26.5 C
Udupi
Friday, July 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 569

ಭರತೇಶ್ ಶೆಟ್ಟಿ ,ಎಕ್ಕಾರು

ವಿಶ್ವ ವಂದ್ಯಂ ಮಹಾ ಪೂಜ್ಯಂ,
ಉಮಾಪತಿಮ್ ತ್ರಿಲೋಕಿನಾಥಮ್|
ಭಕ್ತವತ್ಸಲಂ ಭಸ್ಮ ವಿಭೂಷಿತಮ್,
ಸರ್ವಶಕ್ತಿಂ ಮಹಾ ಮೃತ್ಯುಂಜಯಂ|
ಶ್ರೀಮಂಜುನಾಥಾಯಂ ನಮಾಮ್ಯಹಂ||

ಶ್ರೀಕೃಷ್ಣ ಸಹಿತರಾಗಿ ಎಲ್ಲರೂ ಮಹೇಶ್ವರನಾದ ಶಿವ ಪರಮಾತ್ಮನನ್ನು ಧ್ಯಾನಿಸುತ್ತಿದ್ದಾರೆ. ಶ್ರೀಕೃಷ್ಣ ಶಿವಾನುಗ್ರಹದ ದಿವ್ಯ ಸಂಜೀವಕ ಮಣಿಯನ್ನು ಪಾರ್ಥ ಹಾಗು ವೃಷಕೇತುವಿನ ಹೃದಯ ಭಾಗಕ್ಕೆ ಸ್ಪರ್ಶಿಸುವಾಗ ಇಬ್ಬರೂ ಪ್ರಾಣ ಮರುಪೂರಣೆಯಾಗಿ ಕಣ್ತೆರೆದಿದ್ದಾರೆ.

ದಟ್ಟ ಕಾರ್ಮೋಡದೊಳಗೆ ಮುಸುಕಿ ಅಗೋಚರನಾಗಿದ್ದ ಸೂರ್ಯ ಮೋಡಗಳು ಸರಿದು ಹೋದಾಗ ಮತ್ತೆ ಬೆಳಗುವಂತೆ, ರಾಹು ಹಿಡಿದ ಚಂದ್ರ, ಗ್ರಹಣ ಮೋಕ್ಷಗೊಂಡ ಬಳಿಕ ಮತ್ತೆ ಪ್ರಭೆ ಬೀರುವಂತೆ ಕರ್ಣಜನಾದ ವೃಷಕೇತು ಮತ್ತು ಪಾರ್ಥರ ಮುಖಗಳು ಬಹಳ ಚೆಲುವಾದ ಕಾಂತಿ ಮತ್ತು ಕಳೆಯನ್ನು ಪಡೆದಿವೆ. ಕಣ್ತೆರೆದು ನೋಡಿದರೆ ಎದುರಲ್ಲಿ ಶ್ರೀ ಕೃಷ್ಣ ಪರಮಾತ್ಮ. ನಿಧಾನಕ್ಕೆ ಎದ್ದು, ನಿಂತು ಶಿರಬಾಗಿ ನಮಿಸಿದರು. ಅವರಿಬ್ಬರನ್ನೂ ಬರಸೆಳೆದು ತನ್ನ ಎರಡೂ ಬಾಹುಗಳಿದ ಬಿಗಿದಪ್ಪಿದ ಶ್ರೀ ಕೃಷ್ಣ ಅವರ ಮೈದಡವಿ ವಾಸ್ತವಕ್ಕೆ ಎಚ್ಚರಗೊಳಿಸಿದನು.

ಅರ್ಜುನ ಮತ್ತು ವೃಷಕೇತುಗಳಿಬ್ಬರೂ ಪುನರ್ಜೀವ ಪಡೆದಾಗ ಆಕಾಶದಲ್ಲಿ ದೇವತೆಗಳು ವಾದ್ಯ ದುಂದುಭಿಗಳನ್ನು ಮೊಳಗಿಸಿ ಮಹಾದೇವ ಪರಮೇಶ್ವರನಿಂದಾದ ಸಂಜೀವಕಮಣಿಯ ಕೃಪೆಗಾಗಿ ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು. ಶ್ರೀಕೃಷ್ಣನು ಅರ್ಜುನ, ವೃಷಕೇತು, ಭೀಮ, ಬಬ್ರುವಾಹನ, ಆದಿಶೇಷ, ಕುಂತಿ, ಚಿತ್ರಾಂಗದೆ, ಉಲೂಪಿ ಸಹಿತ ಸಾತ್ಯಕಿ, ಅನಿರುದ್ದ, ಪ್ರದ್ಯುಮ್ನಾದಿಗಳೊಂದಿಗೆ ಸಾಮೂಹಿಕವಾಗಿ ಪರಶಿವನನ್ನು ಮನಸಾರೆ ಸ್ತುತಿಸಿ ಕೃಪಾದೃಷ್ಟಿಗಾಗಿ ಬಹುವಿಧದಿಂದ ಕೊಂಡಾಡಿದರು. ‘ಜಗತ್ವಂದಿತನಾದ ಜಗದೀಶ್ವರನೇ, ಭಕ್ತವತ್ಸಲನೇ, ಭಸ್ಮ ವಿಭೂಷಿತನೇ, ಮೃತ್ಯುಂಜಯನೇ ಇದೋ ನಿನ್ನ ಕರುಣಾದೃಷ್ಟಿಗಾಗಿ ನಾವೆಲ್ಲರೂ ವಂದಿಸಿ ಸ್ತುತಿಸುತ್ತಿದ್ದೇವೆ. ಸರ್ವರಕ್ಷಕನಾದ ನಿನ್ನ ಒಲುಮೆ ಸದಾ ನಮಗೆಲ್ಲರಿಗೂ ಇರಲಿ’ ಎಂದು ಸಂಪ್ರಾರ್ಥಿಸಿದರು.

ಭೀಮ ಮತ್ತು ಕುಂತಿ ಅರ್ಜುನ ವೃಷಕೇತು ಇಬ್ಬರನ್ನೂ ಆಲಿಂಗಿಸಿ ದುಃಖ ಕಳೆದು ಅತಿ ಸಂತೋಷ ವ್ಯಕ್ತಪಡಿಸಿದರು.

ಆದಿಶೇಷನು ಧೃಡ ಭಕ್ತಿಯಿಂದ ಶ್ರೀಹರಿಯ ಧ್ಯಾನನಿರತನಾಗಿ ಕುಳಿತಿದ್ದನು. ಭಕ್ತನ ಮನದ ಆಶಯ ಅರಿತ ಶ್ರೀಕೃಷ್ಣ ಶಂಖ ಚಕ್ರ ಗದಾ ಪದ್ಮ ಧರನಾಗಿ ಶೇಷನಿಗೆ ದರುಶನವಿತ್ತು ಅನುಗ್ರಹಿಸಿದನು. ಆದಿಶೇಷನು “ಪ್ರಭುವೇ ನಾನು ಅರಿಯದೆ ಏನಾದರು ಅಪರಾಧವೆಸಗಿದ್ದರೆ ಮನ್ನಿಸಬೇಕು. ನಿಮ್ಮ ಸೇವಕನಾದ ನನ್ನನ್ನು ಉದ್ಧರಿಸಬೇಕು” ಎಂದು ಪ್ರಾರ್ಥಿಸಿದನು. ಶ್ರೀಕೃಷ್ಣನ ಅನುಗ್ರಹ – ಅನುಮತಿ ಪಡೆದು ಸಂಜೀವಕ ಮಣಿಸಹಿತ ನಾಗಲೋಕಕ್ಕೆ ಹೊರಟನು. ನಾಶವಾದ ಸರ್ಪಸೇನೆಯನ್ನು ಪುನಶ್ಚೇತನಗೊಳಿಸುವ ಹೊಣೆಗಾರಿಕೆಯೂ ಶೇಷನನ್ನು ಎಚ್ಚರಿಸುತ್ತಿತ್ತು. ಎಲ್ಲರಿಗೂ ವಂದಿಸಿ ತನ್ನ ಲೋಕಕ್ಕೆ ಹೊರಟನು. ಮಣಿಪುರದಿಂದ ಬಬ್ರುವಾಹನನು ಗೌರವ ಪೂರ್ವಕವಾಗಿ ಆದಿಶೇಷನನ್ನು ಬೀಳ್ಕೊಟ್ಟನು.

ಶ್ರೀಕೃಷ್ಣನು ಅರ್ಜುನನನ್ನು ಬಳಿ ಕರೆದು “ಹೇ ಪಾರ್ಥಾ ನಿನಗೆ ಅರಿಯದೆಯೇ ಗಂಗಾದೇವಿಯ ಶಾಪಕ್ಕೆ ಗುರಿಯಾಗಿದ್ದೆ. ಮಾಹಿಷ್ಮತಿ ತೊರೆದು ಹೋಗಿದ್ದ ನೀಲಧ್ವಜನ ರಾಣಿ ಜ್ವಾಲಾಳ ಕಾರಣದಿಂದ ಗಂಗೆ ವಿಚಲಿತಳಾದಳು. ಗಂಗಾಪುತ್ರ ಭೀಷ್ಮನ ಮರಣಕ್ಕೆ ನೀನು ಕಾರಣನಾದೆ ಎಂಬ ನೆಪವೇ ಶಾಪಕ್ಕೆ ಹೇತುವಾಯಿತು.”ಅರ್ಜುನ ಅವನ ಮಗನ ಕೈಯಿಂದಲೇ ಸಾವನ್ನಪ್ಪಲಿ” ಎಂದು ಗಂಗೆ ಶಪಿಸಿದಂತೆಯೇ ನೀನು ನಿನ್ನ ಮಗನಾದ ಬಬ್ರುವಾಹನನ ಎದುರು ಸೋತು ಮರಣವನ್ನಪ್ಪಲು ಕಾರಣವಾಯಿತು. ಏನೇ ಆಗಿರಲಿ ಈಗ ಎಲ್ಲವೂ ಸುಖಾಂತ್ಯವಾಗಿ ಪರಿಹಾರವಾಗಿದೆ. ಇದೋ ಈತನೇ ನಿನ್ನ ಮಗ ಬಬ್ರುವಾಹನ. ಇವರೀರ್ವರು ಚಿತ್ರಾಂಗದೆ ಮತ್ತು ಉಲೂಪಿಯರು. ನಿನಗೀಗ ಎಲ್ಲವೂ ಸ್ಮರಣೆಗೆ ಬಂದಿರಬಹುದು” ಎಂದು ಪಾರ್ಥನಿಗೆ ವಿಚಾರಗಳೆಲ್ಲವನ್ನೂ ನೆನಪಿಸಿದನು.

ಅರ್ಜುನ ಬಬ್ರುವಾಹನನ ಶೌರ್ಯ ಪರಾಕ್ರಮಕ್ಕೆ ಮೊದಲೇ ಮೆಚ್ಚಿಕೊಂಡಿದ್ದ. ಬಬ್ರುವಾಹನಾ! ನೀನು ನನ್ನ ಮಗ ಹೌದು. ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟಿದೆ. ಮಹಾ ಪರಾಕ್ರಮಿಯೂ, ರಣ ಭಯಂಕರನೂ, ಪುರುಷ ಸಿಂಹ ಸದೃಶನೂ ಆಗಿರುವ ನೀನು‌ ನನ್ನ ಮಗನೇ ಹೌದು . ಇವನನ್ನು ನನ್ನ ಮಗನೆಂದು ನಿಮ್ಮೆಲ್ಲರ ಮುಂದೆ ಒಪ್ಪಿ ಅಪ್ಪಿಕೊಳ್ಳುತ್ತೇನೆ. ಚಿತ್ರಾಂಗದೆ ಪರಮ ಪತಿವೃತೆಯೂ ನನ್ನ ಪ್ರಾಣಕಾಂತೆಯೂ ಆಗಿದ್ದಾಳೆ. ಎಂದು ಮುಕ್ತವಾಗಿ ಘೋಷಿಸಿದನು. ಬಬ್ರುವಾಹನನ ಪ್ರತಿಜ್ಞೆಯೂ ಪೂರ್ಣಗೊಂಡಂತಾಯಿತು.

ಅಷ್ಟಾಗುತ್ತಲೇ ಎದುರು ನಿಂತಿದ್ದ ಬಬ್ರುವಾಹನ, ಚಿತ್ರಾಂಗದೆ ಉಲೂಪಿಯರು ಬಂದು ಶ್ರೀಕೃಷ್ಣ ಹಾಗು ಅರ್ಜುನನ ಪಾದಕ್ಕೆರಗಿ ನಮಿಸಿದರು. ಅರ್ಜುನ ಬಬ್ರುವಾಹನನನ್ನು ಬಿಗಿದಪ್ಪಿ ಮುದ್ದಿಸಿದ. ಎರಡೂ ಕಡೆಯ ಸೇನೆಯೂ ವೈರ ಮರೆತು ಒಟ್ಟಾಗಿ ಸೇರಿತು. ಬಹಳ ಸಂತೋಷದಿಂದ ಉತ್ಸವದ ವಾತಾವರಣ ಮೈದಳೆಯಿತು.

ಬಬ್ರುವಾಹನ ಎಲ್ಲರನ್ನು ವಿನಯದಿಂದ ನಗರಕ್ಕೆ ಬರಲು ಪ್ರಾರ್ಥಿಸಿ ಆಮಂತ್ರಿಸಿ ಅರಮನೆಗೆ ಕರೆದೊಯ್ದನು. ನಗರದೆಲ್ಲೆಡೆ ಹಬ್ಬದ ವಾತಾವರಣ. ಅಲಂಕಾರ, ಮಂಗಳವಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸತ್ಕಾರ ಕೂಟಗಳು, ಭೂರಿ ಭೋಜನ, ದಾನ ಧರ್ಮಾದಿಗಳೆಲ್ಲ ಯಥೇಚ್ಚವಾಗಿ ನಡೆದವು.

ಬಬ್ರುವಾಹನ ಒತ್ತಾಯದಿಂದ ಅರ್ಜುನನನ್ನು ಮಣಿಪುರದ ಸಿಂಹಾಸನದಲ್ಲಿ ಕುಳ್ಳಿರಿಸಿ ತಾನು ಸೇವೆಗೈಯತೊಡಗಿದನು. ಬಹುವಿಧಗಳಿಂದ ಉಪಚರಿಸಿ ತನ್ನಿಂದ ಏನಾದರು ಅಪಚಾರವಾಗಿದ್ದರೆ ಮನ್ನಿಸಬೇಕು. ಜನ್ಮದಾತನಾದ ನಿಮ್ಮ ಮೇಲೆ ಆಯುಧ ಪ್ರಯೋಗಿಸಿ ಗಾಯಗೊಳಿಸಿದೆ, ನೋವು ನೀಡಿ, ಒಂದೊಮ್ಮೆಗೆ ಕೊಂದು ಬಿಟ್ಟೆ. ಅಂತಹ ಮಹಾಪಾಪಕರ ಕೃತ್ಯಕ್ಕೆ ಕ್ಷಮೆ ನೀಡಬೇಕೆಂದು ಪರಿಪರಿಯಾಗಿ ಬೇಡಿ, ಮನಕರಗಿ ದುಃಖಿಸಿ ಪ್ರಾಯಶ್ಚಿತ್ತ ಮಾಡಿಕೊಂಡನು. ಚಿತ್ರಾಂಗದೆ ತನ್ನ ಪತಿಯನ್ನು ಮಣಿಪುರದಲ್ಲಿ ಕಂಡು ಬಹಳಷ್ಟು ಸಂತೋಷ ಉಲ್ಲಾಸದಿಂದ ಮಣಿಪುರದ ಕುಲದೇವರಾದ ಮಹೇಶ್ವರನಿಗೂ, ಪ್ರತ್ಯಕ್ಷ ಬಂದಿರುವ ಶ್ರೀಹರಿಗೂ ನಿರಂತರ ಪೂಜೆಗೈಯುತ್ತಾ ಕೃತಜ್ಞತೆ ಸಲ್ಲಿಸತೊಡಗಿದಳು.

ಆ ಬಳಿಕ ಬಬ್ರುಬಾಹನ ಸಾಕಷ್ಟು ಕಪ್ಪ ಕಾಣಿಕೆಗಳನ್ನು ಬಂಡಿ ಬಂಡಿಯಾಗಿ ತುಂಬಿಸಿ ಪಾಂಡವರ ಅಶ್ವಮೇಧ ಯಾಗಕ್ಕೆ ಮಣಿಪುರದ ಕೊಡುಗೆಯಾಗಿ ಸಮರ್ಪಿಸಿದನು. ಯಾಗ ತುರಗವನ್ನು ಬಹಳ ಗೌರವದಿಂದ ಬಿಟ್ಟುಕೊಟ್ಟು ತಾನೂ ಅಶ್ವಮೇಧಯಾಗದ ದಿಗ್ವಿಜಯಕ್ಕೆ ಸೇನಾಸಹಿತನಾಗಿ ಜೊತೆಯಾದನು. ಶ್ರೀಕೃಷ್ಣನು “ಅರ್ಜುನಾ ಮುಂದಣ ಪ್ರಯಾಣದಲ್ಲಿ ನಾನು ನಿನ್ನ ಜೊತೆಯಾಗಿ ಬರುವೆನೆಂದು ಸಿದ್ಧನಾಗಿ ಹೊರಟನು.

ಯಾಗ ತುರಗ ಮಣಿಪುರದಿಂದ ಮತ್ತೆ ಹೊರಟು ಸ್ವಚ್ಚಂದವಾಗಿ ತಿರುಗಾಡುತ್ತಾ ಮುಂದೆ ಮುಂದೆ ಹೊರಟಿತು. ಏನೋ ಕೌತುಕಪ್ರದ ಮಹಾತ್ಮೆ ಕಾದಿರಬೇಕು. ಇಲ್ಲದಿದ್ದರೆ ಕೃಷ್ಣ ಅಕಾರಣವಾಗಿ ಅರ್ಜುನನ ಜೊತೆ ಹೊರಡುತ್ತಾನೆಯೇ?

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page