30 C
Udupi
Sunday, May 24, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 531

ಭರತೇಶ ಶೆಟ್ಟಿ, ಎಕ್ಕಾರು

ತನ್ನ ಕಣ್ಣುಗಳನ್ನು ತಾನು ನಂಬಲಾಗದೆ ಧನುರ್ಬಾಣಗಳನ್ನು ರಥದಲ್ಲಿರಿಸಿ ಎರಡೂ ಕೈಗಳಿಂದ ಕಣ್ಣುಗಳನ್ನು ಉಜ್ಜಿಕೊಂಡು ನೋಡುತ್ತಿದ್ದಾನೆ ಸುಧನ್ವ. ಚಿವುಟಿಕೊಂಡು ಭ್ರಮೆಯೊ, ಕನಸೊ ಅಲ್ಲ ನಿಜವೋ ಎಂದು ಪರಿಕಿಸುತ್ತಿದ್ದಾನೆ. ಇಲ್ಲ ಇಲ್ಲ ಇದು ನಿಜ ಎಂದು ಗೊತ್ತಾಯಿತು ಚಂಪಕಾವತಿಯ ರಾಜಕುಮಾರನಿಗೆ. ಇಷ್ಟು ದಿನ ಚಿತ್ರದಲ್ಲೊ, ಮೂರ್ತಿಯಲ್ಲೊ ಯಾರನ್ನು ದೇವನೆಂದು ಆರಾಧಿಸುತ್ತಿದ್ದೆನೊ! ಆ ನನ್ನ ಆರಾಧ್ಯ ಕೃಷ್ಣ ಪರಮಾತ್ಮ ನನ್ನೆದುರು ನಿಂತಿದ್ದಾನೆ. ಚೈತನ್ಯ ಮೂರ್ತಿಯನ್ನು ನೋಡಿದ ನನ್ನ ಕಂಗಳು ಅರಿಯದೆ ಏನು ಪಾಪ ಮಾಡಿದ್ದರೂ ಈಗ ಪಾವನಗೊಂಡವು ಎಂಬುವುದರಲ್ಲಿ ಅನುಮಾನವಿಲ್ಲ. ಸುದೀರ್ಘವಾದ ಉಸಿರೆಳೆದು ಬಿಡುತ್ತಾ ನನ್ನ ದೇವರ ಮೈಸವರಿಕೊಂಡು ಬೀಸುತ್ತಿರುವ ಗಾಳಿಯನ್ನು ಪ್ರಾಣವಾಯುವಾಗಿ ಆಘ್ರಾಣಿಸುತ್ತಿದ್ದೇನೆ. ಈ ಕಾಯದಿಂದಾಗಿರುವ ಯಾವ ದೋಷಗಳಿದ್ದರೂ ಮುಕ್ತವಾಗಿ ಹೋದವು ಎಂಬುವುದು ಸತ್ಯ. ಆಹಾ! ಏನು ಸೌಂದರ್ಯ, ಲಾವಣ್ಯ, ಭಗವಂತನನ್ನು ಕಂಡಾಗ ನನ್ನೊಳಗೂ ನವ ಚೈತನ್ಯ ಉಕ್ಕೇರುತ್ತಾ ಬರುತ್ತಿದೆ. ನನಗಿನ್ನೇನು ಬೇಕು? ಅಪೇಕ್ಷಿಸಲು ಇದಕ್ಕಿಂತ ಮಿಗಿಲಾದುದೇನು ಇದೆ ಈ ಜಗದಲ್ಲಿ? ಕರುಣಾಳು, ಕೃಪಾಕರ, ಕರುಣಾಕರ, ಮುರಳೀಧರ, ಭಕ್ತವತ್ಸಲಾ ಕಡೆಗೂ ನಿನ್ನನ್ನು ಕಾಣುವ ಭಾಗ್ಯವಂತ ನಾನಾದೆನಲ್ಲಾ? ತಪೋನಿಧಿಗಳಾದ ಋಷಿವರೇಣ್ಯರಿಗೂ ದುರ್ಲಭನಾದ ನೀನು ನನ್ನಂತಹ ಹುಲು ಮಾನವನಿಗೆ ಕಾಣ ಸಿಕ್ಕಿದೆಯಲ್ಲ ಕೃತಾರ್ಥನಾದೆ ದೇವಾ! ಈ ತನಕ ನನ್ನೊಳಗೆ ಇದ್ದು ನನ್ನಿಂದ ಸೇವಿಸಲ್ಪಡುತ್ತಿದ್ದೆ. ಜಗದ ಚರಾಚರ ವಸ್ತುಗಳಲ್ಲಿ ನಿನ್ನನ್ನು ಕಾಣುತ್ತಾ ಬದುಕಿದ್ದೇನೆ. ವಾಸುದೇವಾ, ಸರ್ವ ವ್ಯಾಪಿಯಾಗಿ ಇರುವವನು ಇಂದು ನನ್ನೆದುರು ಸಾಕ್ಷಾತ್ಕಾರಗೊಂಡಿರುವೆ. ನನ್ನ ನರನಾಡಿಗಳಲ್ಲೂ ಆನಂದದ ಪುಳಕ ಹರಿದಾಡುತ್ತಿದೆ. ಧನ್ಯನಾದೆ, ಕೃತಾರ್ಥನಾದೆ, ಪುನೀತನೂ ಆಗಿದ್ದೇನೆ ಮುಕುಂದಾ. ನನ್ನ ಪುರುಷತ್ವ ಸಾರ್ಥಕ್ಯ ಕಂಡಿದೆ. ಒಬ್ಬ ಗಂಡು ಮಗನಾಗಿ ಪಣ ತೊಟ್ಟು ಮಹತ್ಸಾಧನೆ ಸಾಧಿಸಿದ ಸಾಧಕ ಭಾವ ನನ್ನದಾಗಿದೆ. ಈ ಶರೀರ ಮಾಧ್ಯಮದಿಂದ ಬಹಿರಂಗವಾಗಿ ನಾನೇನು ಮಾಡಬೇಕೆಂದು ಬಯಸಿದ್ದೆನೊ ಆ ನನ್ನ ಆಸೆ ಪೂರೈಸಿದೆ. ನನ್ನ ಗಂಡಸುತನಕ್ಕಿಷ್ಟು ಸಾಕು. ನನ್ನ ತಾಯಿ, ತಂಗಿ, ಮಡದಿ, ಪುರಜನರು, ಪರಿವಾರ ಹೀಗೆ ಎಲ್ಲರಲ್ಲಿ ನನಗೆ ಏನು ಮಾಡಲಿಕ್ಕಿದೆ ಎಂದು ಅಪಾರ ಆಸೆಯಿಂದ ನುಡಿದಿದ್ದೆನೊ, ಅದು ನೆರವೇರಿದೆ. ನಾರಾಯಣನನ್ನು ಕಂಡ ಮೇಲೆ ನರಕದ ಭಯವಿಲ್ಲ. ನನ್ನ ಜನ್ಮ ಜನ್ಮಾಂತರದ ಪ್ರಾರಬ್ಧ ಕರ್ಮಫಲ, ಪಾಪಗಳೇನಿದ್ದರೂ ನಾಶವಾಗಿ ಹೋಯಿತೆಂದು ತಿಳಿಯುತ್ತೇನೆ. ದಿವ್ಯ ಮೂರುತಿಯ ದರುಶನ ಪಡೆದ ನನ್ನ ಆತ್ಮವೀಗ ಪುಣ್ಯಾತ್ಮವಾಗಿದೆ. ಹುಟ್ಟು ಸಾವುಗಳೆಂಬ ಜೀವನಚಕ್ರದ ಸರಪಳಿ ಕಳಚಿತು ಮುಕ್ತನಾದ ನನಗೆ ಮುಕ್ತಿ ಸಿಕ್ಕೀತು ಎಂಬ ವಿಶ್ವಾಸ ಗರಿಗೆದರಿದೆ. ಆದರೆ ಈಗ ನಾನು ಏನು ಮಾಡಬೇಕೆಂದು ತೋಚುತ್ತಿಲ್ಲ. ಪೂಜಿಸಿ ಆರಾಧಿಸೋಣವೆ? ಕೃಷ್ಣಾ ನೀನು ಬಂದು ನಿಂತಿರುವುದು ರಣಕ್ಷೇತ್ರದಲ್ಲಿ. ತಡೆಯಲಾಗುತ್ತಿಲ್ಲ ದೇವಾ! ನಿನಗೇನು ಅರ್ಪಿಸಲಿ, ಗಂಧ, ಧೂಪ, ಜಲ, ಪುಷ್ಪ? ಯಾವುದೂ ಈಗ ನನ್ನ ಬಳಿ ಇಲ್ಲದೇ ಹೋಯಿತೇ? ಇದೋ ನನ್ನನ್ನು ನಿನಗೆ ಸಮರ್ಪಿಸುತ್ತೇನೆ. ಹೇಗೆ ಬೇಕೋ ಹಾಗೆ ನನ್ನ ಬುದ್ದಿಯೆ ನೀನಾಗಿ ಬಳಸಿಕೋ ಕೃಷ್ಣಾ.. ಎಂದು ರಥದಲ್ಲಿ ಸಾಷ್ಟಾಂಗ ನಮಸ್ಕರಿಸಿ ಕಣ್ಮುಚ್ಚಿ ಕುಳಿತನು. ಆ ಕೂಡಲೆ ಕಣ್ತೆರೆದು, ಅರೆ ನಾನೆಂತಹ ಹುಚ್ಚ? ದೇವರು ಎದುರಿರುವಾಗ ಕಣ್ಮುಚ್ಚಿ ದೇವರನ್ನು ಕಾಣಲು ಒದ್ದಾಡುವುದೆ? ಮೈಮರೆತು ತನ್ಮಯನಾಗಿ ಶ್ರೀಕೃಷ್ಣನನ್ನು ನೋಡತೊಡಗಿದನು. ಭಗವಂತಾ! ನನ್ನ ಧರ್ಮ ಕರ್ಮ ಏನು ಆಚರಿಸಿದ್ದೇನೋ ಅದರ ಪಾಲನೆಯನ್ನು ಮೆಚ್ಚಿ ನೀನು ಕಾಣಿಸಿಕೊಂಡಿರುವೆ ಎಂದು ನಂಬುತ್ತಿದ್ದೇನೆ. ಈ ತನಕ ಪಾಲಿಸುತ್ತಾ ಬಂದಿರುವ ಕರ್ಮಮಾರ್ಗವನ್ನು ತೊರೆಯದೆ ಆ ದಾರಿಯಲ್ಲಿ ಸಾಗುತ್ತೇನೆ. ಇದೋ ಧನುರ್ಬಾಣಗಳನ್ನು ಕೈಗೆತ್ತಿಕೊಂಡಿದ್ದೇನೆ. ಯುದ್ಧವನ್ನು ಸತ್ಕರ್ಮವೆಂದು ತಿಳಿದು ನಿನಗದೇ ನನ್ನ ಸೇವೆಯೆಂದು ಅತಿಪ್ರೀತಿಯಿಂದ ನನ್ನ ಕರ್ಮ ಮಾಡುತ್ತೇನೆ. ಫಲದಾಯಕನಾದ ನೀನು ತೀರ್ಮಾನಿಸಿ ಏನು ನೀಡಬೇಕೋ ಅದನ್ನು ದಯಪಾಲಿಸುವೆ ಎಂಬ ಅಚಲ ವಿಶ್ವಾಸವಿದೆ. ಆಗಲಿ ಏನು ಆಗಲಿದೆಯೋ ಅದು ಆಗುತ್ತಾ ಹೋಗಲಿ. ಏನಾದರೂ ಅದು ಒಳ್ಳೆಯದಕ್ಕಾಗಿಯೆ ಆಗುತ್ತಿದೆ ಎಂದು ನಂಬಿ ಭಕ್ತಿಯಿಂದ ತೊಡಗಿಕೊಳ್ಳುತ್ತೇನೆ. ಹೀಗೆ ತರ್ಕಿಸಿ ಶಸ್ತ್ರ ಸನ್ನದ್ಧ ನಾಗಿ ನಿಂತನು.

ಅತ್ತ ಶ್ರೀಕೃಷ್ಣನಲ್ಲಿ ಅರ್ಜುನ ವಿಲಾಪಿಸುತ್ತಿದ್ದಾನೆ “ಹೇ ಕೃಷ್ಣಾ, ನೀನು ನಿರ್ದೇಶನವಿತ್ತು ದೋಷ ನಿವಾರಾಣಾರ್ಥವಾಗಿ ಅಶ್ವಮೇಧ ಯಾಗ ಮಾಡಿಸಲು ಪ್ರೇರೇಪಿಸಿದೆ. ಚಂದ್ರವಂಶದ ಕೀರ್ತಿಗೆ ಕಲಶಪ್ರಾಯವಾಗಿ ಸಾಗಬೇಕಿತ್ತು ಈ ತುರಗಾಧ್ವರ. ನಮ್ಮ ಹಿರಿಯರೂ ಮಹತ್ಸಾಧಕರಲ್ಲವೆ? ಒಬ್ಬರಿಗಿಂತ ಒಬ್ಬರು ಮಿಗಿಲಾದ ಸತ್ಕೀರ್ತಿಯನ್ನು ಶಶಿವಂಶಕ್ಕಿತ್ತು ಬೆಳೆಸಿದವರಲ್ಲವೆ? ಇಂದು ನಾನು ಸೋತು ನಮ್ಮ ವಂಶ ವಲ್ಲರಿಗೆ ಅಪಕೀರ್ತಿ ಬರುವಂತಾಯಿತಲ್ಲವೆ? ಕ್ಷತ್ರಿಯನಾದ ನನಗೆ ಮಾನವೇ ಪ್ರಾಣಕ್ಕಿಂತ ಹೆಚ್ಚು. ಅವಮಾನಿತನಾಗಿ ಬದುಕಿದರೆ ನಾನು ಈ ಭೂಮಿಗೆ ಭಾರವಾಗಿ ಹೋದೇನು. ಧರ್ಮಮೂರ್ತಿಯಾದ ಅಣ್ಣ ಧರ್ಮರಾಯನ ಅಶ್ವಮೇಧ ಯಾಗವೂ ಅಪೂರ್ಣವಾಗಿ ಮತ್ತಷ್ಟು ದೋಷಕ್ಕೆ ಕಾರಣವಾದೀತು. ಇಂತಹ ದುರ್ಗತಿಗೆ ಕಾರಣನಾದ ನಾನಿನ್ನು ಬದುಕಬೇಕೆ? ಸಂಬಂಧದಲ್ಲಿ ನೀನು ಅತ್ತೆಯ ಮಗ ಭಾವನಾದರೂ ಮನಸ್ಸಿನಲ್ಲಿ ಭಕ್ತಿಭಾವ ತುಂಬಿಕೊಂಡು ನಿನ್ನ‌ನ್ನು ನಂಬಿ ಬದುಕುತ್ತಿರುವ ನಮಗೇಕೆ ಈ ಪರಿಯ ಪರಿಭವ? ಪರೀಕ್ಷೆ? ನೀನು ದಾರಿ ತೋರಬೇಕು ದೇವಾ” ಎಂದು ಶರಣಾಗತನಾಗಿ ಬೇಡಿಕೊಂಡನು.

ಶರಣಾಗತ ವತ್ಸಲ, ದೀನರಕ್ಷಕ ಕೃಷ್ಣ ಸೂತ್ರಧಾರನಲ್ಲವೆ? ಯಾರಿಗೇನು ಬೇಕು ಅದನ್ನು ಕರುಣಿಸುವ ಕಾಮಿತಾರ್ಥ ಫಲದಾಯಕ ಕಾಮಧೇನು ಸ್ವರೂಪನಲ್ಲವೆ? “ಅರ್ಜುನಾ! ಭಯಪಡಬೇಡ. ಆಗಬಾರದ್ದೇನೂ ಆಗಿಲ್ಲ, ಎಲ್ಲ ಮುಗಿದಿಲ್ಲ. ನಿನ್ನಿಂದ ಬಹಳಷ್ಟು ಕಾರ್ಯಗಳು ಆಗಬೇಕಿದೆ. ಇದೋ ನಾನೇ ನಿನ್ನ ಸಹಾಯಕನಾಗಿ ಬಂದಿದ್ದೇನೆ ಧೈರ್ಯ ತಾಳು.” ಎಂದು ಆರ್ತನಾಗಿ ಕುಳಿತಿದ್ದ ಪಾರ್ಥನನ್ನು ಬಿಗಿದಪ್ಪಿದನು. ಕಳಚಿದ ರಥ ಚಕ್ರದ ಕೀಲಿಗಳನ್ನು ಮರು ಜೋಡಣೆ ಮಾಡಿ ಸಜ್ಜುಗೊಳಿಸಿದನು. ಕುದುರೆಗಳ ಮೈದಡವಿ ಎದ್ದು ನಿಲ್ಲಿಸಿದನು. “ಅರ್ಜುನಾ! ಸಾರಥಿ ಸತ್ತಿರುವನೆಂದು ಕೊರಗಬೇಡ. ಇದೋ ನಿನ್ನ ಸಾರಥಿಯಾಗಿ ನಾನು ಪೀಠಾರೋಹಣ ಮಾಡುತ್ತೇನೆ. ತಡಮಾಡದೆ ಉಲ್ಲಾಸಿತನಾಗಿ ರಥವೇರು. ಯುದ್ಧಕ್ಕೆ ಸಿದ್ಧನಾಗು” ಎಂದು ಪ್ರೇರೇಪಿಸಿದನು.

ಅರೆರೆ ಏನಾಶ್ಚರ್ಯ ಹಗಲು ಹೊತ್ತಿನಲ್ಲಿ ಸೂರ್ಯನಿಗಿಂತಲೂ ಪ್ರಖರವಾದ ಪ್ರಭೆ ಅರ್ಜುನನ ರಥದಿಂದ ಹೊರಸೂಸುತ್ತಿದೆ. ಪಾರ್ಥನು ಕೈಸೋತಿರುವಾಗ ಪಾಂಡವ ಪಕ್ಷದಿಂದ ಭೀಮ, ನಕುಲ ಸಹದೇವಾದಿಗಳು ಯುದ್ಧಕ್ಕೆ ಬಂದಾರು. ಅವರ ಜೊತೆ ಸೆಣಸಾಟ ಸಾಗೀತು ಎಂದು ತರ್ಕಿಸಿದರೆ, ನನ್ನ ದೇವರು ಪಾರ್ಥಸಾರಥಿಯಾಗಿದ್ದಾರೆ. ಗಾಯಾಳಾಗಿ ಧರೆಗುರುಳಿ ಧೂಳು ಮೂಸುತ್ತಿದ್ದ ರಥದ ಕುದುರೆಗಳು ಎದ್ದು ನಿಂತು ಕೆನೆಯುತ್ತಿವೆ. ಸೋತು ಮರುಗುತ್ತಿದ್ದ ಆ ಪಾರ್ಥ ಹೂಂಕರಿಸುತ್ತಿದ್ದಾನೆ. ಇದೆಲ್ಲವೂ ಹರಿ ಲೀಲೆಯ ಪ್ರಭಾವ. ಇರಲಿ ನನ್ನಿಂದ ಎಷ್ಟು ಸಾಧ್ಯವಾದಿತೋ ಅದೆಲ್ಲವನ್ನೂ ಮಾಡುತ್ತಾ ಚಂಪಕಾವತಿಯ ರಕ್ಷಣೆಗಾಗಿ ಹೋರಾಡುತ್ತೇನೆ. ಎಂದು ಸುಧನ್ವನೂ ಧನುಷ್ಟೇಂಕಾರಗೈದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page