
ಸಂಡೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರು ಉಪ ಚುನಾವಣೆ ಪ್ರಚಾರದ ವೇಳೆ ಮಾತನಾಡಿ ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಈ ಮೂಲಕ ಐದು ವರ್ಷ ಮುಖ್ಯಮಂತ್ರಿಯಾಗಿ ನಾನೇ ಅಧಿಕಾರ ನಡೆಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮುಹೂರ್ತ ಫಿಕ್ಸ್ ಆಗಿದೆ. ಈ ಮಾತನ್ನು ನಾನು ಹುಡುಗಾಟಕ್ಕೆ ಹೇಳುತ್ತಿಲ್ಲ. ಬೇಕಿದ್ದರೆ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಸಿಎಂ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಬಳ್ಳಾರಿಗೆ ಕಾಲಿಟ್ಟು ನೋಡಿ ಎಂದು ಜನಾರ್ದನ ರೆಡ್ಡಿ ಹಿಂದೆ ನನಗೆ ಸವಾಲು ಹಾಕಿದ್ದರು. ನಾನು ಆ ಸವಾಲು ಸ್ವೀಕರಿಸಿ ಪಾದಯಾತ್ರೆ ಮೂಲಕ ಬಳ್ಳಾರಿಗೆ ಬಂದು ಸಡ್ಡು ಹೊಡೆದೆ. ಅಲ್ಲಿಂದಲೇ ರೆಡ್ಡಿ ಅವನತಿ ಶುರುವಾಯಿತು. ಸಿದ್ದರಾಮಯ್ಯ ಇರೋವರೆಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ ನನ್ನನ್ನು ಮುಗಿಸಲು ಸಿಬಿಐ, ಇ.ಡಿ, ಐಟಿಯನ್ನು ಬಳಸಿಕೊಂಡು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



















