ಭಾಗ – 580
ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೫೮೦ ಮಹಾಭಾರತ
ಹರಿತವಾದ ಗರಗಸ ಮಹಾರಾಜ ಮಯೂರಧ್ವಜನ ಶಿರಸ್ಸನ್ನು ಕೊಯ್ಯುತ್ತಾ ಇಬ್ಭಾಗವಾಗಿ ಸೀಳುತ್ತಾ ಇಳಿಯುತ್ತಿದೆ. ಹಣೆಯಿಂದ ಕಣ್ಣಿನ ಹುಬ್ಬುಗಳ ಮಧ್ಯೆ ಸೀಳಿ ಮೂಗಿನ ಮಧ್ಯದವರೆಗೆ ಕೊಯ್ದಿದೆ. ಹೀಗಿದ್ದೂ ಮಹಾರಾಣಿ ಕುಮುದ್ವತಿ ಹಾಗೂ ಯುವರಾಜ ತಾಮ್ರಧ್ವಜನ ಭಾವದಲ್ಲಿ ಯಾವ ವ್ಯತ್ಯಾಸವನ್ನೂ ಉಂಟು ಮಾಡದೆ ಉಳಿದುದೇ ಎಲ್ಲರಿಗೂ ಪರಮಾಶ್ಚರ್ಯ. ನೋಡುತ್ತಿದ್ದ ಪ್ರಜಾಪರಿವಾರ ಅಯ್ಯೋ!!! ಶಿವನೇ!!! ಹಾ ಕೃಷ್ಣಾ!!! ಹೋ ದೇವರೇ!!! ಎಂದು ಹೌಹಾರಿ ಸಹಾಯಕ್ಕಾಗಿ ದೇವರನ್ನು ಕೂಗಿ ಕರೆಯುತ್ತಾ ನಮ್ಮ ರಾಜನಿಗೇನೂ ಮಾಡದಿರಿ, ದೇವರೇ ನೀನೇ ಕಾಪಾಡಬೇಕು. ಇಂತಹ ಸಜ್ಜನ ಪರಿವಾರಕ್ಕೆ ಯಾತಕ್ಕಾಗಿ ಈ ಕ್ರೂರ ಶಿಕ್ಷೆ ಎಂದು ಭಗವಂತನಿಗೆ ಮೊರೆ ಇಡುತ್ತಾ ಕಡೆಗೆ ರಕ್ತದೋಕುಳಿ ಇಳಿದು ಹರಿಯುತ್ತಿರುವ ಮಯೂರಧ್ವಜನನ್ನು ನೋಡಲಾಗದೆ ಕೆಲವರು ತಲೆತಿರುಗಿ ಸ್ಮೃತಿಹೀನರಾಗಿ ಬಿದ್ದು ಬಿಟ್ಟರೆ, ಇನ್ನುಳಿದ ಕೆಲವರು ತಿರುಗಿ ನಿಂತು ಬಿಟ್ಟರು. ಕೆಲವರು ಕಣ್ಮುಚ್ಚಿ ಕರ ಜೋಡಿಸಿ ಧ್ಯಾನಸ್ಥರಾಗಿ ದೇವರನ್ನು ರಕ್ಷಣೆಗಾಗಿ ಸ್ತುತಿಸತೊಡಗಿದರು.
ಆದರೆ ಸಂಸಾರವನ್ನು ಒಂದು ಬಂಧನವೆಂದು ಭಾವಿಸದೆ ನಿಷ್ಕಾಮ ಕರ್ಮಿಗಳಾಗಿ, ಶೂನ್ಯ ಭಾವದಿಂದ ತಾವು ಮಾಡುತ್ತಿರುವ ಕರ್ಮವನ್ನು ಭಗವಂತನಿಗೆ ಅರ್ಪಿಸಿ ಮಹತ್ತರವಾದ ಧರ್ಮ ಸಾಧನೆಯೆಂದೇ ಭಾವಿಸಿ, ದೇವರಿಗೆ ಪ್ರಿಯವಾಗಲಿ ಎಂಬ ನಿರ್ಲಿಪ್ತತೆಯಿಂದ ಗರಗಸವನ್ನೆಳೆದು ಕೊಯ್ಯುತ್ತಿದ್ದಾರೆ. ತಂದೆ, ತಾಯಿ, ಮಗ ಎಂಬ ಸಂಬಂಧದ ಬಂಧನದಿಂದ ಮುಕ್ತರಾದ ನ್ಯಾಸ ಬುದ್ಧಿಯಿಂದಲೇ ಕಾರ್ಯೋನ್ಮುಖರಾಗಿದ್ದಾರೆ. ಪರಮ ಭಾಗವತೋತ್ತಮನಾದ ಮಯೂರಧ್ವಜನ ಧೃಡತೆ ಆತನ ಸಂಸಾರವಲ್ಲದೆ ಬೇರೆಲ್ಲೂ ಕಾಣಸಿಗದು. ಜೀವನವನ್ನು ಪರಿಪೂರ್ಣತೆಯ ಸಾಧನವೆಂದು ತಿಳಿದು ಆ ಪರಿಶುದ್ಧವಾದ ತಿಳಿವಿನಿಂದಲೂ, ಸಂಸ್ಕಾರದಿಂದಲೂ ನಿಸ್ಪೃಹರಾಗಿ ಬಾಳುತ್ತಿರುವ ಮಹಾತ್ಮರಾದ ಇಂತಹವರ ಸಂಸಾರದಲ್ಲಷ್ಟೇ ಈ ತೆರನಾದ ಮಹಾನ್ ತ್ಯಾಗ ಕಾಣಸಿಕ್ಕೀತು.
ದಾನ ನೀಡುವಾಗ ಈ ಮೂವರ ಕಣ್ಣಲ್ಲೂ ಒಂದು ತೊಟ್ಟು ಕಣ್ಣೀರೂ ಜಿನುಗಬಾರದು ಎಂಬ ನಿರ್ಬಂಧವಿತ್ತು. ಆದರೆ ಆಶ್ಚರ್ಯವೆಂಬಂತೆ ಮಯೂರಧ್ವಜನ ಎಡಗಣ್ಣಿನಿಂದ ಅಶ್ರು ಜಲಬಿಂದುಗಳು ಒಂದೊಂದಾಗಿ ಮುತ್ತಿನಂತೆ ಉದುರತೊಡಗಿದವು. ಇದನ್ನು ನೋಡುತ್ತಿದ್ದ ವೃದ್ಧ ಬ್ರಾಹ್ಮಣ “ಅಯ್ಯೋ ಅಪಚಾರವಾಗಿ ಹೋಯಿತಲ್ಲಾ! ಆ ಸಿಂಹ ವಿಧಿಸಿರುವ ನಿರ್ಬಂಧದಂತೆ ಅರಸನ ಸಂಸಾರದ ಯಾರ ಕಣ್ಣಿಂದಲೂ ಒಂದು ತೊಟ್ಟು ಕಣ್ಣೀರಿಳಿದರೂ ನಾನು ಆ ಶರೀರಾರ್ಧ ಭಾಗವನ್ನು ಸ್ವೀಕರಿಸಲಾರೆ ಎಂದು ಹೇಳಿದೆ. ಈವರೆಗೂ ಧೃಡ ಸಂಕಲ್ಪದಿಂದ ಮಹಾದಾನಿಯಾಗಿಯೇ ನಿಂತಿದ್ದ ಅರಸನ ಕಂಗಳಿಂದ ಯಾಕಾಗಿ ಕಣ್ಣೀರು ಇಳಿಯುತ್ತಿದ್ದೆಯೋ ನಾನರಿಯೆ. ಅನಾವಶ್ಯಕವಾಗಿ ಇತ್ತ ರಾಜನ ಕೊಲೆಯಾಗುವಂತಾಯಿತು. ಅತ್ತ ನನ್ನ ಮಗನ ಪ್ರಾಣವೂ ಉಳಿಯಲಾರದು. ಅಮ್ಮಾ ತಾಯೇ! ಅರಸನ ಕಣ್ಣಲ್ಲಿ ಕಣ್ಣೀರು ಇಳಿದ ಮೇಲೆ ಸತ್ಯಸಂಧರಾದ ನಾವು ಹೇಗಾದರೂ ಈ ದಾನವನ್ನು ಆ ಸಿಂಹಕ್ಕೆ ನೀಡಲಾದೀತು? ನಿಲ್ಲಿಸಿ ನಿಲ್ಲಿಸಿ !!! ಕಣ್ಣೀರಿಳಿದ ಮೇಲೆ ದಾನ ವ್ಯರ್ಥವಾಗಿ ಹೋಯಿತು” ಎಂದು ಹೇಳುತ್ತಾ ಗೋಗರೆದನು. “ಛೇ ನನ್ನಿಂದಾಗಿ ಅರಸನ ಪ್ರಾಣವೂ ಅನಗತ್ಯವಾಗಿ ವ್ಯರ್ಥವಾಯಿತು. ನಾನಿನ್ನು ಇಲ್ಲಿ ನಿಂತರೂ ಪ್ರಯೋಜನವಿಲ್ಲ” ಎಂದು ಹೇಳಿ ಪೀಠದಿಂದ ಎದ್ದು ತನ್ನ ಶಿಷ್ಯನೊಡನೆ ಹೊರಟು ಹೋದನು.
ಇದನ್ನು ನೋಡುತ್ತಿದ್ದ ಅಲ್ಲಿ ನೆರೆದಿದ್ದವರೆಲ್ಲರೂ ದಿಗ್ಭ್ರಾಂತರಾದರು. ಅನಾವಶ್ಯಕವಾಗಿ ಹುಚ್ಚುತನದಿಂದ ನಮ್ಮ ರಾಜರ ಪ್ರಾಣ ನಷ್ಟವಾಯಿತಲ್ಲಾ! ಅತ್ತ ದಾನವಾದರೂ ಸಮರ್ಪಿತವಾಗುತ್ತಿದ್ದರೆ ಆ ಸಾರ್ಥಕತೆಯಾದರೂ ಇರುತ್ತಿತ್ತು. ಕೆಲವರು ಸಿಟ್ಟಿಗೆದ್ದು ಗದ್ದಲವೆಬ್ಬಿಸಿದರೆ, ಇನ್ನು ಕೆಲವರು ಛೇ, ಛೀ! ಏನಾಗಿ ಹೋಯಿತು! ಎಂದು ತಲೆ ಮೇಲೆ ಕೈ ಹೊತ್ತು ಮರುಗತೊಡಗಿದರು. ಹೀಗಾದಾಗ ತಾಮ್ರಧ್ವಜನೂ ಕುಮದ್ವತಿಯೂ ಸೀಳುವುದನ್ನು ನಿಲ್ಲಿಸಿದರು. ತಿರುಗಿ ನೋಡಿದರೆ ದಾನ ಸ್ವೀಕರಿಸಬೇಕಾದ ವೃದ್ಧ ಬ್ರಾಹ್ಮಣನೇ ಎದ್ದು ಹೋಗುತ್ತಿದ್ದಾನೆ. ಜನರ ಮಾತುಗಳಿಂದ ಆಗಿ ಹೋದ ಸಂಗತಿ ಅರ್ಥವಾಯಿತು. ಕೂಡಲೆ ಗರಗಸವನ್ನು ತಲೆಯ ಮೇಲಿಂದ ಮೇಲೆತ್ತಿದ ಕುಮುದ್ವತಿ ಮತ್ತು ತಾಮ್ರಧ್ವಜ ಮುಂದೇನು? ಎಂಬಂತೆ ಯೋಚಿಸತೊಡಗಿದರು.
ಈವರೆಗೆ ನೀರವ ಮೌನವಿದ್ದು ಒಮ್ಮೆಲೆ ಗೊಂದಲ – ಗದ್ದಲವಾಗತೊಡಗಿದಾಗ ಮಯೂರಧ್ವಜ ಬಹಿರ್ಮುಖನಾದ. ಅರ್ಧ ತಲೆ ಸೀಳಿ ಇಬ್ಭಾಗವಾಗಿದ್ದರೂ ಧ್ಯಾನಸ್ಥನಾಗಿ ಅಂತರ್ಮುಖಿಯಾಗಿದ್ದ ಮಯೂರಧ್ವಜನಿಗೇನೂ ತಿಳಿದಿರಲಿಲ್ಲ. ಈಗ ಆಗುತ್ತಿರುವ ಗಲಭೆ, ಗೊಂದಲದಿಂದ ಅರ್ಧಶಿರ ಸೀಳಲ್ಪಟ್ಟಿದ್ದರೂ ಜೀವಂತವಾಗಿದ್ದ ಮಯೂರಧ್ವಜ ತನ್ನ ಪತ್ನಿ ಮಹಾರಾಣಿ ಕುಮುದ್ವತಿಯತ್ತ ದೃಷ್ಟಿ ಹೊರಳಿಸಿ ಕಣ್ಸನ್ನೆಯಲ್ಲೇ ಏನಾಯಿತು ಎಂಬಂತೆ ಹುಬ್ಬೇರಿಸಿ ಪ್ರಶ್ನಿಸಿದ.
ಆಗ ಕುಮುದ್ವತಿ “ಸ್ವಾಮೀ, ನಾವು ಸೀಳುತ್ತಿರುವಾಗ ನಿಮ್ಮ ಕಣ್ಣಿಂದ ಕಣ್ಣೀರು ಇಳಿಯಿತಂತೆ, ಹಾಗಾಗಿ ದಾನ ಸ್ವೀಕರಿಸಲಾಗದು ಎಂದು ಬ್ರಾಹ್ಮಣೋತ್ತಮರು ಎದ್ದು ಹೋಗಿದ್ದಾರೆ” ಎಂದು ಪೂರ್ಣ ವೃತ್ತಾಂತ ವಿವರಿಸಿ ಹೇಳಿದಳು. ಕೂಡಲೇ ಮಯೂರಧ್ವಜ ಜಾಗೃತನಾಗಿ ಸೀಳಲ್ಪಟ್ಟ ತನ್ನ ಶಿರವನ್ನು ಜೋಡಿಸಿ ಒತ್ತಿ ಹಿಡಿಯುವಂತೆ ಕೈಗಳಿಂದ ಸಂಜ್ಞೆ ಮಾಡಿದ. ಸೂಚನೆ ಅರ್ಥ ಮಾಡಿಕೊಂಡ ತಾಮ್ರಧ್ವಜ ತಕ್ಷಣ ತಲೆಯನ್ನು ಜೋಡಿಸಿ ಒತ್ತಿ ಹಿಡಿದನು. ಆಗ ಮಯೂರಧ್ವಜ ಮಗನಲ್ಲಿ ನೀನು ಈಗಲೇ ಹೋಗಿ ಆ ಬ್ರಾಹ್ಮಣರನ್ನು ಹೇಗಾದರೂ ಬೇಡಿ ಮರಳಿ ಇಲ್ಲಿಗೆ ಕರೆದುಕೊಂಡು ಬಾ ಎಂಬಂತೆ ಆಂಗಿಕ ಹಾವಭಾವದಿಂದಲೇ ನಿರೂಪಿಸಿದನು. ಕೂಡಲೇ ಕುಮುದ್ವತಿ ಮತ್ತು ಪರಿಚಾರಕರು ಅರಸನ ಸೀಳಲ್ಪಟ್ಟ ಶಿರವನ್ನು ಜೋಡಿಸಿ ಒತ್ತಿ ಹಿಡಿದರು. ತಾಮ್ರಧ್ವಜ ಓಡುತ್ತಾ ಹೊರ ನಡೆದು ಬ್ರಾಹ್ಮಣರಿಗಾಗಿ ಹುಡುಕಾಡತೊಡಗಿದನು. ಅಯ್ಯೋ ಈ ಬ್ರಾಹ್ಮಣರು ಇಷ್ಟು ಬೇಗ ಎತ್ತ ಸಾಗಿ ಮಾಯವಾದರೋ ಎಂದು ತಾಮ್ರಧ್ವಜ ಓಡುತ್ತಾ ಹುಡುಕತೊಡಗಿದ.
ಮುಂದುವರಿಯುವುದು…











































