28.2 C
Udupi
Tuesday, May 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 75

ಭರತೇಶ್ ಶೆಟ್ಟಿ, ಎಕ್ಕಾರ್

ಗೋಪಾಲಕ ವೃತ್ತಿಯ ನಮ್ಮ ಹಿರಿಯರು ಮಾಡುತ್ತಿದ್ದ ಇಂದ್ರ ಪೂಜೆಯ ಬಗ್ಗೆ ಕೇಳುತ್ತಾ ಕೃಷ್ಣ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದ . ಇಂದ್ರ ಪೂಜೆ ಹಾಗು ನಂತರದ ಬಲಿ ಸಮರ್ಪಣೆ ತಾಮಸ ಪ್ರವೃತ್ತಿಯಿಂದ ಕೂಡಿದೆ. ಪರಂಪರೆಯಿಂದ ಬಂದದ್ದು ಹೌದಾದರೂ ಆಚಾರಕ್ಕೆ ವಿರುದ್ಧವಾದ ಯಾವುದೇ ಪದ್ದತಿ ಮುಂದುವರಿಸುವುದು ಸೂಕ್ತವಲ್ಲ. ದೇವತೆಗಳ ಒಡೆಯನಾದ ಇಂದ್ರನಿಗೆ ಯಜ್ಞವೇ ನಡೆದು ಹವಿರ್ಭೋಜನ ಸಮರ್ಪಣೆಯಾಗಬೇಕು. ಅದು ಧರ್ಮ ಸಮ್ಮತವಾಗುತ್ತದೆ. ಇಂದ್ರ ಪದವಿಯೂ ನೂರಾರು ವಿಶೇಷ ಫಲದಾಯಕ ಯಜ್ಞ ಸಂಪನ್ನತೆಯಿಂದಲೇ ಪ್ರಾಪ್ತವಾಗಿದೆ. ಆದರೆ ವೃತ್ತಿಯಿಂದ ಗೋಪಾಲಕರಾಗಿರುವ ನಾವು ಯಜ್ಞ ಮಾಡಲು ಸಾಧ್ಯವಿಲ್ಲ. ನಮಗೆ ಆ ಅಧಿಕಾರವೂ ಇಲ್ಲ. ಪಶುಪಾಲಕರಾದ ನಾವು ವೇದಕ್ಕೆ ಅಧಿಕಾರಿಗಳಲ್ಲ. ಮಾತ್ರವಲ್ಲದೆ ದೇವರುಗಳಿಗೆ ಕ್ಷುದ್ರವಾದ ಇಂತಹ ಬಲಿಕೊಡುವ ಕಾರ್ಯ ಧರ್ಮ ನಿಶಿದ್ಧವಾಗಿದೆ. ಯಾವುದೇ ಧರ್ಮ ಕಾರ್ಯ ಮಾಡುವ ಅಧಿಕಾರ ಇಲ್ಲದೆ ಅನಧಿಕಾರಿಯು ಮಾಡಿದರೆ, ಉತ್ತಮ ಕೆಲಸವೇ ಆದರೂ ಅದು ಅಕರ್ಮವೆನಿಸುತ್ತದೆ. ಹಾಗೆಯೇ ಕೀಳಾದ ಕರ್ಮವನ್ನು ಮಾಡುವುದರಿಂದ ಉತ್ತಮರೂ ಅಧಃಪತನ ಹೊಂದುತ್ತಾರೆ. ಯುಕ್ತವಾದ ಕರ್ಮವನ್ನು ಮಾಡದೇ ಇರುವುದರಿಂದಲೂ, ಅಯುಕ್ತವಾದ ಕರ್ಮವನ್ನು ಮಾಡುವುದರಿಂದಲೂ “ಕರ್ಮಭ್ರಷ್ಟ”ರಾಗಿ, ” “ಭ್ರಷ್ಟಕರ್ಮಿ”ಯಾಗಿ ಅಂತಹ ವ್ಯಕ್ತಿ ಸದ್ಗತಿಗೆ ಬಾಹಿರರಾಗುತ್ತಾರೆ. ಗೋಪಾಲಕರಾದ ನಾವು ಗೋ ಸಮೃದ್ಧಿಗಾಗಿ ಸಾತ್ವಿಕವಾದ ಪೂಜನೆಯನ್ನೇ ಕೈಗೊಳ್ಳಬೇಕೇ ಹೊರತು ತಾಮಸೀ ಪ್ರವೃತ್ತಿಯ ವಿಧಾನವನ್ನಲ್ಲ. ಹಾಗಾಗಿ ದೇವರನ್ನು ಸಂಕಲ್ಪ ಮಾಡಿ ನಮ್ಮ ಹಸುಗಳಿಗೆ ಮೇವು ನೀಡುವ ಗೋವರ್ಧನ ಪರ್ವತವನ್ನು ದೇವರೆಂದು ಪೂಜಿಸೋಣ. ನಮ್ಮ ಸಲಕರಣೆಗಳೇ ನಮ್ಮ ಜೀವನಾಧಾರ ಆಯುಧಗಳು, ಗೋವುಗಳೇ ನಮ್ಮ ಸಂಪತ್ತು. ಇವುಗಳೆಲ್ಲವನ್ನೂ ಪೂಜಿಸೋಣ. ಕೃಷಿಕನಾದವ ಕೃಷಿ, ಉತ್ಪನ್ನ, ಸಾಮಾಗ್ರಿಯಾದ ಉಪಕರಣಗಳನ್ನೂ, ವ್ಯಾಪಾರಿಯಾದವ ಆತನ ವ್ಯಾಪಾರ ಕೇಂದ್ರವನ್ನೂ, ಹೀಗೆ ಅವರವರ ಜೀವನಾಧಾರ ವಿಚಾರಗಳಲ್ಲೇ ದೇವರನ್ನು ಸಂಕೇತಿಸಿ ಸಂಕಲ್ಪ ಮಾಡಿ, ವಿಶ್ವಾಸದಿಂದ ಪೂಜಿಸಬೇಕು. “ವಿಶ್ವಾಸೋ ಫಲ ದಾಯಕಃ” ಎಂಬ ಮಾತಿನಂತೆ ನಮ್ಮ ವಿಶ್ವಾಸವೇ ಫಲ ನೀಡುತ್ತದೆ. ಎಂದು ಸವಿವರವಾಗಿ ವಿವರಿಸಿದ ಶ್ರೀ ಕೃಷ್ಣ.

ಇದನ್ನೆಲ್ಲಾ ಕೇಳಿ ಆಲೋಚಿಸಿದ ಹಿರಿಯರು ಆತನ ವಾದವನ್ನು ಒಪ್ಪಿದರಾದರೂ, ಇಂದ್ರನ ಕೋಪಕ್ಕೆ ತುತ್ತಾಗಿ ಮಳೆ ಬಾರದೇ ಇದ್ದರೆ ಬರಗಾಲ ಬಂದರೆ ಎಂಬ ಸಂದೇಹ ತೆರೆದಿಟ್ಟರು. ಹಿರಿಯರೇ, ಜಗದ ನಿಯಮ ಮೀರುವ ಅಧಿಕಾರ ಯಾರಿಗೂ ಇಲ್ಲ. ಸೂರ್ಯ ದೇವರನ್ನು ಬೈದರೂ, ಅಥವಾ ಅರ್ಘ್ಯವಿತ್ತು ಪೂಜಿಸಿದರೂ ಸೂರ್ಯ ಉದಯಿಸಿ ತನ್ನ ಕರ್ತವ್ಯ ನಿಭಾಯಿಸುತ್ತಾನೆ. ನಿಯತಿಯ ನಿಯಮ ಮೀರಿ ಅಷ್ಟ ದಿಕ್ಪಾಲಕರು ವ್ಯವಹರಿಸುವ ಹಾಗಿಲ್ಲ. ಹಾಗೆಂದು ನಿಂದಿಸುವ ಯಾ ಅರ್ಘ್ಯ ನೀಡುವ ಕರ್ಮಿ ಆತನ ಕರ್ಮ ಫಲಾನುಸಾರ ಗತಿ ಪ್ರಾಪ್ತಿಸಿಕೊಳ್ಳುತ್ತಾನೆ. ಅಂದರೆ ಪಾಪವೋ ಪುಣ್ಯವೋ ಎಂಬುವುದು ತೀರ್ಮಾನಗೊಳ್ಳುತ್ತದೆ. ಇಂದ್ರಪೂಜೆ ಮಾಡುವ ನೇರ ಅಧಿಕಾರ ನಮಗಿಲ್ಲದ ಕಾರಣ, ಅಪಚಾರವಾಗುವ ಕೆಲಸ ಮಾಡದೆ, ನಮಗೆ ಯಾವುದು ಸೂಕ್ತವೋ ಅದನ್ನೇ ಸಂಕಲ್ಪವಾಗಿಸಿ ಮಾಡುವುದೇ ಶ್ರೇಯಸ್ಕರ ಎಂಬುವುದು ನನ್ನ ಅಭಿಮತ. ಹೀಗೆ ಕೃಷ್ಣನ ಸಮರ್ಥನೆ ಎಲ್ಲರ ಮುಂದೆ ಮಂಡಿಸಲ್ಪಟ್ಟಿತು.

ಈ ತನಕ ಕೃಷ್ಣನಿಂದಾದ ಅತಿಮಾನುಷ ಶಕ್ತಿ, ಲೀಲೆಗಳು, ರಾಕ್ಷಸರ ವಧಾ ವೃತ್ತಾಂತಗಳು ಎಲ್ಲಾ ಸೇರಿ ‘ಕೃಷ್ಣ’ ವಿಶೇಷ ವ್ಯಕ್ತಿತ್ವದ ಗೌರವ ಸಂಪಾದಿಸಿದ್ದನು. ಹಾಗಾಗಿ ಇಲ್ಲಿಯೂ ಕೃಷ್ಣ ಮಂಡಿಸಿದ ವಿಚಾರ ಸತ್ಯವಾಗಿರಬಹುದು ಎಂಬ ನಂಬಿಕೆ ಮೂಡಿತು. ನಂದಗೋಪನೂ ಎದ್ದು ಯಜಮಾನನಾದ ಉಪನಂದನಿಗೆ ಕೃಷ್ಣನ ಸಲಹೆ ಅಂಗೀಕರಿಸಿ ಗೋವರ್ಧನ ಪೂಜೆ ಮಾಡಲು ಆದೇಶ ನೀಡಿದನು. ಅದರಂತೆ ಇಂದ್ರನಿಗೆ ಪ್ರಾಣಿ ಬಲಿ ನೀಡುವ ಪೂಜೆ ನಿಲ್ಲಿಸಿ ಸಾತ್ವಿಕ ಆರಾಧನೆಯ ಗೋವರ್ಧನ ಪೂಜೆಯ ಸಿದ್ಧತೆ ಆರಂಭವಾಯಿತು.

ಅದರಂತೆಯೇ ಬಗೆ ಬಗೆಯ ಭಕ್ಷ, ಹೂ, ಹಣ್ಣು ಹಂಪಲು ಹಾಲು, ತುಪ್ಪ ಸಹಿತ ಗೋವರ್ಧನ ಗಿರಿಯ ಪೂಜೆ ಮಾಡ ತೊಡಗಿದರು. ಕೃಷ್ಣ ಇಲ್ಲಿ ಬಾಲಕನಾಗಿದ್ದರೂ ಷೋಡಶ ಪೂರ್ಣ ಕಳೆ ಸಹಿತ ಇಳಿದು ಬಂದ ಶ್ರೀಮನ್ನಾರಾಯಣನ ಅವತಾರವಲ್ಲವೇ? ತನ್ನ ಅಂಶದಿಂದಲೇ ಪುರುಷಾಕೃತಿಯಾಗಿ ಮೈದೋರಿ ಪೂಜೆಯ ಅರ್ಪಣೆಯನ್ನು ಸ್ವೀಕರಿಸಿ ಅನುಗ್ರಹಿಸತೊಡಗಿದ.

ಹೀಗೆ ಇಂದ್ರ ಪೂಜೆ ನಿಲ್ಲಿಸಿ, ಗೋವರ್ಧನ ಗಿರಿ ಪೂಜೆ ಮಾಡಿದ ಕಾರಣ ನೆಪವಾಗಿಸಿ, ಕೃಷ್ಣನ ಮಹಿಮಾ ವಿಶೇಷವನ್ನು ಸುವ್ಯಕ್ತಗೊಳಿಸುವುದಕ್ಕಾಗಿ ಇಂದ್ರನು ಯೋಚಿಸಿ ಯೋಜನೆಯೊಂದನ್ನು ಪೂರಕವಾಗಿ ನಿಯೋಜಿಸಿದನು. ಅದರಂತೆ ಅಕಾಲಿಕವಾಗಿ “ಸಂವರ್ತಕಾದಿ” ಕಾರ್ಮೋಡಗಳ ಮೂಲಕ ನಂದಗೋಕುಲದವರು ಬಂದು ನೆಲೆಸಿದ ಗೋವರ್ಧನ ತಪ್ಪಲು ಪ್ರದೇಶದ ಮೇಲೆ ಗುಡುಗು ಸಿಡಿಲು ಮಿಂಚು ಸಹಿತ ಮುಸಲಧಾರೆಯ ಮಳೆ ಸುರಿಸ ತೊಡಗಿದ. ಕಂಗೆಟ್ಟ ಗೊಲ್ಲರೂ, ಗೋವುಗಳೂ ಸಂಕಷ್ಟದಲ್ಲಿ ಸಿಲುಕಿ ಒದ್ದಾಡತೊಡಗಿದರು. ಶ್ರೀ ಕೃಷ್ಣ ಪರಮಾತ್ಮ ಎಲ್ಲರನ್ನು ಧೈರ್ಯ ತಾಳಲು ಹೇಳಿ, ನಮ್ಮ ದೇವರಾದ ಗೋವರ್ಧನ ಗಿರಿಯೇ ನಮಗೆ ಶ್ರೀರಕ್ಷೆ ನೀಡಲಿದೆ. ಗಿರಿಯನ್ನು ಕುರಿತು ಕೈ ಮುಗಿದು ರಕ್ಷಣೆಗಾಗಿ ಪ್ರಾರ್ಥಿಸಿ ತಳಕ್ಕೆ ಕೈಯಿಕ್ಕಿ ಕೊಡೆಯಂತೆ ಎತ್ತಿ ಹಿಡಿದ. ಕಿರು ಬೆರಳ ತುದಿಯಲ್ಲಿ ಪರ್ವತವೇ ಹತ್ತಿಯ ಭಾರ ತಳೆದು ನಿಂತಿತೋ ಎಂಬಂತೆ ಭಾಸವಾಗುತ್ತಿತ್ತು. ಗೋಪಾಲಕರೂ ಗೋವುಗಳೂ ಗಿರಿಯಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಆಹೋರಾತ್ರಿ ಏಳು ದಿನ ಕಾಲ ಮಳೆ ಸುರಿದರೂ ಏನೂ ತೊಂದರೆಯಾಗದಂತೆ ಗಿರಿಯಡಿಯಲ್ಲಿ ರಕ್ಷಣೆ ಪಡೆದ ಗೊಲ್ಲರು ಕೃಷ್ಣನ ಮಹಿಮಾ ಶಕ್ತಿ ಕಂಡು ಭಕ್ತಿಪರವಶರಾಗಿದ್ದರು.

ಎಂಟನೆಯ ದಿನ ಮಳೆ ನಿಂತು ಬಿಸಿಲು ಹರಡಿತು. ಗಿರಿ ತಪ್ಪಲಿನಿಂದ ನೀರು ಹರಿದು ಧುಮ್ಮಿಕ್ಕುತ್ತಾ ಇಳಿದು ಸಹಜ ಸ್ಥಿತಿ ಮರಳಿತು. ಪ್ರಕಟನಾದ ಇಂದ್ರ ಕೈ ಮುಗಿದು ಜಗನ್ನಿಯಾಮಕ – ತ್ರಿಲೋಕ ಪಾಲಕ ವಿಷ್ಣುವಿನ ಕೃಷ್ಣ ರೂಪ ಕಂಡು ಸಂಸ್ತುತಿಸಿ, ಸ್ತೋತ್ರ ಮುಖೇನ ವಂದಿಸಿದ. ಸೇರಿದ್ದ ಹಿರಿಯರನ್ನೆಲ್ಲಾ ಕರೆದು ಮಹಾತ್ಮನಾದ ಶ್ರೀ ಕೃಷ್ಣನಿಗೆ ” ಗೋವಿಂದ” ಪದವಿಯನ್ನಿತ್ತು ಪಟ್ಟಕಟ್ಟಿ ಸನ್ಮಾನಿಸ ಬೇಕೆಂದು ಸೂಚಿಸಿ ನಿರ್ದೇಶಿಸಿದ. ( “ಗೋವಿಂದ =ವೇದವಿದರಲ್ಲದ ಗೋವು – ಗೋಪಾಲಕರನ್ನು ರಕ್ಷಿಸಿದ ದೇವರು”. ಈ ಹೆಸರಿನ ಸ್ಮರಣೆ ಜನಸಾಮಾನ್ಯನಿಗೂ ದಿವ್ಯ ಮಂತ್ರದ ಸರ್ವ ಫಲ ನೀಡಬಲ್ಲ ವಿಶಿಷ್ಟ ಶಕ್ತಿ ಹೊಂದಿದೆ ಎಂಬುವುದು ಶಾಸ್ತ್ರ ಕಥಿತ ವಿಚಾರ ಸತ್ಯ).

ಇಂದ್ರನ ಆದೇಶದಂತೆ ಗೋವರ್ಧನ ಗಿರಿ ತಪ್ಪಲಿನಲ್ಲಿ ಸ್ವರ್ಗದ ಕಾಮಧೇನುವನ್ನೇ ಕರೆಸಿ ಅದರ ಕೆಚ್ಚಲಿನ ಕೊಡವಾಲಿನಿಂದ ಅಭಿಷೇಕಗೈದರು. ಸರ್ವಾಂಗಗಳಿಗೂ ದಿವ್ಯ ವಸನ ಆಭರಣಗಳಿಂದ ಕೃಷ್ಣನನ್ನು ಅಲಂಕರಿಸಿದರು. ಗೋವುಗಳೂ ಕೃಷ್ಣನ ಹಿಂದೆ ನಿಂತವು. ಇಂದ್ರನು ಸುಂದರವಾದ ಸ್ವರ್ಗದ ಕೊಳಲು ಒಂದನ್ನು ಕೃಷ್ಣನಿಗೆ ಕಾಣಿಕೆಯಾಗಿ ಅರ್ಪಿಸಿದನು. ” ಕೃಷ್ಣನಿಗೆ ಜಯವಾಗಲಿ“.. ” ಗೋವಿಂದನಿಗೆ ಜಯವಾಗಲಿ“…ಎಂಬ ಘೋಷಣೆ ಮೊಳಗತೊಡಗಿತು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page