ಭಾಗ – 581
ಭರತೇಶ ಶೆಟ್ಟಿ,ಎಕ್ಕಾರು

ಅತ್ತ ರಣಕ್ಷೇತ್ರದಲ್ಲಿ ಎರಡೂ ಕಡೆಯ ಸೇನೆ ಯುದ್ದ ವಿರಾಮ ಘೋಷಿಸಿ ತಮ್ಮ ಸೇನಾ ನಾಯಕರಿಗಾಗಿ ಕಾಯುತ್ತಿವೆ. ರತ್ನಪುರದ ಸೇನಾನಾಯಕ ತಾಮ್ರಧ್ವಜನಾಗಲಿ, ಪಾಂಡವ ಸೇನಾಧ್ಯಕ್ಷ ಅರ್ಜುನನಾಗಲಿ, ಕೃಷ್ಣನಾಗಲಿ ರಣಕ್ಷೇತ್ರದಲ್ಲಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇತ್ತಂಡಗಳೂ ಯುದ್ದ ಮಾಡದೇ ವಿರಮಿಸಿ ಕಾಯುವಂತಾಗಿದೆ.
ಮತ್ತೊಂದೆಡೆ ಯಾಗಶಾಲೆಯಲ್ಲಿ ಮಹಾರಾಜ ಮಯೂರಧ್ವಜ ಕಂಬಗಳೆಡೆಯಲ್ಲಿ ಸಿಲುಕಿ ತಲೆ ಸೀಳಲ್ಪಟ್ಟು ರಕ್ತ ಒಸರದಂತೆ ಕುಮುದ್ವತಿ ಕೊಯ್ದ ಶಿರವನ್ನು ಜೋಡಿಸಿ ಹಿಡಿದಿಟ್ಟ ಸ್ಥಿತಿಯಲ್ಲಿದ್ದಾರೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಾಮ್ರಧ್ವಜ ಓಡಾಡುತ್ತಾ ದಾನ ಬೇಡಿ, ತಿರಸ್ಕರಿಸಿ ಯಾಗ ಶಾಲೆ ತೊರೆದು ಹೊರಟು ಹೋಗಿರುವ ಬ್ರಾಹ್ಮಣರನ್ನು ಹುಡುಕುತ್ತಿದ್ದಾನೆ. ಕಾಣ ಸಿಕ್ಕರೆ ಹೇಗಾದರು ಕಾಡಿ ಬೇಡಿ, ಕೈಕಾಲು ಹಿಡಿದು ಮರಳಿ ಯಾಗ ಶಾಲೆಗೆ ಕರೆದೊಯ್ಯಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾನೆ. ದಾರಿಯಲ್ಲಿ ಸಿಕ್ಕ ಸಿಕ್ಕವರಲ್ಲಿ “ಗುರು ಶಿಷ್ಯ ಬ್ರಾಹ್ಮಣರೀರ್ವರನ್ನು ನೋಡಿದಿರಾ? ದಯವಿಟ್ಟು ನೀವು ಹುಡುಕಿ, ನಿಮಗೆ ಸಿಕ್ಕರೆ ತಕ್ಷಣ ನನ್ನನ್ನು ಕರೆಯಿರಿ” ಎಂದು ಪ್ರಜಾ ಜನರಿಗೂ ತಿಳಿಸುತ್ತಿದ್ದಾನೆ. ಎಲ್ಲರೂ ಎಲ್ಲೆಡೆ ಓಡಾಡತೊಡಗಿದ್ದಾರೆ. ಹೀಗೆ ಅರಸುತ್ತಿರುವ ಅರಸು ಕುಮಾರ ತಾಮ್ರಧ್ವಜನ ಗಂಟಲಿನ ತೇವ ಆರಿತು. ಏಳು ಅಶ್ವಮೇಧ ಯುದ್ಧದಲ್ಲಿ ಹೋರಾಡಿ ಗೆದ್ದು ಬಂದಿದ್ದ ಮಹಾವಿಕ್ರಮಿಯ ಕೈಕಾಲುಗಳೂ ಸೋತು ಬಸವಳಿದು ಹೋದವು. ಎಲ್ಲೆಲ್ಲಿ ತಡಕಾಡಿದರೂ ಬ್ರಾಹ್ಮಣರೀರ್ವರ ಪತ್ತೆಯಿಲ್ಲ. ದಿಕ್ಕೇ ತೋಚದಾಗಿ ಹೋಯಿತು. ಯಾಕೆಂದರೆ ಒಂದೆಡೆ ತಂದೆ ಮಯೂರಧ್ವಜ ಮಾರಣಾಂತಿಕವಾಗಿ ತಲೆ ಸೀಳಲ್ಪಟ್ಟು ಸಾವು ಬದುಕಿನ ಮಧ್ಯದ ಹೋರಾಟದಲ್ಲಿದ್ದಾರೆ. ಇತ್ತ ಈ ಬ್ರಾಹ್ಮಣರೂ ಕಣ್ಣಿಗೆ ಕಾಣದಾಗಿದ್ದಾರೆ. ತಾಮ್ರಧ್ವಜನ ಮನಸ್ಸು ಗೊಂದಲದ ಗೂಡಾಗಿದೆ. ಒಂದು ದಾರಿ ಹಿಡಿದು ಓಡುತ್ತಾನೆ. ಸುಮಾರು ದೂರ ಸಾಗಿ, ಈ ದಾರಿಯಲ್ಲಿ ಬಂದಿರಲಿಕ್ಕಿಲ್ಲ ಎಂದು ತಿರುಗಿ ಮತ್ತೊಂದೆಡೆ ಓಡುತ್ತಿದ್ದಾನೆ. ಮನಸ್ಸು ಆತಂಕಕ್ಕೊಳಗಾಗಿ ಆತುರದಿಂದ ಏನೇ ಕೆಲಸ ಮಾಡಿದರೂ ಉದ್ವೇಗಕ್ಕೊಳಗಾಗಿ ಮಾಡುವ ಕೆಲಸ ಸಾರ್ಥಕತೆಯನ್ನು ಕಾಣುವುದಿಲ್ಲ. ಮನಸ್ಸು ಗೊಂದಲಗೊಂಡಿರುವಾಗ ಕುದಿಯುವ ನೀರಿನಂತಾಗಿರುತ್ತದೆ. ಅಂತಹ ಕುದಿ ನೀರಿನಲ್ಲಿ ಇಣುಕಿ ನೋಡಿದರೆ ಪ್ರತಿಫಲನದ ಬಿಂಬ ಕಾಣಿಸದು. ಅದೇ ಶಾಂತವಾಗಿ ಅಲುಗದೆ ನಿಂತ ತಿಳಿ ನೀಲ ನೀರಿಗೆ ಬಾಗಿ ನೋಡಿದರೆ ಪ್ರತಿಬಿಂಬ ಗೋಚರಿಸುತ್ತದೆ. ಅಂತೆಯೇ ಆಪತ್ತು ಬಂದೊದಗಿದರೂ, ಪ್ರಶಾಂತವಾದ ಮನಸ್ಸಿನಿಂದ ಆವೇಶಕ್ಕೊಳಗಾಗದೆ, ವಿವೇಚನೆಯಿಂದ ಮಾಡುವ ವಿವೇಕ ಪೂರ್ಣವಾದ ಕೆಲಸ ಪ್ರತಿಫಲ ನೀಡುವುದರ ಜೊತೆಗೆ ಪೂರ್ಣಗೊಳ್ಳುತ್ತದೆ. ಈಗ ತಾಮ್ರಧ್ವಜನೂ ಒಂದೆಡೆ ನಿಂತು ಯೋಚಿಸ ತೊಡಗಿದ. ‘ಸಂಕಟ ಬಂದಾಗ ವೆಂಕಟರಮಣ’ ಎಂಬ ರೂಢಿಯ ಮಾತಿದೆ. ‘ಅನ್ಯತಾ ಶರಣಂ ನಾಸ್ತಿ’ ಎಂದೂ ಶಾಸ್ತ್ರಗಳು ಸಾರಿ ಹೇಳಿವೆ. ಅಂತೆಯೇ ತರ್ಕಿಸಿದ ತಾಮ್ರಧ್ವಜನು ಮನಸಾರೆ ದೇವರನ್ನು ಪ್ರಾರ್ಥಿಸಿ “ದೇವರೇ ಈ ವರೆಗಿನ ನನ್ನ ಜೀವನದಲ್ಲಿ ಅರಿತು ಯಾವ ಅಧರ್ಮವನ್ನೂ ನಾನು ಮಾಡಿದವನಲ್ಲ. ದೈವವೇ ಪರಮೋತ್ಕೃಷ್ಟ ಶಕ್ತಿಯೆಂದೇ ನಂಬಿ ಬದುಕಿದವನು. ದೈವ ಸಂಕಲ್ಪವಿಲ್ಲದೆ ಏನೂ ಆಗದು ಎಂದೇ ತಿಳಿದವನು. ಈ ರೀತಿಯ ನೈತಿಕ, ಧಾರ್ಮಿಕ, ನ್ಯಾಯಯುತವಾದ ಬದುಕನ್ನು ಕಲಿಸಿಕೊಟ್ಟ ನನ್ನ ತಂದೆಯವರು ತನ್ನ ಜೀವವನ್ನೇ ಬಲಿದಾನ ನೀಡುವಷ್ಟರ ಮಟ್ಟಿನ ತ್ಯಾಗಕ್ಕೆ ಮುಂದಾಗಿರುವ ಈ ಹೊತ್ತು ದಾನ ಸ್ವೀಕರಿಸಬೇಕಾದ ಬ್ರಾಹ್ಮಣೋತ್ತಮರನ್ನೇ ಕಾಣದೆ ಕಂಗಾಲಾಗಿ ಹೋಗಿದ್ದೇವೆ. ದೇವರೇ ಇದೋ ನಾನು ನಿಷ್ಠೆಯ ಬದುಕನ್ನು ಬದುಕಿರುವುದೇ ಹೌದಾದರೆ, ನನ್ನ ಈ ಶ್ರಮಕ್ಕೆ ಪ್ರತಿಫಲವಾಗಿ ಆ ಗುರುಶಿಷ್ಯರೀರ್ವರನ್ನು ಕಾಣಿಸಿಕೊಡಬೇಕು. ಅವರು ನನ್ನ ಬೇಡಿಕೆ ಮನ್ನಿಸಿ ತಂದೆಯವರ ಅರ್ಧಶರೀರ ದಾನವನ್ನು ಸ್ವೀಕರಿಸಲು ಜೊತೆಯಾಗಿ ಬರುವಂತೆ ಅನುಗ್ರಹಿಸು ದೇವಾ.. ಕರುಣೆದೋರಿ ಕಾಪಾಡಬೇಕು ದೇವರೇ…” ಎಂದು ಆರ್ತನಾಗಿ ತನ್ಮಯತೆಯಿಂದ ವಾಸುದೇವನನ್ನು ಮನಸಾ ಧ್ಯಾನಿಸಿ ಪ್ರಾರ್ಥಿಸಿದ.
ನಂತರ ದಾರಿಯಲ್ಲಿ ಕೆಲ ಹೆಜ್ಜೆ ಮುಂದೆ ಸಾಗಿ ತಿರುವು ದಾರಿಯಲ್ಲಿ ನೋಡಿದಾಗ ಗುರು ಶಿಷ್ಯರು ನಡೆದು ಕೊಂಡು ಹೋಗುವುದು ಕಾಣಿಸಿತು. ಕೂಡಲೇ ಅವರತ್ತ ಓಡಿ ಹೋಗಿ ವೃದ್ಧ ಬ್ರಾಹ್ಮಣರ ಪಾದ ಹಿಡಿದು “ಸ್ವಾಮೀ ನೀವು ಕೃಪೆದೋರಬೇಕು.” ಎಂದು ಕಣ್ಣೀರಿಳಿಸುತ್ತಾ ಬೇಡಿದನು.
“ಅಯ್ಯೋ ಯುವರಾಜರೇ! ಏಳಿ ಎದ್ದೇಳಿ.. ಇದೇನು ನಿಮ್ಮ ವರ್ತನೆ? ಯಾಕೆ ಹೀಗೆ ರೋದಿಸುತ್ತಿರುವಿರಿ? ನನ್ನ ಸ್ವಾರ್ಥಕ್ಕಾಗಿ ನಿಮ್ಮ ತಂದೆಗೆ ಕೊಡಬಾರದ ತೊಂದರೆ ಕೊಡುವಂತಾಗಿ ಹೋಯಿತು. ಅತ್ತ ನನ್ನ ಮಗನೂ ಸಿಂಹದ ಕೈಯಲ್ಲಿ ಏನಾದನೋ ಗೊತ್ತಿಲ್ಲ. ಹಾಗಾಗಿ ಅರಣ್ಯದತ್ತ ಆದಷ್ಟು ಬೇಗ ಹೋಗಿ ನೋಡೋಣ ಎಂದು ಸಾಗುತ್ತಿದ್ದೆವು” ಎಂದು ಹೇಳಿ ತಾಮ್ರಧ್ವಜನನ್ನು ಏಳಲು, ಎದ್ದು ನಿಲ್ಲಲು ವಿನಂತಿ ಮಾಡಿದರು.
ಎದ್ದು ನಿಂತ ತಾಮ್ರಧ್ವಜನು “ಸ್ವಾಮೀ! ನಾನು ನಿಮ್ಮಲ್ಲಿ ಒಂದು ಭಿಕ್ಷೆ ಬೇಡುತ್ತೇನೆ. ನೀವು ನೀಡುತ್ತೇವೆ ಎಂದು ಮಾತು ಕೊಟ್ಟರಷ್ಟೇ ಕೇಳುತ್ತೇನೆ” ಎಂದು ಬೇಡಿದನು. “ಹಾಗೆಯೇ ಆಗಲಿ, ಕೇಳಿಕೋ” ಎಂದು ಬ್ರಾಹ್ಮಣರು ಹೇಳಿದಾಗ “ನೀವು ಭೂಸುರರು. ದೇವತಾ ಸಮಾನರು. ಈಗ ನಾನು ಕೇಳುವುದಕ್ಕೆ ಯಾಕೆ ಏನು ಎಂದು ನನ್ನಲ್ಲಿ ಪ್ರಶ್ನಿಸಬಾರದು. ನನ್ನ ತಂದೆಯವರು ನಿಮ್ಮನ್ನು ಕರೆತರಲೇ ಬೇಕೆಂಬ ಜವಾಬ್ದಾರಿ ವಹಿಸಿ ಕಳುಹಿಸಿದ್ದಾರೆ. ಹಾಗಾಗಿ ಅವರ ಆಸೆಯಂತೆ ಒಮ್ಮೆ ನೀವು ಯಾಗಶಾಲೆಯವರೆಗೆ ಬಂದು ನನ್ನ ತಂದೆಯವರನ್ನು ಕಾಣಬೇಕು. ಯಾವ ಕಾರಣಕ್ಕೂ ಆಗದು ಎಂದು ಮಾತ್ರ ಹೇಳದಿರಿ. ಆದಷ್ಟು ಶೀಘ್ರವಾಗಿ ನಾವು ಅಲ್ಲಿಗೆ ತಲುಪಬೇಕು. ದೊಡ್ಡ ಮನಸ್ಸಿನಿಂದ ಒಪ್ಪಿ ಬಂದರೆ ನನಗದೇ ಮಹದುಪಕಾರ” ಎಂದು ವಿನೀತನಾಗಿ ಕೋರಿಕೆ ವ್ಯಕ್ತಪಡಿಸಿದನು.
“ಅಯ್ಯೋ ! ನನ್ನಂತಹ ಸಾಮಾನ್ಯನಲ್ಲಿ ಇಷ್ಟೊಂದು ದೀನನಾಗಿ ಬೇಡುವುದೇ. ಸರಿ ನಾನು ಬರುತ್ತೇನೆ. ಹೋಗೋಣ” ಎಂದು ಒಪ್ಪಿ ತಾಮ್ರಧ್ವಜನ ಜೊತೆ ಯಾಗಶಾಲೆಯತ್ತ ಹೊರಟರು.
ಮುಂದುವರಿಯುವುದು…













































