25.8 C
Udupi
Monday, July 13, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 579

ಭರತೇಶ ಶೆಟ್ಟಿ, ಎಕ್ಕಾರು

ಯಾಗಶಾಲೆಯಲ್ಲಿ ದಾನ ಕ್ರಿಯೆಯ ಮೊದಲು ದೇವತಾ ಸಂಪ್ರೀತಿಗಾಗಿ ಯಜ್ಞಗಳು ಆರಂಭವಾದವು. ಒಂದಾದ ಮೇಲೆ ಒಂದರಂತೆ ಎಲ್ಲಾ ದೇವತೆಗಳಿಗೆ ಹವಿಸ್ಸುಗಳನ್ನು ಸಮರ್ಪಿಸಿ ಪ್ರಾರ್ಥಿಸಲಾಯಿತು. ದೋಷಗಳ ನಿವಾರಣಾರ್ಥವಾಗಿಯೂ ವೈದಿಕ ಪ್ರಕ್ರಿಯೆಗಳು ಸಾಗಿದವು. ಅದಾದ ಬಳಿಕ ಬ್ರಾಹ್ಮಣಾರಾಧನೆ ನಡೆದು ಮಹಾರಾಜ ಮಯೂರಧ್ವಜ ಬೊಗಸೆ ಬೊಗಸೆ ತುಂಬಾ ಮುತ್ತು ರತ್ನಗಳನ್ನು ದಾನ ನೀಡಿದನು. ಒಂದು ಸಾವಿರ ಸವತ್ಸಧೇನು ಅಂದರೆ ಕರು ಮತ್ತು ಹಾಲು ನೀಡುವ ದನಗಳನ್ನೂ ದಾನವಾಗಿ ಇತ್ತನು. ಇಷ್ಟೆಲ್ಲಾ ಧಾರ್ಮಿಕ ವಿಧಿಗಳು ನಡೆದಾದ ಬಳಿಕ ಮಯೂರಧ್ವಜನನ್ನೇ ವೃದ್ಧ ಬ್ರಾಹ್ಮಣನಿಗೆ ದಾನವಾಗಿ ನೀಡುವ ಪ್ರಧಾನ ಪ್ರಕ್ರಿಯೆ ನಡೆಯುವ ಸಿದ್ಧತೆ ಆರಂಭಗೊಂಡಿತು. ಅಲ್ಲಿ ನೆರೆದಿದ್ದ ಬ್ರಾಹ್ಮಣರೆಲ್ಲರಿಗೂ ವಂದಿಸಿ ಆಶೀರ್ವಾದ ಪಡೆದು ತನ್ನನ್ನು ತಾನೇ ದಾನವಾಗಿಸಲು ಸಿದ್ಧನಾದ ಮಯೂರಧ್ವಜ ದಾನ ಮಂಟಪದಲ್ಲಿ ಬಂದು ನಿಂತನು. ತನ್ನನ್ನು ಶ್ರೀಹರಿಗೇ ಸಮರ್ಪಿಸುತ್ತಿದ್ದೇನೆ ಎಂಬ ಭಾವ ತಳೆದು ಕೃಷ್ಣಾರ್ಪಣ ಎಂದು ಉದ್ಘಾರ ತೆಗೆದು ನಿಂತನು. ತಾನು ನೋಡುತ್ತಿದ್ದ ಬ್ರಾಹ್ಮಣನನ್ನೇ ಶ್ರೀಕೃಷ್ಣ ಪರಮಾತ್ಮನ ಮೂರ್ತಿ ಎಂದು ಕಲ್ಪನೆ ಮಾಡುತ್ತಾ ಪರಿ ಪರಿಯಾಗಿ ಕೃಷ್ಣ ಸ್ತುತಿ ಮಾಡುತ್ತಾ ವಂದಿಸಿ ನಿಂತನು.

ಪುರೋಹಿತರು ಜಲ ತುಂಬಿದ ಕಲಶವನ್ನು ಮಹಾರಾಣಿ ಕುಮುದ್ವತಿಯ ಕೈಗಿತ್ತರು. ಆಗ ಮಹಾರಾಜ ಮಯೂರಧ್ವಜನಿಗೂ ಇನ್ನು ದಾನ ನೀಡಲಾಗುತ್ತದೆ ಎಂಬ ವಿಷಯ ಅರ್ಥವಾಯಿತು. ಮಹಾರಾಣಿ ಕುಮುದ್ವತಿ ಮತ್ತು ಮಗ ತಾಮ್ರಧ್ವಜನನ್ನು ಕರೆದು “ನೀವೀರ್ವರೂ ಈಗ ದಾನ ನೀಡಬೇಕಾದವರು. ಮನಶುದ್ಧಿಯಿಂದ ಸಂಪೂರ್ಣ ಕ್ರಿಯಾಶುದ್ಧಿಯ ಅಂತಃಕರಣದಿಂದ ನನ್ನನ್ನು ದಾನವಾಗಿ ನೀಡಬೇಕು. ಯಾವುದೇ ರೀತಿಯ ದುಃಖ, ಭಯ, ದುಮ್ಮಾನಗಳನ್ನು ಮನಸ್ಸಿನಲ್ಲಿ ತಳೆಯದೆ ದೇವರಿಗೆ ದಾನ ನೀಡುವ ಸಮಯ ಹೇಗೆ ಸರ್ವ ಜನರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇವೆಯೋ ಹಾಗೆಯೇ ನನ್ನನ್ನು ದಾನವಾಗಿ ನೀಡುವಾಗಲೂ ನೀವು ಸದಾಶಯವನ್ನೇ ಬಯಸಬೇಕು. ನಂತರ ನನ್ನ ಅರ್ಧ ಶರೀರ ದಾನ ನೀಡಬೇಕಾಗಿರುವುದರಿಂದ ಶರೀರ ಸೀಳುವಾಗಲೂ ಯಾವುದೇ ಕಾರಣಕ್ಕೂ ಮನಸ್ಸು ಚಂಚಲಗೊಳ್ಳಬಾರದು. ಪತಿ ಎಂಬ ಭಾವವನ್ನು ಪತ್ನಿಯಾದ ನೀನು ತಳೆದರೆ ದಾನ ನೀಡಿಯೂ ವ್ಯರ್ಥವಾದೀತು. ಮಗನೇ ನೀನೂ ಕೂಡ ಧೃಡ ಮನಸ್ಸಿನಿಂದ ಯಾವುದೇ ರೀತಿಯ ಭಾವೋದ್ವೇಗಕ್ಕೆ ಒಳಗಾಗದೆ ನನ್ನ ಅರ್ಧ ಶರೀರವನ್ನು ದಾನವಾಗಿ ನೀಡಬೇಕು. ಒಂದು ವೇಳೆ ನೀವು ಇಬ್ಬರಲ್ಲಿ ಯಾರೊಬ್ಬರಾದರೂ ಏನಾದರು ಅನ್ಯ ಯೋಚನೆ, ಅಥವಾ ಸ್ವಾರ್ಥ ಚಿಂತನೆ ಮಾಡಿದರೂ ಇಲ್ಲಿ ನಡೆಯುತ್ತಿರುವ ತ್ಯಾಗ ಅಥವಾ ದಾನ ವ್ಯರ್ಥವಾಗಿ ಹೋದೀತು. ಹಾಗಾಗಿ ಪೂರ್ಣ ಸಮರ್ಪಣಾ ಭಾವದ ಮನಸ್ಸಿನಿಂದ ದೇವರಿಗೇ ದಾನ ನೀಡುತ್ತಿದ್ದೇವೆ ಎಂದೇ ತಿಳಿದು ಧ್ಯಾನಸ್ಥ ಮನಸ್ಸಿನಿಂದಲೇ ಕಾರ್ಯ ಪ್ರವೃತ್ತರಾಗಿ. ನಮ್ಮ ಆರಾಧ್ಯ ದೇವರಿಗೇ ನೀವು ದಾನ ನೀಡುವ ಕರ್ಮ ನಿರತರಾಗಿದ್ದೀರಿ ಎಂದಷ್ಟೇ ತಿಳಿದುಕೊಳ್ಳಿರಿ‌. ನೀವು ಮಾಡುತ್ತಿರುವ ಕರ್ಮ ಅಂದರೆ ನನ್ನ ಶರೀರವನ್ನು ಕತ್ತರಿಸುವಾಗಲೂ ದೇವರೇ ನಮ್ಮ ಕರ್ಮವೂ ನಿನಗೇ ಅರ್ಪಣೆ. ಎಲ್ಲವೂ ನಿನ್ನ ಸಂಕಲ್ಪ ಮತ್ತು ಪ್ರೇರಣೆಯಂತೆಯೇ ಸಾಗುತ್ತಿದೆ. ನೀನೇ ಸರ್ವರ ರಕ್ಷಕ ಎಂದು ಪ್ರಾರ್ಥಿಸಿ ತೊಡಗಿಕೊಳ್ಳಿ‌. ಎಲ್ಲರಿಗೂ ಶುಭವಾಗಲಿ, ನಮ್ಮ ಪ್ರಜೆಗಳಿಗೂ, ಸಾಮ್ರಾಜ್ಯಕ್ಕೂ ದೇವತಾನುಗ್ರಹದಿಂದ ಸನ್ಮಂಗಲವಾಗಲಿ” ಎಂದು ಬುದ್ದಿ ಮಾತುಗಳನ್ನು ಹೇಳಿ ಹರಸಿದನು.

ಪುರೋಹಿತರು ದಾನ ಮಂತ್ರಗಳನ್ನು ಉಚ್ಚರಿಸತೊಡಗಿದರು. ರಾಣಿ ಕುಮುದ್ವತಿ ಜಲ ತುಂಬಿದ ಕಲಶ ಹಿಡಿದು ದಾನ ಮಂಟಪಕ್ಕೆ ಬಂದಳು. ವೃದ್ಧ ಬ್ರಾಹ್ಮಣೋತ್ತಮರು ಪೀಠದಲ್ಲಿ ಕುಳಿತಿದ್ದಾರೆ. ಮಯೂರಧ್ವಜ ಮನಸ್ಪೂರ್ವಕವಾಗಿ ಕೈಮುಗಿದು ನಿಂತಿದ್ದಾನೆ. ಕುಮುದ್ವತಿ ಕಲಶದ ಜಲಧಾರೆ ಎರೆಯುತ್ತಿದ್ದಂತೆಯೇ ಮಯೂರಧ್ವಜ ತನ್ನನ್ನು ತಾನೇ “ಶ್ರೀಕೃಷ್ಣ ಪರಮಾತ್ಮನಿಗೆ ಅರ್ಪಣೆ. ಗೋಪಾಲಕೃಷ್ಣ ದೇವರಿಗೆ ದಾನ ಪ್ರಿಯವಾಗಲಿ” ಎಂದು ಮನಸ್ಪೂರ್ವಕವಾಗಿ ಉಚ್ಚರಿಸಿದನು. ಕುಮುದ್ವತಿ ಧಾರೆಯೆರೆದು ಮಯೂರಧ್ವಜನನ್ನು ದಾನವಾಗಿ ವೃದ್ಧ ಬ್ರಾಹ್ಮಣನಿಗೆ ಸಮರ್ಪಿಸಿ ಕೈ ಮುಗಿದಳು.

ಪುರೋಹಿತರು ಮಾರ್ಗದರ್ಶನ ನೀಡಿದಂತೆ ಮಯೂರಧ್ವಜ ಮುಂದೆ ಸಾಗಿ ಹೂಳಲ್ಪಟ್ಟಿರುವ ಎರಡು ಕಂಬಗಳ ಮಧ್ಯೆ ಹೋಗಿ ನಿಂತನು. ಮಹಾರಾಜ ಮಯೂರಧ್ವಜನ ಮನಸ್ಸು ನಿರಾಳವಾಗಿದೆ. ತನ್ನೊಳಗೆ ತಾನೇ ಆನಂದ ಭಾವದಿಂದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾನೆ. “ದೇವರೇ! ಜಗತ್ತಿನ ಎಲ್ಲರಿಗೂ ಅವರ ಸಾವು ಹೇಗೆ ಬರುತ್ತದೆ ಎಂಬುವುದನ್ನು ನಿಗೂಢವಾಗಿಯೇ ಇರಿಸಿರುವೆ. ಆದರೆ ನನ್ನ ಮೇಲೆ ವಿಶೇಷ ಕೃಪೆದೋರಿ ನನಗೆ ತಿಳಿದಿರುವಂತೆಯೇ ಪ್ರಾಣವನ್ನು ದಾನವಾಗಿ ಅರ್ಪಿಸಿ, ಮನಸ್ಸನ್ನು ಸಿದ್ಧಗೊಳಿಸಿ ದೇವರ ಸ್ತುತಿಗೈಯುತ್ತಾ ಈ ಜೀವನ ಅಂತ್ಯ ಗೊಳಿಸುವ ಮಹಾಯೋಗ ನೀಡಿದೆ. ಹೇಗೋ ಒಂದು ದಿನ ಸಾಯಲೇ ಬೇಕಾದ, ಸತ್ತ ಮೇಲೆ ವ್ಯರ್ಥವಾಗಿ ಸುಟ್ಟು ಹಾಕಲೇ ಬೇಕಾಗಿದ್ದ ನನ್ನ ಈ ದೇಹ ಉಪಯುಕ್ತ ಕಾರ್ಯಕ್ಕೆ ವಿನಿಯೋಗವಾಗುವಂತೆ ಮಾಡಿದ ನಿನಗೆ ಸಹಸ್ರ ಸಹಸ್ರ ಪ್ರಣಾಮಗಳು” ಎಂದು ದೇವರನ್ನು ಮತ್ತೆ ಮತ್ತೆ ವಂದಿಸುತ್ತಾ ನಿಂತಿದ್ದಾನೆ.

ಮಹಾರಾಣಿ ಕುಮುದ್ವತಿ ಹಾಗೂ ತಾಮ್ರಧ್ವಜನನ್ನು ಮುಂದೆ ಕರೆದರು. ಎರಡು ಕಂಬಗಳಿಗೆ ನೊಗದಂತೆ ಜೋಡಿಸಿದ್ದ ಅಡ್ಡ ಕಂಬಕ್ಕೆ ಇಳಿ ಬಿಡಲಾಗಿದ್ದ ಗರಗಸವನ್ನೆತ್ತಿ ಇವರಿಬ್ಬರ ಕೈಗಿತ್ತರು. ಮಯೂರಧ್ವಜನ ಶರೀರಕ್ಕೆ ಆಧಾರವಾಗಿ ನೆಡಲಾಗಿದ್ದ ಎರಡು ಕಂಬಗಳಿಗೆ ಒರಗಿಸಿ ನಿಲ್ಲಿಸಲಾಯಿತು. ಇಬ್ಬರು ಪರಿಚಾರಕರನ್ನು ಕರೆದು ಮಹಾರಾಜನ ಶರೀರವನ್ನು ಕಂಬಗಳಿಗೆ ಒತ್ತಿ ಹಿಡಿಯುವಂತೆ ಸೂಚನೆ ನೀಡಿದರು. ಕಂಬಗಳ ಹಿಂದೆ ಹಾಗು ಮುಂದೆ ಇರಿಸಿದ್ದ ಪೀಠವೇರಿದ ರಾಣಿ ಕುಮುದ್ವತಿ ಮತ್ತು ತಾಮ್ರಧ್ವಜ ಹರಿತವಾದ ಗರಗಸವನ್ನು ಮಯೂರಧ್ವಜನ ನೆತ್ತಿಯ ಮೇಲೆ ಇರಿಸಿದರು. ಕರಜೋಡಿಸಿ ನಮಸ್ಕರಿಸಿ ದೇವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರು. ನಂತರ ನಿಧಾನವಾಗಿ ಗರಗಸವನ್ನು ಹಿಂದೆ ಮುಂದೆ ಎಳೆಯುತ್ತಾ ಮಯೂರಧ್ವಜನ ಶಿರವನ್ನು ಸೀಳ ತೊಡಗಿದರು. ಇಂಚು ಇಂಚು ಆಳಕ್ಕೆ ಗರಗಸ ಇಳಿಯುತ್ತಾ ಮಯೂರಧ್ವಜನ ತಲೆ ಭಾಗವಾಗುತ್ತಿದೆ. ರಕ್ತ ಇಳಿದು ಹರಿಯುತ್ತಿದೆ. ಕೈಹಿಡಿದ ಧರ್ಮ ಪತ್ನಿಯೇ ಪತಿಯ ಶಿರವನ್ನು ಕೊಯ್ಯುತ್ತಿದ್ದಾಳೆ. ಮತ್ತೊಂದೆಡೆ ಜನ್ಮವಿತ್ತು ಸಾಕಿ ಬೆಳೆಸಿದ ಮಗನೇ ತಂದೆಯ ದೇಹವನ್ನು ಸೀಳುತ್ತಿದ್ದಾನೆ. ಈಗ ಈ ಮೂವರ ಮನಸ್ಸೂ ಯಾವ ಸ್ಥಿತಿಯಲ್ಲಿರಬಹುದು!. ಯಾವ ಸಂಸಾರಿಗಳಾದರೂ, ಎಷ್ಟೇ ಸಜ್ಜನರಾದರೂ ಇಂತಹ ಕೃತ್ಯವನ್ನು ಮಾಡುವುದಕ್ಕೆ ಮುಂದಾಗುವ ಸಾಧ್ಯತೆ ಇದೆಯೇ? ಮಯೂರಧ್ವಜನು ಮಾತ್ರ ಶ್ರೀ ವಾಸುದೇವನ ಧ್ಯಾನ ನಿರತನಾಗಿ ಕಂಬಗಳ ಮಧ್ಯೆ ಧೃಡವಾಗಿ ನಿಂತಿದ್ದಾನೆ. ಗರಗಸ ಶಿರಸ್ಸನ್ನು ಸೀಳುತ್ತಾ ಕೆಳಗೆ ಇಳಿಯುತ್ತಿದೆ. ಶಿರಸ್ಸು ಇಬ್ಭಾಗವಾಗುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page