕ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಆಚಾರ್ಯ, ಹಿರಿಯ ಸಮಾಜ ಸೇವಕರಾದ ಗಣಪತಿ ಎಮ್. ಗ್ರಾಮ ಪಂಚಾಯತ್ ಮುದ್ರಾಡಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಬಾಯರಿ ಉಪಸ್ಥಿತರಿದ್ದರು.
ಮುದ್ರಾಡಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಸತತವಾಗಿ ಶಾರದೋತ್ಸವ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದ್ದು ಈ ವರ್ಷವೂ 5 ನೇ ವರ್ಷದ ಶಾರದೋತ್ಸವವನ್ನು ವಿವಿಧ ಕಾರ್ಯಕ್ರಮಗಳನ್ನು ಮುದ್ರಾಡಿ ಮತ್ತು ಕಬ್ಬಿನಾಲೆ ಜನರ ಸಹಕಾರದೊಂದಿಗೆ ಮಾಡುತ್ತಾ ಬರುತ್ತಿದ್ದೇವೆ.ಸರಸ್ವತಿ ದೇವಿಯು ಜ್ಞಾನ, ಕಲೆ, ಸಂಗೀತದ ದೇವತೆ. ವಿದ್ಯೆ ಬುದ್ದಿಯನ್ನು ಕೊಡುವ ದೇವಿಯೇ ಸರಸ್ವತಿ. ಮುಂದಿನ ಪೀಳಿಗೆಗೂ ಧಾರ್ಮಿಕ ಪ್ರಜ್ಞೆ, ಸಂಸ್ಕೃತಿ, ಸಂಸ್ಕಾರ,ವಿದ್ಯೆ, ಬುದ್ದಿಯನ್ನು ಕರುಣಿಸುವ ಶಾರದಾ ಮಾತೆಯನ್ನು ಪೂಜಿಸಿ, ಸಾರ್ವಜನಿಕವಾಗಿ ಶಾರದೋತ್ಸವ ಕಾರ್ಯಕ್ರಮವನ್ನು ಪ್ರತೀ ವರ್ಷ ಆಯೋಜಿಸುತ್ತಾ ಬಂದೆವು ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೀತಾರಾಮ ಹೆಬ್ಬಾರ್- ಕಲೆ, ಸುರೇಂದ್ರ ಮೋಹನ್ – ಸಾಕ್ಷ್ಯ ಚಿತ್ರ, ಬಾಲಚಂದ್ರ ಮುದ್ರಾಡಿ – ಮಾಧ್ಯಮ, ವಸಂತ ಪೂಜಾರಿ ಭಕ್ರೆ -ಯುವ ಉದ್ಯಮಿ, ಮಹಾಬಲ ಶೆಟ್ಟಿ – ಪಶು ವೈದ್ಯಕೀಯ ಸೇವೆ , ಎಸ್. ಟಿ. ಶೆಟ್ಟಿಗಾರ್ – ಸಂಘಟನೆ, ವಾರಿಜ ಸುವರ್ಣ – ಮಹಿಳಾ ಉದ್ಯಮಿ, ದಶವಂತ ಆಚಾರ್ಯ ಭಕ್ರೆ – ಶಿಲ್ಪಕಲೆ, ಕು. ರಚಿತಾ ಕುಲಾಲ್ -ಕ್ರೀಡೆ, ಸಂತೋಷ್ ಮುದ್ರಾಡಿ ದಾರೆಬೆಟ್ಟು -ಸಾಹಿತ್ಯ, ಇವರನ್ನು ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.ರಸಪ್ರಶ್ನೆ ಸ್ಪರ್ಧೆ ಮತ್ತು ಮುದ್ದು ಶಾರದೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಮುನಿರಾಜ್ ರೆಂಜಾಳ ಮತ್ತು ಜಗದೀಶ್ ಜರುವತ್ತು ಹಾಗೂ ಡ್ರಾಮಾ ಜೂನಿಯರ್ ಸೀಸನ್ 5 ವಿಜೇತರಾದ ರಿಷಿಕಾ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತಗೊಂಡ ಸೀತಾರಾಮ ಹೆಬ್ಬಾರ್ ಮತ್ತು ಸಂತೋಷ್ ಪೂಜಾರಿ ದಾರೆಬೆಟ್ಟು ಅನಿಸಿಕೆ ವ್ಯಕ್ತಪಡಿಸಿದರು.ಮುದ್ರಾಡಿ ಪರಿಸರದ ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿ ಪರೀಕ್ಷೆಯಲ್ಲಿ 95% ಮೇಲ್ಪಟ್ಟು ಅಂಕಗಳಿಸಿದ ಸುಮಾರು 20 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಾಗೂ ಶ್ರೇಷ್ಠ ಸಂಘ ಸಂಸ್ಥೆಗಳಿಗೆ ನೀಡಲಾಗುವ ಮುದ್ರಾಡಿ ಶಾರದೋತ್ಸವ ಪುರಸ್ಕಾರ. 2024 ನ್ನು ಪಡಕೊಂಡ ಮುದ್ರಾಡಿಯ ಮದಗ ಫ್ರೆಂಡ್ಸ್ ಇದರ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿಗಾರ್ ಮತ್ತು ಸದಸ್ಯರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕ ಅಣ್ಣಪ್ಪ ಮುದ್ರಾಡಿ ವಾಚಿಸಿದರು.
ಸಮಿತಿಯ ಕಾರ್ಯದರ್ಶಿ ವಿಶು ಕುಮಾರ್ ಉಪ್ಪಳ,ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಮಿತಿಯ ಕೋಶಾಧಿಕಾರಿ ಬಲ್ಲಾಡಿ ಚಂದ್ರಶೇಖರ್ ಭಟ್ , ಚೈತ್ರ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿ,ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಬಾಯರಿ ವಂದಿಸಿದರು. .ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ , ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ತೆಲಿಕೆದ ಬರ್ಸ ಹಾಸ್ಯ ಕಾರ್ಯಕ್ರಮ, ರಿಷಿಕಾ ಕುಂದೇಶ್ವರ ಅವರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಇದರ ನಿರ್ವಹಣೆಯನ್ನು ಸಂತೋಷ್ ಪೂಜಾರಿ ನೆಕ್ಕಾರ್ ಪಲ್ಕೆ ಮತ್ತು ಶ್ವೇತಾ ಭಂಡಾರಿ ಮಾಡಿದರು.ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಸಂಜೆ ಶಾರದಾ ಮಾತೆಯ ಶೋಭಾ ಯಾತ್ರೆಯು ಟ್ಯಾಬ್ಲೋ ಗಳು, 15 ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ ವಾದನ ದೊಂದಿಗೆ ವಿಜೃಂಭಣೆಯಿಂದ ಸಾಗಿ ಶಾರದಾ ದೇವಿಯ ಮೂರ್ತಿಯನ್ನು ಮದಗದ ಕೆರೆಯಲ್ಲಿ ಜಲ ಸ್ತಂಭನ ಮಾಡಲಾಯಿತು.













