ಭಾಗ – 544
ಭರತೇಶ ಶೆಟ್ಟಿ , ಎಕ್ಕಾರು

ರಾಕ್ಷಸ ರಾಜ, ಬಕಾಸುರ ಪುತ್ರ ಭೀಷಣ ಪಾಂಡವರ ಸೇನೆಯನ್ನು ಬಂಧಿಸಿ ನರಮೇಧಗೈದು, ಅರ್ಜುನನ್ನೂ ಕೊಂದು ತಿನ್ನಬೇಕೆಂದು ನಿರ್ಣಯಿಸಿದನು. ಭೀಮಸೇನನಿಗೆ ಅರ್ಜುನನೂ ಪ್ರಿಯ ಸೋದರನಾಗಿರುವುದರಿಂದ ಅರ್ಜುನನ್ನು ಕೊಂದರೆ ಭೀಮ ದುಃಖಕ್ಕೊಳಗಾಗಿ ನಮ್ಮ ಮೇಲೆ ಹಗೆ ತೀರಿಸಲು ಬರುತ್ತಾನೆ. ನಮ್ಮ ನಾಡಿಗೆ ಆತನೇ ಬಂದರೆ ಸ್ವಕ್ಷೇತ್ರದಲ್ಲಿ ನಮ್ಮ ಪ್ರಾಬಲ್ಯ ಅಧಿಕ. ನಾಯಿಯೂ ತನ್ನ ಮನೆಯ ವಠಾರದಲ್ಲಿ ಜೋರಾಗಿ ಇದ್ದು ಸಿಂಹ ಸದೃಶವಾಗಿ ವರ್ತಿಸುತ್ತದೆ. ಆ ಕಾರಣಕ್ಕೆ ನಾಯಿಯನ್ನು ಗ್ರಾಮಸಿಂಹ ಎಂದು ಕರೆಯುತ್ತಾರೆ. ಸ್ವಕ್ಷೇತ್ರದಲ್ಲಿ ಶ್ವಾನವೂ ಅಷ್ಟು ಪ್ರಬಲತೆ ತೋರುವಾಗ ರಾಕ್ಷಸರಾದ ನಾವೆಷ್ಟು ಬಲವರ್ಧಿತರಾಗಿರಲಾರೆವು? ಎಂಬ ಚಿಂತನೆ ಭೀಷಣನನದ್ದು. ವಿಕಾರ ರಾಕ್ಷಸಿಯರು, ಭಯಂಕರ ರಕ್ಕಸರು ಸೇರಿದ ನಮ್ಮ ಸೇನೆ ಬಲಾಢ್ಯವೂ, ಜಯ ಸಾಧನೆ ಮಾಡಲು ಶಕ್ತವೂ ಆಗಿದೆ. ಹಾರುವ ಪತಂಗವೊಂದು ತಾನಾಗಿ ಹಾರುತ್ತಾ ಜೇಡರ ಬಲೆಯಲ್ಲಿ ಸಿಲುಕಿ ಆಹಾರವಾಗುವಂತಾಗಿದೆ ಪಾಂಡವರ ಗತಿ. ಸಿಂಹದ ಗುಹೆಯನ್ನು ಹುಲ್ಲೆಯ ಮರಿಯೊಂದು ತಾನಾಗಿ ಬಂದು ಹೊಕ್ಕರೆ ಏನಾದೀತು? ಹಾಗಾಗಿದೆ ಪಾಂಡವರ ಸ್ಥಿತಿ. ಪ್ರತಿಕಾರ ತೀರಿಸಲು ಇದಕ್ಕಿಂತ ಮಿಗಿಲಾದ ಸದವಕಾಶ ಜೀವನದಲ್ಲಿ ಒದಗಲಿಕ್ಕಿಲ್ಲ ಎಂದು ಭೀಷಣ ಅಧಮ್ಯ ವಿಶ್ವಾಸ ತಳೆದಿದ್ದಾನೆ.
ರಾಕ್ಷಸ ರಾಜ ಭೀಷಣ ಪಾಂಡವರ ಯಾಗಾಶ್ವವನ್ನು ಹಿಡಿದು ಬಂಧಿಸುವಂತೆ ಆಜ್ಞೆ ಮಾಡಿದನು. ತನ್ನ ಅತಿ ಬಲಾಢ್ಯ ರಕ್ಕಸ ಸೇನೆಯನ್ನು ಸಜ್ಜುಗೊಳಿಸಿ ಸಿದ್ಧನಾದನು. ಅರ್ಜುನನಿಗೆ “ನೀನು ಸಾಹಸಿ ಹೌದಾದರೆ ನಿನ್ನ ಕುದುರೆಯನ್ನು ಯುದ್ದ ಮುಖೇನ ಬಿಡಿಸಿಕೋ” ಎಂಬ ಸಂದೇಶ ರವಾನಿಸಿದನು.
ಪಾಂಡವರು ಹೇಗೂ ಸೇನಾ ಸಿದ್ಧತೆಯೊಂದಿಗೆ ಯಾವ ಕ್ಷಣದಲ್ಲೂ ಸಮರ ಸಾಧ್ಯವಿರಬಹುದು ಎಂಬ ನಿರ್ಣಯ ಮಾಡಿಕೊಂಡು ಸನ್ನದ್ಧರಾಗಿರುವವರು. ರಾಕ್ಷಸರ ಮಾಯಾ ವಿದ್ಯೆ, ಬಾಹುಬಲ ಅರಿತು ಸಿದ್ಧತೆ ಮಾಡಿಕೊಂಡರು. ನೀರಿನೊಳಗೆ ಮೊಸಳೆ ಹೇಗೆ ಅಪಾಯಕಾರಿಯೊ ಅದೇ ತರಹ ಸ್ವಂತ ಸಾಮ್ರಾಜ್ಯದಲ್ಲಿ ರಕ್ಕಸರೂ ಪ್ರಬಲರು ಆಗಿರಬಹುದು. ಯಾವುದೇ ಕಾರಣಕ್ಕೂ ವೈರಿಗಳ ಬಗ್ಗೆ ಅಸಡ್ಡೆ ಸಲ್ಲದು. ಕ್ಷುಲ್ಲಕರು ಎಂದು ತಾತ್ಸಾರ ಮಾಡಬಾರದು. ನಮ್ಮ ಸಿದ್ದತೆಗಳನ್ನು ಪರಿಪೂರ್ಣ ವಿಧಾನದಿಂದ ಸಮಾಲೋಚಿಸಿ ಜಾಗರೂಕತೆಯಿಂದ ವ್ಯವಹರಿಸಬೇಕು. ಎಂದು ತಮ್ಮವರಿಗೆ ಎಚ್ಚರಿಕೆಯ ಮಾತುಗಳನ್ನಾಡಿದನು ಅರ್ಜುನ. ಅನುಸಾಲ್ವ ಸಹಿತ ರಾಕ್ಷಸ ಸೇನೆಯನ್ನು ಮುಂಭಾಗದಲ್ಲಿರಿಸಿ, ವೃಷಕೇತು, ಅನಿರುದ್ಧ, ಯವನಾಶ್ವ, ನೀಲಧ್ವಜ, ಹಂಸಧ್ವಜಾದಿಗಳನ್ನು ಆಯಕಟ್ಟಿನ ವ್ಯೂಹವಾಗಿಸಿ ಸಜ್ಜುಗೊಂಡರು.
ಭೀಷಣನೂ ಪರಾಕ್ರಮಿ. ತನ್ನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಬಲ ಹೊಂದಿದ ರಾಕ್ಷಸ ವೀರರು ಪಾಂಡವ ಸೇನೆಯ ಮೇಲೆರಗಿದರು. ಕೆಲಹೊತ್ತು ಭೀಕರ ಯುದ್ಧ ಸಾಗಿತು. ಅರ್ಜುನನಿಗೆ ಇನ್ನು ಕಾಲಹರಣ ಮಾಡಿದರೆ ವ್ಯರ್ಥ ನಷ್ಟವಾಗಿ ಹೋದಿತು ಎಂದು ಭಾಸವಾಯಿತು. ಕೂಡಲೆ ರಕ್ಷೋಘ್ನ ಎಂಬ ಮಹಾಶರವನ್ನು ಅಭಿಮಂತ್ರಿಸಿ ಸಂಧಾನ ಮಾಡಿ ರಾಕ್ಷಸ ಗಡಣದ ಮೇಲೆ ಪ್ರಯೋಗಿಸಿದನು. ಮಂತ್ರಾಸ್ತ್ರದ ಬಲದಿಂದ ಭೀಷಣನ ರಕ್ಕಸ ಪಡೆ ಇನ್ನಿಲ್ಲದಂತೆ ನಾಶವಾಗಿ ಹೋಯಿತು.
ಪ್ರಜಾ ಪೀಡಕರು, ಹಿಂಸಾ ಪ್ರವೃತ್ತಿಯವರು ಆದ ರಕ್ಕಸರನ್ನು ಸೋಲಿಸಿ, ಅವರ ಪುರ ಪ್ರವೇಶಿಸಿ ಹುಡುಕಿ ಹುಡುಕಿ ಕೊಂದು ಹಾಕಿದರು. ಪ್ರಜಾವರ್ಗವು ನಿರಾಳವಾಗಿ ರಾಕ್ಷಸ ಪೀಡನೆಯಿಂದ ಮುಕ್ತವಾಗಿ ಬದುಕುವಂತಾಯಿತು. ಅಷ್ಟಕ್ಕೆ ಬಿಡದ ಪಾಂಡವ ಸೇನೆ ರಕ್ಕಸ ಭೀಷಣನ ಅರಮನೆ ಹೊಕ್ಕು ಬೆಲೆ ಬಾಳುವ ಚಿನ್ನ, ವಜ್ರ, ವೈಢೂರ್ಯಾದಿ ಅಮೂಲ್ಯ ಭಂಡಾರವನ್ನು ವಶಪಡಿಸಿ ಹಸ್ತಿನಾವತಿಗೆ ಕಳುಹಿಸಿದರು. ಉಗ್ರ ರಕ್ಕಸರ ತಾಣವಾಗಿದ್ದ ಪುರ ಈಗ ನೆಮ್ಮದಿಯ ಉಸಿರಾಡುವಂತಾಯಿತು.
ಬಂಧ ಮುಕ್ತಗೊಂಡ ನಂತರ ಯಾಗಾಶ್ವವು ಪ್ರಯಾಣ ಬೆಳೆಸಿತು. ಸಾಗುತ್ತಾ ಪಾಂಡ್ಯ ದೇಶವನ್ನು ಪ್ರವೇಶ ಮಾಡಿತು. ಪಾಂಡ್ಯದೇಶದ ರಾಜಧಾನಿ ಮಣಿಪುರ.
ಮುಂದುವರಿಯುವುದು..
































