ಸಂಸ್ಕಾರವಂತ ಮಕ್ಕಳೇ ದೇಶದ ನಿಜವಾದ ಆಸ್ತಿ: ರಮಿತಾ ಶೈಲೇಂದ್ರ

ಸನಾತನ ಧರ್ಮದ ಸಂಸ್ಕೃತಿಯನ್ನು ಹೊಂದಿರುವ ಭಾರತದ ಕುಟುಂಬ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಕೃಷಿ ವ್ಯವಸ್ಥೆಯನ್ನು ಹಾಳು ಮಾಡುವುದೇ ಬ್ರಿಟಿಷರ ಉದ್ದೇಶವಾಗಿತ್ತು. ಅವರು ಜಾರಿಗೆ ತಂದ ಮೆಕಾಲೆ ಶಿಕ್ಷಣ ಪದ್ಧತಿಯು ನಮಗೆ ಬದುಕಿನ ಪಾಠಗಳನ್ನು ಹೇಳಿಕೊಡುವಲ್ಲಿ ವಿಫಲವಾಗಿದೆ. ಹಾಗಾಗಿ ನಮ್ಮ ಸಂಸ್ಕೃತಿಯ ಬೇರುಗಳು ಸದೃಢವಾಗಬೇಕಾದರೆ ಬಾಲ್ಯದಲ್ಲಿ ಪಡೆಯುವ ಶಿಕ್ಷಣವು ಅತಿ ಮುಖ್ಯ. ಶಿಶುಮಂದಿರಗಳಲ್ಲಿ ಗುರುಕುಲ ಪದ್ದತಿಯ ಶಿಕ್ಷಣವು ಮಕ್ಕಳಿಗೆ ದೊರಕುತ್ತಿದೆ. ಅದರ ಪ್ರಯೋಜನವನ್ನು ಅರಿತುಕೊಂಡು ತಾಯಂದಿರು ಶಿಶುಮಂದಿರದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಕ್ಕಳು ಆಧ್ಯಾತ್ಮಿಕ, ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳು ಬೆಳೆಸಿಕೊಳ್ಳುವಲ್ಲಿ ನೆರವಾಗ ಬೇಕು. ಮಕ್ಕಳಿಗೋಸ್ಕರ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಸಮಾಜದ ಆಸ್ತಿ ಯನ್ನಾಗಿ ಮಾಡಬೇಕು ಎಂದು ಕಾರ್ಕಳದ ಖ್ಯಾತ ವಾಗ್ಮಿ ರಮಿತಾ ಶೈಲೇಂದ್ರ ಹೇಳಿದರು.
ಅವರು ಮುದ್ರಾಡಿ ಸುಬ್ಬಣ್ಣಕಟ್ಟೆಯ ಸೇವಾಸಂಗಮ ಶಿಶುಮಂದಿರದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಬೌದ್ಧಿಕ ಉಪನ್ಯಾಸವನ್ನು ನೀಡಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಪಾಲ್ಗೊಂಡು ಶುಭ ಹಾರೈಸಿದರು. ಹೆಬ್ರಿಯ ಅಮೃತ ಭಾರತಿ ಟ್ರಸ್ಟ್ ನ ವಿಶ್ವಸ್ಥರಾದ ಹೆ. ಬಾಲಕೃಷ್ಣ ಮಲ್ಯ, ನಿವೃತ್ತ ಮುಖ್ಯ ಶಿಕ್ಷಕ ಗಣಪತಿ ಪೈ, ಶಿಶುಮಂದಿರದ ವ್ಯವಸ್ಥಾಪಕಿ ಶಿಲ್ಪಾ ಶ್ರೀಧರ ನಾಯಕ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ಸಂಸ್ಕಾರದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ, ಚುರುಕುತನ, ಗುರುಹಿರಿಯರ ಬಗ್ಗೆ ಗೌರವ ದ ಭಾವನೆ, ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಶಿಶುಮಂದಿರಕ್ಕೆ ಮಕ್ಕಳನ್ನು ಸೇರಿಸುವ ಮೂಲಕ ಮಕ್ಕಳನ್ನು ದೇಶದ ಸತ್ ಪ್ರಜೆಗಳಾಗಿ ರೂಪಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಸೇವಾಸಂಗಮದ ಸಂಚಾಲಕರಾದ ಶ್ರೀಧರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಶುಮಂದಿರ ಬೆಳೆದು ಬಂದ ಹಾದಿ, ಇಲ್ಲಿ ನಡೆಯುವ ವೈವಿಧ್ಯಮಯ ಚಟುವಟಿಕೆಗಳು, ಸಂಸ್ಥೆಯು ಬೆಳೆಯುವಲ್ಲಿ ವಿದ್ಯಾಭಿಮಾನಿಗಳು ನೀಡಿದ ಸಹಕಾರವನ್ನು ನೆನಪಿಸಿಕೊಂಡು ಮುಂದಿನ ವರ್ಷದಲ್ಲಿ ನಡೆಸಲು ಉದ್ದೇ ಶಿಸಿ ರುವ ರಜತ ಸಂಭ್ರಮ ಕ್ಕೆ ಎಲ್ಲರ ನೆರವನ್ನು ಯಾಚಿಸಿ ಸ್ವಾಗತಿಸಿದರು. ಶಿಶುಮಂದಿರದ ಮಾತಾಜಿ ಸುಮತಿ ವರದಿ ಮಂಡಿಸಿದರು.ಮಕ್ಕಳು ಮತ್ತು ಮಾತೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ಪೂರ್ವಿ ಪ್ರಶಾಂತ್ ಪೈ ವಾಚಿಸಿದರು. ಪೂರ್ಣಿಮಾ ಆರ್.. ಭಟ್ ವಂದಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಮಾತೆಯರು ಎಲ್ಲ ಮಕ್ಕಳಿಗೆ ಅರಶಿನ, ಕುಂಕುಮ ಹಚ್ಚಿ, ಅಕ್ಷತೆಯನ್ನು ಹಾಕಿ, ಆರತಿ ಬೆಳಗಿ ಸಂಭ್ರಮಿಸಿದರು. ಶಾಂತಾ ದಿನೇಶ್ ಪೂಜಾರಿ, ಶ್ವೇತಾ ಹೆಬ್ಬಾರ್, ಜಯಪ್ರಭಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಅಶ್ವಿನಿ, ಶ್ರುತಿ ಭಟ್, ಯಶೋದಾ ಶೆಟ್ಟಿ ಸಹಕರಿಸಿದರು. ಶಿಶುಮಂದಿರದ ಪುಟಾಣಿಗಳಿಂದ, ಬಾಲ ಗೋಕುಲ ಮಕ್ಕಳಿಂದ ಹಾಗೂ ಮಾತೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.





















