28.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 80

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೮೦ ಮಹಾಭಾರತ

ವಾದ್ಯ, ಜಯಘೋಷದೊಂದಿಗೆ ಜಗಜಟ್ಟಿ ಮಲ್ಲ -ಮಥುರಾ ಮಹೀಂದ್ರ ಕಂಸ ಆಗಮಿಸಿದನು. ಜಟ್ಟಿ ಕಾಳಗ ಮಲ್ಲಯುದ್ದಕ್ಕೆ ಸಿದ್ದವಾಗಿದ್ದ ರಂಗ ಮಂದಿರದ ಮುಂಭಾಗಕ್ಕೆ ತಲುಪಿದನು. ಅಂಗ ರಕ್ಷಕರು, ಬಲುಹುಳ್ಳ ಭಟರು, ಮಾಂಡಲೀಕರು, ಮಂತ್ರಿಗಳೂ ಅನುಸರಿಸಿ, ಆವರಿಸಿ ಬರುತ್ತಿದ್ದಾರೆ. ಕಂಸರಾಯ ಎತ್ತರದ ಸ್ಥಾನದಲ್ಲಿ ಶೋಭಿಸುತ್ತಿದ್ದ ರಾಜ ಮಂಚವೇರಿ ವಿರಾಜಮಾನಾದ. ಇಷ್ಟೆಲ್ಲಾ ಬಾಹ್ಯ ರಕ್ಷಣೆ, ವೈಭವವಿದ್ದರೂ, ಕಂಸನ ಅಂತರಂಗ ಮರಣ ಭಯದಿಂದ ನಡುಗುತ್ತಿತ್ತು. ತನ್ನ ಬಾಹುಬಲ, ಸಂಚು, ವ್ಯವಸ್ಥೆ ಯೋಜನೆಯ ಮೇಲೆ ವಿಶ್ವಾಸ ಹೊಂದಿದ್ದರೂ, ಅಶರೀರವಾಣಿ ಸತ್ಯವಾಗಲಿದೆ ಎಂಬ ಮೃತ್ಯುಭೀತಿ ಪೀಡಿಸುತ್ತಿತ್ತು. ಪರಿಣಾಮ ಭಯಗೊಂಡು ಮರಣ ಮೃದಂಗದಂತೆ ಬಡಿಯುತ್ತಿದ್ದ ಕಂಸನ ಹೃದಯಕ್ಕೆ ಜೊತೆಯಾಗಿ ಮಲ್ಲರ ತಾಲಶಬ್ದಗಳು, ಕೊಂಬು ಕಹಳೆ, ವೀರವಾದ್ಯಗಳು, ಭೇರಿ ಭಾಂಕಾರಗಳು, ಡೋಲು ನಗಾರಿಗಳ ವಾದನ ಬಡಿತಗಳು ಆಕಾಶ ಮುಟ್ಟತೊಡಗಿತು. ಭವ್ಯ ಸ್ವಾಗತದೊಂದಿಗೆ ಅತಿಬಲಾಢ್ಯ ವೀರ ಮಲ್ಲರಾದ ‘ಚಾಣೂರ’- ‘ಮುಷ್ಟಿಕ’ ರು, ‘ಶಲ – ತೋಶಲ’ ರು, ‘ಕೂಟ -ಪ್ರಕೂಟ’ ರು ಮಲ್ಲ ಯುದ್ದ ರಂಗ ಪ್ರವೇಶ ಮಾಡಿದರು. “ಬಲರಾಮ- ಕೃಷ್ಣ” ರ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ಕೃಷ್ಣ ಬಲರಾಮರು ಶುಚಿರ್ಭೂತರಾಗಿ, ನೈಮಿತ್ತಿಕ ಕರ್ಮ – ಧರ್ಮಗಳನ್ನು ಪೂರೈಸಿ ಸಿದ್ದರಾಗಿದ್ದರು. ದುಂದುಭಿ ಘೋಷ, ವಾದನಗಳ ಸ್ವರ ಕೇಳಿಸಿಕೊಂಡರು. ಹಬ್ಬ ಆರಂಭಗೊಂಡಿತು ಎಂದರಿತು ಮಲ್ಲ ರಂಗಮಂಟಪದತ್ತ ಹೊರಟರು. ಕೃಷ್ಣ ಬಲರಾಮರು ಬರುವ ದಾರಿಗಡ್ಡವಾಗಿ ಕಂಸನ ಆನೆಯನ್ನು ಮಾವುತ ತಡೆಯಾಗಿ ನಿಲ್ಲಿಸಿದ್ದ. “ಅಯ್ಯಾ ನಮಗೆ ಹೋಗಲು ಬಿಡುವೆಯಾ” ಎಂದು ಕೃಷ್ಣ ವಿನಯದಿಂದ ವಿನಂತಿಸಿದ. ಆಗ ಕಂಸನ ಪಟ್ಟದ ಮದಗಜ “ಕುವಲಯ ಪೀಡ” ಮಾವುತನ ನಿರ್ದೇಶನದಂತೆ ಇವರ ಮೇಲೇರಿ ಬಂತು. ತಪ್ಪಿಸಿದ ಸೋದರರು ಮುಖ ಮುಖ ನೋಡಿ ಸೊಂಟದ ನಡುದಟ್ಟಿಯನ್ನು ಬಿಗಿದು ಕಟ್ಟಿದರು. ಆನೆ ಸೊಂಡಿಲನ್ನು ಮುಂದಕ್ಕೆ ಚಾಚಿ ಕೃಷ್ಣನನ್ನು ಸೆಳೆದು ಆತನ ಸೊಂಟ ಬಳಸಿ ಹಿಡಿದು ನೆಲಕ್ಕಪ್ಪಳಿಸುವ ಯತ್ನದಲ್ಲಿತ್ತು. ನುಸುಳಿ ಸೊಂಡಿಲನ್ನೇ ಸೇತುವಾಗಿಸಿ ನೆತ್ತಿಯ ಮೇಲೇರಿದ ಕೃಷ್ಣ. ಆನೆಯ ಕುತ್ತಿಗೆಯ ಭಾಗದಲ್ಲಿ ಕುಳಿತಿದಿದ್ದ ಮಾವುತ ಏರಿ ಬರುತ್ತಿರುವ ಕೃಷ್ಣನನ್ನು ತಳ್ಳಿ ಬೀಳಿಸಲು ಯತ್ನಿಸಿದ. ಆಗ ಮಾವುತನನ್ನೇ ಹಿಡಿದೆಳೆದು ಬೀಸಿ ದೂರಕ್ಕೆಸೆದ ಶ್ರೀಕೃಷ್ಣ. ಕ್ಷಣಮಾತ್ರದಲ್ಲಿ ಮೇಲೇರಿ ಆನೆಯ ಕತ್ತಿನ ಭಾಗದಲ್ಲಿ ಆಸೀನನಾದ ಶ್ರೀಶ. ಕುವಲಯ ಪೀಡನ ನೆತ್ತಿಯ ಕುಂಭಸ್ಥಳವನ್ನೇ ಕೇಂದ್ರವಾಗಿಸಿ ಮುಷ್ಟಿಗಟ್ಟಿ ಬಲಯುತವಾಗಿ ಗುದ್ದ ತೊಡಗಿದ. ಏಟುಗಳ ರಭಸಕ್ಕೆ ಗೀಳಿಟ್ಟಿತು ಆನೆ – ತಲೆ ತಿರುಗತೊಡಗಿತು. ವಾಲಿತು, ವಯಲಾಡುತ್ತಾ ಕೃಷ್ಣನನ್ನು ಕೆಳಕ್ಕೆಸೆಯಲು ಸೊಂಡಿಲು ಮೇಲೇರಿಸಿತು . ಅದನ್ನೇ ಆಧಾರವಾಗಿ ಹಿಡಿದು ಕೆಳ ಜಾರಿ ಜಿಗಿದು ದೂರ ಹಾರಿದ ಕೃಷ್ಣ. ಗುದ್ದಿದೇಟುಗಳಿಂದಲೇ ಗಜ ಕುವಲಯನ ಕಣ್ಣು ಮಂಜಾಗತೊಡಗಿತ್ತು. ತುಳಿದು ಕೊಲ್ಲಲು ಕೃಷ್ಣನನ್ನು ಅಟ್ಟುತ್ತಾ ಬಂದರೆ, ಆನೆಯ ಕಾಲುಗಳ ಮಧ್ಯ – ಹೊಟ್ಟೆಯೆಡಿ ಸೇರಿದ ಅಸುರಾರಿ. ತಿರುಗಿದ ಆನೆಯ ಬಾಲ ಹಿಡಿದ ಶ್ರೀ ಹರಿ, ಮಹಾಬಲಯುತನಾಗಿ ಉಭಯಹಸ್ತಗಳ ಭದ್ರ ಹಿಡಿತ ಸಡಿಲಿಸದೆ ಬೀಸತೊಡಗಿದ. ಅದ್ಭುತ ವಿಸ್ಮಯ! ಚೋಟುದ್ದದ ಬಾಲ ಆನೆಯನ್ನು ಅದೂ ಕಂಸನ ಪಟ್ಟದಾನೆಯನ್ನು ಗಿರಗಿರನೆ ಸುತ್ತ ತೊಡಗಿದ್ದಾನೆ!.. ಸುತ್ತು ಸುತ್ತು… ಸುತ್ತಿ ಬಿದ್ದೇ ಬಿಟ್ಟಿತು. ಕೃಷ್ಣನು ಘಾತಿಸಿದ ಮುಷ್ಟಿ ಏಟಿಗೆ ತಲೆಬುರುಡೆಯೊಡೆದಂತಾಗಿದ್ದ ಆನೆ ಅರಚುತ್ತಾ.. ಗೀಳಿಡುತ್ತಾ… ಬಿದ್ದು ಕೊನೆಯುಸಿರು ಎಳೆದುಕೊಂಡಿತು – ಬಿಡಲಿಲ್ಲ. ರಾಮಕೃಷ್ಣರು ಆನೆಯ ದಂತಗಳನ್ನಿಡಿದು ಎಳೆದು ಕಿತ್ತು ಕೈಯಲ್ಲಿ ಆಯುಧವಾಗಿ ಹಿಡಿದು ನಿಂತರು. ಕಂಸನ ರಕ್ಷಕ ಭಟರು ಕೆರಳಿ ಇವರೀರ್ವರ ಮೇಲೆ ಮುಗಿಬಿದ್ದರು. ಆನೆಯ ದೀರ್ಘ ದಂತವನ್ನೇ ಆಯುಧವಾಗಿಸಿ ಬೀಸಿ ಸವರುತ್ತಾ ಹೊಡೆ ಹೊಡೆದು ಅವರನ್ನು ಕೊಂದು ಬಿಟ್ಟರು. ಕಂಸನ ಕಡೆಯ ಕಟ್ಟಾಳುಗಳನ್ನು ವೀರ ಗೋಪಾಲಕರು ತಡೆದು ಹೊಡೆದಾಡಿ ಸೋಲಿಸಿದರು. ರಂಗ ಮಂದಿರತ್ತ ಬಂದಾಗ ಕೃಷ್ಣ ಬಲರಾಮರನ್ನು ಕಂಡನು ಕಂಸ. ತನ್ನ ಆನೆಯನ್ನು ಕೊಂದು ಬಂದ ವಿಚಾರ ತಿಳಿದು ಆತನ ಜಂಘಾಬಲವೇ ಕುಸಿದು ಹೋಗಿತ್ತು. “ಯಾರಲ್ಲಿ ಜಟ್ಟಿಗಳು…. ಹಿಡಿದು ಬಡಿಯಿರಿ ಇವರನ್ನು” ಎಂದು ಆಜ್ಞಾಪಿಸಿದ ಕಂಸರಾಯ. ಮಹಾ ಬಲಾಢ್ಯ ಜಗಜಟ್ಟಿಗಳಾದ ಚಾಣೂರ – ಮುಷ್ಟಿಕರು ಆಕ್ರಮಣಕ್ಕೆ ಮುಂದಾದರು. ಜಟ್ಟಿ ಕಾಳಗವೇ ನಡೆಯಿತು. ಮಲ್ಲಯುದ್ದದ ಅಬ್ಬರ ಆರ್ಭಟದ ಗುದ್ದಾಟದ ಪ್ರದರ್ಶನವೇ ನಡೆಯಿತು. ಜಟ್ಟಿಗಳ ಗತ್ತು -ಮಸಲತ್ತು, ತಂತ್ರ ಪ್ರತಿ ತಂತ್ರ ಪರಮಾತ್ಮನ ಎದುರು ನಡೆದೀತೇ? ಕೃಷ್ಣ ಚಾಣೂರನನ್ನೂ, ಬಲಭದ್ರ ಮುಷ್ಟಿಕನನ್ನೂ ಕೊಂದು ಕೆಡಹಿದರು. ಬಳಿಕ ಶಲ – ತೋಶಲ, ಕೂಟ ಪ್ರಕೂಟರೂ ಹೋರಾಡಿದರು. ರಾಮಕೃಷ್ಣರ ಕೈಯೇಟಿಗೆ ಮಣಿದು ಮಡಿದರು. ನೋಡುತ್ತಿದ್ದ ಭಯಭೀತನಾದ ಕಂಸ ಆಜ್ಞಾಪಿಸಿದ “ಎಲ್ಲಿ ನಮ್ಮ ವೀರ ಭಟರು ಕೊಲ್ಲಿ… ಕೊಲ್ಲಿ …ಆ ದೇವಕಿ ವಸುದೇವನನ್ನು ಕೃಷ್ಣ ಬಲರಾಮರನ್ನು ಕೊಂದು ಬಿಡಿ …” ಅಣ್ಣ ಬಲಭದ್ರನತ್ತ ಕಣ್ಸನ್ನೆ ಮಾಡಿದ ಕೃಷ್ಣ… ಅರಿತ ಬಲರಾಮ ದೇವಕಿ ವಸುದೇವರತ್ತ ಸಾಗುತ್ತಿದ್ದ ವೀರ ಭಟರನ್ನು ತಡೆದು, ದಂತದಿಂದ ಹೊಡೆದುರುಳಿಸುತ್ತಿದ್ದರೆ, ಇತ್ತ ಶ್ರೀ ಕೃಷ್ಣ ಜಿಗಿದು ರಾಜ ಮಂಚದಲ್ಲಿ ಕುಳಿತಿದ್ದ ಕಂಸನ ಕಿರೀಟ ಸೆಳೆದೆಸೆದ. ಜಗ್ಗಿ ಎಳೆದು ಆತನನ್ನೂ ಬೀಳಿಸಿದ. ಬಿದ್ದಲ್ಲಿಂದ ಎದ್ದ ಕಂಸ ಖಡ್ಗಧಾರಣೆ ಮಾಡಿ ಬೀಸುತ್ತಾ ಬಂದಾಗ ತಪ್ಪಿಸಿದ ಕೃಷ್ಣ, ಕಂಸನ ಕೈ ಹಿಡಿದು ತಿರುವಿ ಖಡ್ಗವನ್ನು ಸೆಳೆದು ಎಸೆದ. ಬಲರಾಮ ಕುವಲಯಪೀಡನ ದಂತದಿಂದ ಅಪ್ಪಳಿಸುತ್ತಾ ವೀರಭಟರನ್ನು ಧ್ವಂಸಗೊಳಿಸಿದ.

ಇತ್ತ ಕೃಷ್ಣ – ಕಂಸರ ಕಾಳಗ – ಹೊಡೆದಾಟ – ಬಡಿದಾಟ…. ಜಗಜಟ್ಟಿ ಕಂಸನೂ ಹೋರಾಡಿದ, ಬದುಕಲು ಹೆಣಗಾಡಿದ. ಮಲ್ಲಯುದ್ದ ಪ್ರವೀಣ ಕಂಸ ಅಪ್ರತಿಮ ಪಟ್ಟುಗಳಿಂದ ಕೃಷ್ಣನನ್ನು ಹಿಡಿಯಲು ಮುಂದಾದರೂ… ಜಾರುತ್ತಿದ್ದ ಕೃಷ್ಣ. ಬಿದ್ದ ಕಂಸನ ಎದೆಗೆ ವಜ್ರಮುಷ್ಟಿಯ ಗುದ್ದುಗಳು ಬಡಬಡನೆ ಬೀಳತೊಡಗಿದವು. ಸಾವರಿಸಿ ಎದ್ದು ರಕ್ತ ಕಾರುತ್ತಾ ಮತ್ತೆ ಮತ್ತೆ ಕೃಷ್ಣನ ಮೇಲೆ ದಾಳಿ ಮುಂದುವರಿಸಿದ. ಕೈ ಸಾಗೀತೇ!? ಪಾತಕಗಳನ್ನು ಎಣಿಸಿ ಎಣಿಸಿ ಗುದ್ದುವಂತೆ ಬೀಳುತ್ತಿದ್ದ ಏಟುಗಳಿಗೆ ಮರ್ದನಗೊಳ್ಳುತ್ತಿದ್ದಾನೆ ಕಂಸ. ಇದ್ದ ತ್ರಾಣ ಒಗ್ಗೂಡಿಸಿ ಪ್ರಾಣ ಉಳಿಸಲು ಮೇಲೆದ್ದು ಬಂದ… ಎದ್ದು ಬಂದ ಕಂಸನ ಎದೆಗೆ ಕೃಷ್ಣ ಗುದ್ದಿದ ಮಾರಾಣಾಂತಿಕ ಹೊಡೆತಕ್ಕೆ ಧರಾಶಾಯಿಯಾದ… ಕೃ ಕೃ …ಕೃ….. ಕೃ ….. ಷ್ಣಾ… ಎನ್ನುತ್ತಲೇ ಪ್ರಾಣ ಬಿಟ್ಟನು. ಅಶರೀರವಾಣಿ ದಿಟವಾಯಿತು. ಶ್ರೀಹರಿಯೇ – ಶ್ರೀ ಕೃಷ್ಣ ಎಂಬುವುದರ ಸತ್ಯದರ್ಶನವಾಯಿತು.

ಕಂಸಪಾಳಯದ ವೀರರು, ಸೋದರ ಸಂಬಂಧಿಗಳು, ಅನುಚರರು ಆಕ್ರಮಿಸಿ ಕಾಳಗ ನೀಡಿದರೂ, ಕೃಷ್ಣ ಬಲರಾಮರ ಮುಂದೆ ನಿಲ್ಲಲಾಗಲಿಲ್ಲ. ಬಲಭದ್ರನ ಕೈಯಲ್ಲಿದಲ್ಲಿದ್ದ ಗಜದಂತದ ಘಾತಗಳಿಗೆ ಸತ್ತುಬಿದ್ದರು. ನೋಡುತ್ತಾ ನಿಂತಿದ್ದ ಅಳಿದುಳಿದ ಭಟರು ಹೆದರಿ ಆಯುಧಗಳನ್ನು ಕೆಳಗಿರಿಸಿ ಶರಣಾದರು. ದೇವದುಂದುಭಿ ಮೊಳಗಿತು. ದೇವತೆಗಳು ಪುಷ್ಪವೃಷ್ಟಿಗರೆದರು. ಗೋಪಾಲಕರು ಜಯಘೋಷ ಕೂಗತೊಡಗಿದರು. ಲೋಕಕಂಟಕನ ವಧೆಯಾಗಿ, ದೇವಕಿ ವಸುದೇವರ ಬಂಧನ ಮುಕ್ತವಾಯಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page