ಭಾಗ – 593
ಭರತೇಶ್ ಶೆಟ್ಟಿ, ಎಕ್ಕಾರು

ಚಂದ್ರಹಾಸ ಬೆಳೆಯುತ್ತಿದ್ದುದು ಕುಂತಳ ದೇಶದಲ್ಲಿ. ಅಲ್ಲಿನ ಅರಸನಿಗೆ ಒಂದು ದುಃಖವಿತ್ತು. ಏನೆಂದರೆ ತನ್ನ ನಂತರ ಉತ್ತರಾಧಿಕಾರಿಯಾಗಬಲ್ಲ ಮಗನಿಲ್ಲ. ತನಗೆ ದೇವರು ಗಂಡು ಸಂತಾನವನ್ನು ಅನುಗ್ರಹಿಸಿಲ್ಲ ಎಂಬ ಕೊರಗು ಆತನದ್ದಾಗಿತ್ತು. ಅರಸನಿಗೆ ಇದ್ದುದು ಒಬ್ಬಳೇ ಮಗಳು. ಈ ಕುಂತಳ ದೇಶದ ಅರಸನ ಮಂತ್ರಿಯಾಗಿದ್ದವನು ಮಹಾ ಕಪಟಿ, ಸ್ವಾರ್ಥಿ, ಕುತಂತ್ರಿ, ಸಮಯಸಾಧಕನಾದ ಧೃಷ್ಟಬುದ್ದಿ ಎಂಬವನು. ಆತನ ದುರ್ಬುದ್ದಿಗಾಗಿ ಜನರು ಆತನನ್ನು ದುಷ್ಟಬುದ್ದಿ ಎಂದೇ ತಾವು ತಾವು ಮಾತನಾಡುವಾಗ ತಮ್ಮೊಳಗೆ ಹಾಗೆಂದೇ ಕರೆಯುತ್ತಿದ್ದರು. ಹಾಗಾಗಿ ಈ ಮಂತ್ರಿಯ ಹೆಸರು ಆತನ ಗುಣವಿಶೇಷದಿಂದ “ದುಷ್ಟಬುದ್ದಿ” ಎಂದೇ ಜನಜನಿತವಾಗಿತ್ತು. ಆ ದುರ್ಬುದ್ದಿಯ ಮಂತ್ರಿಗೆ ಮದನ ಎಂಬ ಮಗನೂ, ವಿಷಯೆ ಎಂಬ ಮಗಳೂ ಇದ್ದರು. ದುಷ್ಟಬುದ್ಧಿಯ ಮಗ ಮದನನಿಗೂ ಈಗ ಸರಿ ಸುಮಾರು ಚಂದ್ರಹಾಸನ ಪ್ರಾಯ. ಮಗಳು ವಿಷಯೆ ತನ್ನಣ್ಣನಿಗಿಂತ ಎರಡು ಮೂರು ವರ್ಷ ಕಿರಿಯವಳು. ಕುಂತಳ ದೇಶದ ಅರಸನ ಮಗಳೂ ಮಂತ್ರಿಯ ಮಗಳು ವಿಷಯೆಯ ಪ್ರಾಯದವಳೇ. ಈಗಲೇ ಮಂತ್ರಿ ದುಷ್ಟಬುದ್ಧಿಯ ದೂರಾಲೋಚನೆಯೋ, ದುರಾಲೋಚನೆಯೋ ಎತ್ತಲೋ ಓಡತೊಡಗಿದೆ.. ಮನಸ್ಸಲ್ಲೇ ಮಂಡಿಗೆ ಮೆಲ್ಲುವವರಂತೆ ಯೋಚನೆ ಯೋಜನೆ ಹಾಕ ತೊಡಗಿದ್ದಾನೆ. ಏನೆಂದರೆ ಅರಸನ ಮಗಳನ್ನು ತನ್ನ ಮಗ ಮದನನಿಗೆ ಮದುವೆ ಮಾಡಿಸುವುದು. ಆ ಬಳಿಕ ನನ್ನ ಮಗನೇ ಈ ದೇಶದ ರಾಜ. ರಾಜ ಪುತ್ರಿ ನನ್ನ ಸೊಸೆ – ಅವಳೇ ಭವಿಷ್ಯದ ಮಹಾರಾಣಿ. ಅದಕ್ಕಾಗಿ ಅರಸನ ಜೊತೆ ಅತಿ ವಿನಯದ ನಾಟಕ, ನಿಷ್ಠಾವಂತ ಸೇವಕನಂತೆ ಕಪಟದ ವರ್ತನೆ, ಅರಸನ ವಿಶ್ವಾಸ ಸಂಪಾದನೆಗಾಗಿ ತನ್ನ ಆಪ್ತವರ್ಗವನ್ನು ಬಳಸಿಕೊಂಡು ಏನೇನೋ ಕೃತಕ ಸನ್ನಿವೇಶಗಳನ್ನು ಸೃಷ್ಟಿಸಿ ಮಂತ್ರಿಗಳು ಬಹಳ ಉತ್ತಮರು ಎಂದು ತೋರಿಸಿಕೊಳ್ಳುತ್ತಿದ್ದ. ಪ್ರಜಾ ಜನರಿಗೂ ಏನೇನೋ ಆಮಿಷಗಳನ್ನೊಡ್ಡಿ, ಪ್ರಲೋಭನೆಗೆ ಒಳಪಡಿಸಿ ತಾನು ಜನಾನುರಾಗಿ, ಪ್ರಜಾ ಚಿಂತಕ, ಶ್ರಮಜೀವಿ ಎಂಬಂತೆ ರಾಜನೆದುರು ಬಿಂಬಿಸಿಕೊಳ್ಳುತ್ತಾ ಶಹಬ್ಬಾಸ್ ಗಿರಿ ಪಡೆದು ಬೀಗುತ್ತಿದ್ದ. ದಿನಗಳೆದಂತೆ ಅರಸನಿಗೆ ಗಂಡು ಸಂತಾನವಾಗದ ಕೊರಗು ಮನದಲ್ಲಿ ಕೊರೆಯುತ್ತಲೇ ಇತ್ತು. ಪರಿಣಾಮವಾಗಿ ಆಡಳಿತದ ಆಸಕ್ತಿಯೂ ಕುಗ್ಗುತ್ತಿತ್ತು. ಇತ್ತ ಎಲ್ಲಿ ನೋಡಿದರೂ ಅರಸನಿಗೆ ಮಂತ್ರಿಯ ಕುರಿತಾದ ಹೊಗಳಿಕೆ, ಜನಾನುರಾಗದ ನುಡಿಗಳು, ಶ್ಲಾಘನೆಗಳೇ ಕಾಣಿಸುತ್ತಿದ್ದರಿಂದ ಹೆಚ್ಚಿನ ಜವಾಬ್ದಾರಿಗಳನ್ನು ಒಂದೊಂದಾಗಿಯೇ ಮಂತ್ರಿಯ ಅಧೀನಕ್ಕೆ ನೀಡುತ್ತಾ ತಾನು ಆಡಳಿತದಿಂದ ವಿಮುಖನಾಗತೊಡಗಿದ. ದಿನಗಳೆದಂತೆ ಎಲ್ಲವೂ ಮಂತ್ರಿಯ ಅಧಿಕಾರ ವ್ಯಾಪ್ತಿಗೇ ಬಂದು ಅರಸ ಕೇವಲ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಷ್ಟರ ಮಟ್ಟಿಗೆ ಬದಿಗೆ ಸರಿದು ಹೋಗಿದ್ದಾನೆ.
ಮಂತ್ರಿಗೆ ಹೊಗಳಿಸಿಕೊಳ್ಳುವ, ಪ್ರಚಾರ ಮಾಡಿಸಿಕೊಳ್ಳುವ ಚಟ. ತತ್ಪರಿಣವಾಗಿ ಏನಾದರೊಂದು ಮಾಡುತ್ತಾ ತನ್ನನ್ನು ಹಾಡಿ ಕೊಂಡಾಡುವ ಜನರ ವಲಯದಲ್ಲೇ ಇರುವಷ್ಟು ಚಪಲ ಆತನದ್ದಾಗಿ ಹೋಗಿದೆ. ಯಾರೋ ಸಲಹೆ ಕೊಟ್ಟರೆಂದು ಮಂತ್ರಿ ತನ್ನ ಮನೆಯಲ್ಲಿ ಬ್ರಾಹ್ಮಣ ಸಮಾರಾಧನೆ ನಡೆಸುವ ತೀರ್ಮಾನ ಕೈಗೊಂಡನು. ಬ್ರಾಹ್ಮಣರಿಗೆ ಅನ್ನದಾನ, ಕನಕ ಭೂಷಣ, ಗೋದಾನಾದಿಗಳನ್ನು ಮಾಡಿದರೆ ಪುಣ್ಯ ವಿಶೇಷ ಸಂಪಾದನೆಯಾಗುತ್ತದೆ. ಪುಣ್ಯಬಲ ಕೈಗೂಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ದಾನ ಪಡೆದು ಬ್ರಾಹ್ಮಣೋತ್ತಮರೂ ಎಲ್ಲೆಡೆ ಮಂತ್ರಿವರ್ಯರು ಬಹಳ ಉತ್ತಮರು, ಶ್ರೇಷ್ಠರು, ಉದಾರಿಗಳು ಎಂದು ಕೊಂಡಾಡುತ್ತಾ ಬರುತ್ತಾರೆ. ಮಾತ್ರವಲ್ಲ ನಿಮ್ಮನ್ನು ಹರಸಿ ಆಶೀರ್ವದಿಸುತ್ತಾರೆ. ಹೀಗೆಲ್ಲಾ ಕಿವಿ ತುಂಬಿದ ಪರಿಣಾಮವೇ ಈ ಆಯೋಜನೆ. ಖರ್ಚು ವೆಚ್ಚಗಳೆಲ್ಲವೂ ಅರಮನೆಯ ಬೊಕ್ಕಸದಿಂದಲೇ, ಆದರೂ, ಸಮಾರಾಧನೆ ಮಾತ್ರ ಮಂತ್ರಿಗಳ ಮನೆಯಲ್ಲಿ. ಯಾರದ್ದೋ ದುಡ್ಡಿನಿಂದ ಈತ ದೊಡ್ಡಪ್ಪನಾಗುವ ಯೋಜನೆ. ಹೆಸರು ಪ್ರಚಾರದ ತೆವಲಿನಲ್ಲಿ ಹೀಗೆಲ್ಲಾ ಮಾಡುತ್ತಿದ್ದಾನೆ. ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣರನ್ನೆಲ್ಲಾ ಆಮಂತ್ರಿಸಿದ್ದಾನೆ, ತಪೋನಿಧಿಗಳೂ, ಋತ್ವಿಜರೂ, ವಿಪ್ರೋತ್ತಮರೂ, ಜ್ಯೋತಿಷಿಗಳೂ, ಅನುಷ್ಠಾನ ಕರ್ಮಿಗಳೂ ಹೀಗೆ ಎಲ್ಲರೂ ಬಂದು ನೆರೆದಿದ್ದಾರೆ. ಎಲ್ಲರ ಜೊತೆಗೆ ಊರ ಪ್ರಜಾ ಜನರಿಗೂ ಸಾರ್ವಜನಿಕ ಭೋಜನ ಕೂಟದ ವ್ಯವಸ್ಥೆಯಾಗಿದೆ.
ಬಂದಂತಹ ವರ್ಣೋತ್ತಮರಿಗೆ ಕೈತುಂಬಾ ದಕ್ಷಿಣೆ, ವಿಧ ವಿಧ ದಾನ, ಧರ್ಮಗಳನ್ನು ನೀಡುತ್ತಿದ್ದಾನೆ. ರಾಜ್ಯದ ಪ್ರಜಾಪರಿವಾರವೂ ಹೊಟ್ಟೆ ತುಂಬ ಉಂಡು, ಸಿಗುವ ದಾನದ ಆಸೆಯಿಂದ ಬಂದು ಸೇರಿದೆ. ಚಂದ್ರಹಾಸನು ಇರುವ ಕೇರಿಯ ನೆರೆಹೊರೆಯ ಬಡ ಜನರು ಊಟ ಮತ್ತು ಸಿಗಬಹುದಾದ ದಾನದ ಆಸೆಯಿಂದ ಕುಂತಳ ದೇಶದ ಮಂತ್ರಿಯ ಮನೆಯತ್ತ ಬಂದಿದ್ದಾರೆ. ಹಾಗೆ ಹೋಗುವಾಗ ತಮ್ಮ ಜೊತೆಯಲ್ಲಿ ಬಾಲಕ ಚಂದ್ರಹಾಸನನ್ನು ಕರಕೊಂಡು ಹೋಗಿದ್ದಾರೆ. ಅಲ್ಲೊಂದು ವಿಸ್ಮಯವೇ ನಡೆದು ಹೋಯಿತು.
ಮಂತ್ರಿಯ ಮನೆಗೆ ಬಂದವರಲ್ಲಿ ಸಕಲ ಶಾಸ್ತ್ರ ಪಾರಂಗತರಾದ, ಜ್ಯೋತಿಷ್ಯಾಸ್ತ್ರ ಪ್ರವೀಣರೂ, ಸುಜ್ಞಾನಿಗಳೂ ಆದ ಬ್ರಾಹ್ಮಣೋತ್ತಮರೋರ್ವರು ಇದ್ದರು. ಅವರ ಕಣ್ಣಿಗೆ ಬಂದು ಸೇರಿದ ಊರ ಜನರ ಮಧ್ಯದಲ್ಲಿದ್ದ ಚಂದ್ರಹಾಸ ಕಾಣಿಸಿದ. ಕಣ್ಣು ಅಲುಗಿಸದೆ ಮಗುವನ್ನೇ ನೋಡುತ್ತಾ ಆತನ ಅಂಗ ಲಕ್ಷಣ, ತೇಜಸ್ಸನ್ನು ಗುರುತಿಸಿ ವಿವೇಚಿಸ ತೊಡಗಿದ್ದಾರೆ. ಹೀಗೆ ತದೇಕಚಿತ್ತರಾಗಿ ಪ್ರಜಾಪರಿವಾರದತ್ತ ನೋಡುತ್ತಿರುವ ಆ ಬ್ರಾಹ್ಮಣೋತ್ತಮರನ್ನು ಗಮನಿಸಿದ ಮಂತ್ರಿ ದುಷ್ಟಬುದ್ದಿ ಅವರ ಬಳಿ ಸಾಗಿದನು. ಮಂತ್ರಿವರ್ಯ ಬಳಿ ಬಂದುದನ್ನು ಗಮನಿಸಿ “ಮಂತ್ರಿಗಳೇ, ಓ ಅಲ್ಲಿ ನಿಂತಿರುವ ಆ ಬಾಲಕ ಯಾರು?” ಎಂದು ಪ್ರಶ್ನಿಸಿದರು.
ಆಗ ಮಂತ್ರಿ ದುಷ್ಟಬುದ್ದಿ “ಪೂಜ್ಯರೇ, ಅದ್ಯಾರೋ ನಮ್ಮ ಪ್ರಜೆಗಳ ಜೊತೆ ಊಟಕ್ಕೆ ಬಂದಿರುವ ಹಳ್ಳಿ ಬದಿಯ ಮಗು ಇರಬೇಕು. ಯಾಕಾಗಿ ಕೇಳಿದಿರಿ ಸ್ವಾಮಿ?” ಎಂದು ವಿಸ್ಮಯದಿಂದ ಕೇಳಿದ.
ಆಗ ಆ ವರ್ಣೋತ್ತಮರು ಹೇಳಿದ ಉತ್ತರದಿಂದ ಮಂತ್ರಿ ದುಷ್ಟಬುದ್ದಿ ತತ್ತರಿಸಿ ಹೋದನು.
ಮುಂದುವರಿಯುವುದು…


















































