28.9 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 67

ಭರತೇಶ್ ಶೆಟ್ಟಿ ,ಎಕ್ಕಾರ್

ಕಂಸನಿಗೇನೋ ಗೊಂದಲ ಕುಳಿತಲ್ಲಿ ಕುಳಿತಿರಲಾಗದು, ಮಲಗಿದರೆ ನಿದ್ದೆ ಹತ್ತದು, ಊಟದ ರುಚಿ ನಾಲಗೆ ಗ್ರಹಿಸದು. ಮನದಲ್ಲೊಂದೇ ಯೋಚನೆ! ಅಶರೀರವಾಣಿ ಸುಳ್ಳಾಗಲು ಸಾಧ್ಯವೇ? ನಿಜವಾಗುವುದು ಹೌದೇ ಆದರೆ, ನನ್ನ ಮರಣ ಕಾಲ ಸನ್ನಿಹಿತವಾಯಿತೇ? ಹಾಗಾಗಬಾರದು… ಪರಿಹರಿಸುವ ಬಗೆ ಹೇಗೆ? ಯೋಚಿಸಿ – ಯೋಜಿಸಿ ಏನೇನೋ ಚಿಂತೆ – ಚಿಂತನೆಗಳು ಸಾಲುಗಟ್ಟಿದವು.

ಇತ್ತ ವಸುದೇವನಂತೂ ಪರಮ ಸಂತೋಷಗೊಂಡಿದ್ದ. ಪತ್ನಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಕ್ಕಳೇ ಇರದ ನನ್ನ ಬಾಳಿಗೊಂದು ಬೆಳಕು ಮೂಡಿದೆ. ಕಂಸನಿಗೆ ನೀಡಿದ ವಾಗ್ದಾನ ನೆನಪಾದೊಡೆ ಸಂತಸದ ಗಿರಿ ಶೃಂಗ ಏರಿ ಜಗದ ಸೊಬಗು ಕಂಡು, ಜಾರಿ ಪ್ರಪಾತಕ್ಕೆ ಬಿದ್ದ ಅನುಭವವಾಯಿತು. ಸಾತ್ವಿಕನಾದ ವಸುದೇವ ಒರೆದ ವಚನದಂತೆ ಮಗುವನ್ನೆತ್ತಿಕೊಂಡು ಮಥುರಾಧೀಶನ ಮುಂದೆ ಬಂದ. ಮಗುವನ್ನು ತೋರಿಸಿ, ಹೇಳಿದ ಇಗೋ ನನ್ನ ಮೊದಲ ಮಗು. ಪರಮ ಸಂತುಷ್ಟನಾದ ಕಂಸ, ಮಗುವನ್ನು ನೋಡಿಯಲ್ಲ – ವಸುದೇವನ ಪ್ರಾಮಾಣಿಕತೆಗೆ. ಮೆಚ್ಚಿ ಹೇಳಿದ ನನಗೆ ಆಪತ್ತು ಎಂಟನೇ ಮಗುವಿನಿಂದಲ್ಲವೇ ? ಈ ಮಗು ಇರಲಿ ಹೋಗು ಸಾಕಿ ಸಲಹು ಎಂದು. ಹೀಗೇ ಕಾಲಾಂತರದಲ್ಲಿ ಆರು ಮಕ್ಕಳನ್ನೂ ಪ್ರಾಮಾಣಿಕನಾಗಿ ವಸುದೇವ ಕಂಸನ ಮುಂದೆ ಒಯ್ದಾಗ.. ಹೀಗೆಯೇ ನೋಡಿ, ಬದುಕಲಿ ಎಂದು ಬಿಡುತ್ತಿದ್ದ. ಇತ್ತ ದೇವಕಿಗೋ ಪರಮಾಶ್ಚರ್ಯ. ಅಣ್ಣ ನನ್ನನ್ನೇ ಕೊಲ್ಲಲು ಮುಂದಾಗಿದ್ದ. ಆದರೆ ಈಗ ಕ್ರೌರ್ಯ ಮರೆತನೇ? ಮಕ್ಕಳು ಭಾಗ್ಯವಂತರೇ?

ಹೀಗಿರಲು ದೇವಕಿಯು ಏಳನೇ ಬಾರಿಗೆ ಗರ್ಭವತಿಯಾದಳು. ವಿಚಾರ ಕಂಸನವರೆಗೆ ಮುಟ್ಟಿತು. ಕಟ್ಟಾಳುಗಳನ್ನು ಕಾವಲಿಗಿರಿಸಿದನು. ದೇವಕಿಯ ಗರ್ಭಕ್ಕೆ ಮೂರ್ನಾಲ್ಕು ತಿಂಗಳಾದಾಗ ತನ್ನಿಂತಾನೆ ಗರ್ಭ ಮಾಯವಾಯಿತು. ಕರಗಿ ಹೋದ ಗರ್ಭದ ವಿಚಾರ ಕಂಸನಿಗೂ ಚಾರಕರಿಂದ ತಿಳಿಯಿತು.

ಆದರೆ ಶ್ರೀ ಹರಿಯಿಂದ ಸಂಕಲ್ಪಿಸಲ್ಪಟ್ಟ “ಮಾಯೆ” ಯು ಆ ಗರ್ಭವನ್ನು ದೇವಕಿಯ ಉದರದಿಂದ ವಸುದೇವನ ಹಿರಿಯ ಹೆಂಡತಿಯಾದ ರೋಹಿಣಿಯ ಗರ್ಭಾಶಯಕ್ಕೆ ವರ್ಗಾಯಿಸಿತ್ತು. ಈ ವಿಚಾರ ವಸುದೇವ ದೇವಕಿಗೂ ದೇವ ಪ್ರೇರಣೆಯ ಸೂಚನೆಯಿಂದ ತಿಳಿಯಿತು. ರೋಹಿಣಿಯನ್ನು ಗೌಪ್ಯವಾಗಿ ನಂದಗೋಕುಲಕ್ಕೆ ಕಳುಹಿಸಿ, ಪರಮ ಆಪ್ತನಾದ ನಂದ ಗೋಪನ ಬಳಿ ಬಿಟ್ಟರು. ರೋಹಿಣಿ ಗರ್ಭವತಿಯಾಗಿದ್ದಳು. ಅತೀ ಜಾಗರೂಕಳಾಗಿರುವಂತೆ ರೋಹಿಣಿಗೂ, ಎಚ್ಚರಿಕೆಯಿಂದ ಪಾಲಿಸುವಂತೆ ನಂದಗೋಪನಿಗೂ ವಿಜ್ಞಾಪಿಸಿದ ವಸುದೇವ.

ಈ ಪ್ರಕರಣದಲ್ಲಿ ಕಂಸನಿಗೆ ವಿಚಿತ್ರ ಸಿಟ್ಟೂ, ಸಂಶಯವೂ ಉದ್ಬವವಾಯಿತು. ನನ್ನ ಪ್ರೀತಿಯ ತಂಗಿ ದೇವಕಿ, ಅಣ್ಣನಿಗೆ ನನ್ನ ಎಂಟನೇ ಮಗನಿಂದ ಮರಣ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಗರ್ಭಧಾರಣೆಗೆ ಮುಂದಾಗುತ್ತಿರುವುದೇಕೆ? ನಿಂತ ಗರ್ಭ ಜಾರಿತು ಎಂಬ ವಿಚಾರದ ಮರ್ಮವೇನು? ಹೀಗೆ ಬಿಟ್ಟರೆ ಇನ್ನು ಕೆಲಸ ಕೆಟ್ಟಿತು ಎಂದು ತೀರ್ಮಾನಿಸಿದ. ದೇವಕಿ ವಸುದೇವರನ್ನು ಅವರ ಆರೂ ಮಕ್ಕಳ ಸಹಿತ ಮಥುರೆಗೆ ಕರೆಸಿದ. ಅಕ್ಷಮ್ಯ ನಿರ್ಧಾರಗೈದು ಆ ಆರು ಮಕ್ಕಳ ಶಿರಚ್ಛೇದನ ಮಾಡಿಯೇ ಬಿಟ್ಟ. ಹೆತ್ತ ಕರುಳು ಹೇಗೆ ಸಹಿಸಬೇಕು. ದೇವಕಿ ಸ್ಮೃತಿ ಹೀನಳಾಗಿ ಬಿದ್ದಳು. ಉಪಚಾರದಿಂದ ಎಚ್ಚೆತ್ತರೂ ಕಣ್ಣೀರಧಾರೆಯಲ್ಲೇ ಸ್ನಾನಗೈಯುತ್ತಾ ಬಿದ್ದಳು. ವಸುದೇವನಿಗೆ ಪ್ರತಿಭಟಿಸಲು ಸಾಧ್ಯವೇ? ದೇವಕಿಯನ್ನು ಸಂತೈಸುವುದೇ ಆತನ ಪಾಲಿಗೆ ಉಳಿದ ಕೆಲಸವಾಗಿತ್ತು. ಅಷ್ಟಕ್ಕೇ ಬಿಡದ ಕಂಸ, ವಸುದೇವ ದೇವಕಿಯರನ್ನು ಬಲಿಷ್ಠ ಕಬ್ಬಿಣದ ಸಂಕೋಲೆಗಳಿಂದ ಬಿಗಿದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿದನು. ಸಮಾಧಾನಗೊಳ್ಳದ ಆತ, ವಸುದೇವನ ಸಹಚರರು, ಮಿತ್ರರು, ಬಂಧುಗಳು, ಆಪ್ತರು ಯಾರಿದ್ದಾರೋ ಅವರನ್ನೆಲ್ಲಾ ಹುಡುಕಿ ಹುಡುಕಿ ತಂದು ಸೆರೆಗೆ ಹಾಕಿದ. ರಾಜ್ಯದೆಲ್ಲೆಡೆ ಗುಪ್ತಚರರನ್ನಟ್ಟಿ ತನಗೆ ಬೇಕಾದ ವಿಚಾರ ಸಂಗ್ರಹಣೆಗೆ ತೊಡಗಿದ. ಊಟ, ನಿದ್ರೆ, ರಾಜಕೀಯ, ವಿನೋದ, ಆಸ್ತಿ, ಅಂತಸ್ತು, ವೈಭವ ಯಾವುದೂ ಹಿತವಾಗದೆ ಅನಿಯಂತ್ರಿತ ಮರಣಭಯ ಬಾಧೆಯ ವ್ಯಥೆಯಿಂದ ಬಳಲತೊಡಗಿದ. ನಕರಾತ್ಮಕ ಚಿಂತನೆಯಿಂದ ಸಂಶಯ, ಆ ಸಂಶಯದಿಂದ ಅನುಮಾನ, ಬಲವಾಗುತ್ತಾ ಅದೇ ಸತ್ಯವೆಂದು ನಂಬಿಸುವ ಪ್ರಕ್ರಿಯೆ ಅಂತರಂಗದಲ್ಲಾಗುತ್ತದೆ. ಹಾಗೆಯೇ ಪರಿಣಮಿಸಿದ ಕಂಸನ ಸ್ಥಿತಿಯೂ ಏಳನೇ ಗರ್ಭದ ಕುರಿತಾಗಿ ಬಲವಾದ ಸಂದೇಹ ತಳೆದು ಮಥುರೆಯೊಳಗಿನ ಎಲ್ಲಾ ನವಜಾತ ಕೆಲಮಾಸ ಆಯುವಿನ ಎಳೆ ಹಸುಗೂಸುಗಳ ಕಗ್ಗೊಲೆಗೆ ಆಜ್ಞೆ ಮಾಡಿದ. ಇಲ್ಲ ಇಷ್ಟಕ್ಕೇ ಮನ ಶಾಂತವಾಗಲಿಲ್ಲ. ತಾನೇ ಸ್ವತಃ ಭಟರ ಜೊತೆಯಾಗಿ ಹೊರಟು ಎಲ್ಲೆಡೆ ಹುಡುಕಿದ – ಹುಡುಕಿಸಿದ. ರಾಜ್ಯ ಬಿಟ್ಟು ಯಾರೂ ಹೊರ ಹೋಗದಂತೆ ಸರ್ಪಗಾವಲು ಹಾಕಿ ಮಕ್ಕಳ ಕೊಲೆಗೈಯುತ್ತಾ ಸಾಗಿದ. ಕಾರಣ ತಾನು ಆಜ್ಞೆ ಮಾಡಿದ ಕೊಲೆಗಟುಕರು ಹರಿಯ ಮಾಯಾ ಮೋಡಿಗೆ ಒಳಗಾಗಿ, ಮಗುವಿನ ಮೇಲೆ ಕರುಣೆದೋರಿ ಬದುಕಗೊಟ್ಟರೆ ಎಂಬ ಭಯ. ಹೀಗೆ ಮೃತ್ಯುಭಯದಿಂದ ಶಿಶುಹತ್ಯೆಯಲ್ಲಿ ನಿರತನಾದ ಕಂಸ ತನ್ನ ರಾಜ್ಯದಲ್ಲಿ ಎಳೆ ಮಕ್ಕಳು ಇನ್ಯಾರೂ ಇಲ್ಲ ಎಂದು ಖಾತ್ರಿಯಾಗುವವರೆಗೆ ಜಾಲಾಡಿ ಶಿರ ಚೆಂಡಾಡಿದ. ಪ್ರಜೆಗಳ ದುಃಖ, ಕ್ರೋಧ, ಶಾಪವಾಗಿ ಕಂಸನತ್ತ ತಿರುಗತೊಡಗಿದವು.

ಸೆರೆವಾಸದ ಬಂಧನದಲ್ಲಿ ಹೆತ್ತಬ್ಬೆ ದೇವಕಿ ತನ್ನ ಮಕ್ಕಳ ಕಗ್ಗೊಲೆ ಕಣ್ಣೆದುರಲ್ಲೇ ನಡೆದು ಹೋದ ಘೋರ ದೃಶ್ಯ ನೆನೆದು ಪುತ್ರಶೋಕಗ್ರಸ್ತಳಾಗಿದ್ದಳು. ತರಚಿದ ಗಾಯ ಮಗುವಿಗಾದರೆ ಅಸಹನೀಯ ವೇದನೆ ಅನುಭವಿಸುತ್ತಾಳೆ ತಾಯಿಯಾದವಳು. ತಾನೇ ಹೆತ್ತ ಮಕ್ಕಳು ಕಣ್ಣ ಮುಂದೆಯೇ ರುಂಡ – ಮುಂಡ ಬೇರ್ಪಟ್ಟು, ಚಿಮ್ಮುವ ರಕ್ತದ ಮಡುವಿನಲ್ಲಿ ಹೊರಳಾಡಿ, ಅಲ್ಲಾಡಿ – ನರಳಾಡುವ ಕೈಕಾಲುಗಳ ಮುಂಡ, ಹತ ಪ್ರಾಣರಾಗುವ ಮಕ್ಕಳ ತುಂಡು ತುಂಡಾದ ಮೃತ ಶರೀರವನ್ನು ಕಂಡು ಬದುಕುಳಿದ ತನ್ನ ಪ್ರಾಣದ ಮೇಲೆಯೇ ಪ್ರತಿಕಾರ – ಜಿಗುಪ್ಸಾ ಭಾವ ತಳೆಯುವಂತಹ ಸ್ಥಿತಿ ಬಂದೊದಗಿತು. ವಸುದೇವನಿಗೇನು ವ್ಯಥೆಯಾಗುತ್ತಿಲ್ಲವೇ? ಅಂತಃಕರಣ ಕರಗಿ ಕೊರಗುತ್ತಿಲ್ಲವೇ? ಆದರೂ ಸಹಿಸುತ್ತಾ ಪತ್ನಿ ದೇವಕಿಯನ್ನು ಸಮಾಧಾನಿಸುತ್ತಿದ್ದ. ಹರಿಯೇ ನಮ್ಮ ಮಗನಾಗಿ ಹುಟ್ಟುತ್ತಾನೆ ಎಂದಾದರೆ ನಮಗೆಂತಹ ಕಠೋರ ಜೀವನ ಶಿಕ್ಷೆ ಪ್ರಾಪ್ತವಾದರೂ ಸಹಿಸಿ ಮರೆಯೋಣ ಎಂದು ಸಂತೈಸುತ್ತಿದ್ದ. ಹರಿ ಧ್ಯಾನಕ್ಕೆ ದೇವಕಿಯನ್ನೂ ಪ್ರೇರೇಪಿಸಿ ತಾನೂ ಧ್ಯಾನಸ್ಥನಾಗಿ ಕಾಲ ಕಳೆಯತೊಡಗಿದರು. ಇಬ್ಬರೂ ನಿರಂತರ ತಪಗೈಯುತ್ತಾ ತಪಸ್ವಿಗಳೇ ಆಗಿ ಹೋದರು. ವಸುದೇವನ ಬೆಳೆದ ಗಡ್ಡ ಕೆದರಿದ ಕೂದಲೂ ನೋಡುಗನ ನೋಟಕ್ಕೆ ಸಂನ್ಯಾಸಿ ಎಂಬಂತೆ ಭಾಸಗೊಳಿಸುತ್ತಿತ್ತು. ವಾಸ್ತವದಲ್ಲಿ ಏಕಾಗ್ರಚಿತ್ತದಲ್ಲಿ ಹರಿಧ್ಯಾನ ನಿರತ ಮೌನಿಯಾಗಿ ಮುನಿಯೂ, ತಪಗೈಯುವ ತಪಸ್ವಿಯೂ, ಹರಿಯಿಂದಲೇ ಮುಕ್ತಿ ಎಂಬ ಜ್ಞಾನ ಪಡೆದ ಋಷಿಯೂ ಆಗಿದ್ದ.

ಇತ್ತ ನಂದಗೋಕುಲದಲ್ಲಿ ವಸುದೇವನ ಜೇಷ್ಠ ಪತ್ನಿ ರೋಹಿಣಿ ನಂದಗೋಪನ ಆಶ್ರಯದಲ್ಲಿ ಗಂಡು ಮಗುವೊಂದಕ್ಕೆ ಜನ್ಮವಿತ್ತಳು. ಹರ್ಷ ಸಂತೋಷ ತುಂಬಿದರೂ ಈ ವಿಚಾರ ವಸುದೇವನಿಗೆ ತಲುಪಿಸಲು ಅಸಾಧ್ಯವೆಂದರಿತು ನಂದಗೋಪ ತಾಳ್ಮೆ- ಜಾಗ್ರತೆ ವಹಿಸಿದ. ಅದೇ ಕ್ಷಣದಲ್ಲಿ ಸೆರೆಮನೆಯೊಳಗಿದ್ದ ದೇವಕಿಗೂ ತನ್ನೊಡಲು ತಂಪಾದ ಹಾಗೆ ಭಾಸವಾಯಿತು. ಏನೋ ಸಂಚಲನವಾಗಿ ಎದೆ ತುಂಬಿದಂತಾಯಿತು. ಉಲ್ಲಾಸ ಉತ್ಸಾಹ ಮೂಡಿತು. ಎದೆ ಹಾಲು ತಾನಾಗಿ ಒಸರತೊಡಗಿತು. ಇಂತಹ ಆಹ್ಲಾದ ಉನ್ಮಾದಕರ ಬದಲಾವಣೆ ಸತಿಯಲ್ಲಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ವಸುದೇವ. ಎಣಿಸತೊಡಗಿದ… ಹೌದು… ರೋಹಿಣಿಗೆ ನವ ಮಾಸ ಕಳೆದು ಪ್ರಸವ ಕಾಲ ಸನ್ನಿಹಿತವಾಗಿದೆ. ಅಕ್ಷಯ ತದಿಗೆಯ ಈ ಪುಣ್ಯ ದಿನ ರೋಹಿಣಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಸತ್ಯವನ್ನು ಅರಿತುಕೊಂಡು ಸಂತಸಪಟ್ಟು ಸಂಭ್ರಮಿಸಿದ. ಮನಸ್ಸಿಗೆ ಮುದವಾದರೆ ಸೆರೆಮನೆಯೂ ಸ್ವರ್ಗದ ಸುಖ ನೀಡುತ್ತದೆ ಎಂಬಂತೆ ಆನಂದಿಸಿದರು ವಸುದೇವ ದೇವಕಿಯರು. ಕಣ್ಣೀರು ಮೌನ ಸಂಭಾಷಣೆಯ ಜೊತೆಗೆ ಹರಿಯತೊಡಗಿದರೂ, ಇಂದು ಮಾತ್ರ ಅದು ಎಂದಿನಂತಿರದೆ ಆನಂದ ಬಾಷ್ಪವಾಗಿತ್ತು.

ಮುಂದುವರಿಯುವುದು…

✍🏻 ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page