
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೋಂತಿಮಾರು ಪಡ್ಪು ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿ ಪರಾರಿಯಾಗಿದ್ದಾನೆ.
ಆರೋಪಿಯನ್ನು ಸ್ಥಳೀಯ ನಿವಾಸಿ ಮೊಹಮ್ಮದ್ ಜವ್ವಾರ್ (28) ಎಂದು ಗುರುತಿಸಲಾಗಿದ್ದು, ಆತ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಸ್ಥಳದಲ್ಲಿದ್ದ ಪ್ರಯಾಣಿಕರು ಕಿರುಚುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಬೆಳಿಗ್ಗೆ ಸುಮಾರು 8.45ರ ವೇಳೆಗೆ ಮೊಹಮ್ಮದ್ ಜವ್ವಾರ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








































