ಭಾಗ 507
ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೫೦೭ ಮಹಾಭಾರತ
ಒಂದೆಡೆ ಅಶ್ವಮೇಧ ಯಾಗಕ್ಕೆ ಸಂಕಲ್ಪವಾಗಿದೆ. ಭಗವಾನ್ ವ್ಯಾಸರು, ಕೃಷ್ಣ ಪರಮಾತ್ಮ ಸೂಕ್ತ ವಿಚಾರಗಳನ್ನು ಅರುಹಿ ಪಾಂಡವರನ್ನು ಉತ್ತೇಜಿಸಿದ್ದಾರೆ. ಹೀಗಿರಲು ಧರ್ಮರಾಯನು ವ್ಯಾಸರ ನಿರ್ದೇಶನದಂತೆ ಮರುತ್ತನಿಂದ ಸಂಗ್ರಹಿತವಾಗಿ ನಿಕ್ಷೇಪವಾದ ನಿಧಿಯನ್ನು ಯಾಗ ನಿಮಿತ್ತ ವಿನಿಯೋಗಿಸುವ ಸಲುವಾಗಿ ಅತ್ತ ಪಯಣಿಸುವ ನಿರ್ಧಾರ ಮಾಡಿದನು. ಹಸ್ತಿನಾವತಿಯ ಪುರದ ಸಂರಕ್ಷಣೆಯ ಪೂರ್ಣ ಜವಾಬ್ದಾರಿಯನ್ನು ಚಿಕ್ಕಪ್ಪನೂ ಮಹಾಮಂತ್ರಿಯೂ ಆಗಿರುವ ವಿದುರನಿಗೆ ವಹಿಸಿದನು. ತಮ್ಮಂದಿರೊಡಗೂಡಿ, ಸೇನಾಪರಿವಾರ ಸಹಿತನಾಗಿ ಹಿಮಾಲಯದತ್ತ ಹೊರಟನು. ಉತ್ತರಾಭಿಮುಖವಾಗಿ ಸುದೀರ್ಘ ಪ್ರಯಾಣಗೈಯುತ್ತಾ ದಾರಿಯಲ್ಲಿ ಸಿಕ್ಕ ಋಷ್ಯಾಶ್ರಮಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಾ, ಕ್ಷೇತ್ರ ದರ್ಶನಗಳನ್ನು ಮಾಡುತ್ತಾ ಮುಂದುವರಿದನು. ಋಷಿಗಳ ನಿರ್ದೇಶನ ಪಡೆದು ಕೇಳುತ್ತಾ ಕೇಳುತ್ತಾ ಹೇಗೂ ಹಿಮವತ್ಪ್ರದೇಶದಲ್ಲಿ ಮರುತ್ತ ರಾಜನು ಯಾಗ ವಿರಚಿಸಿದ ಪುಣ್ಯಕ್ಷೇತ್ರವನ್ನು ತಲುಪಿದನು. ಆ ಪ್ರದೇಶ ದೃಶ್ಯ ಮಾತ್ರದಿಂದಲೆ ಮಹಿಮಾನ್ವಿತ ಕ್ಷೇತ್ರ ಎಂಬಂತೆ ಭಾಸವಾಗುತ್ತಿತ್ತು. ಅಲ್ಲಿ ನಿಧಿಯ ಸಂರಕ್ಷಣೆಗಾಗಿ ಘೋರ ವಿಷವುಳ್ಳ ಘಟ ಸರ್ಪಗಳು, ಭೂತಗಣಗಳು ಆವೃತವಾಗಿದ್ದವು. ಅರ್ಜುನ ಮತ್ತು ಧರ್ಮರಾಯ ಸೇರಿ ಆ ಪ್ರದೇಶಕ್ಕೆ ವಂದಿಸಿ ಗಂಧಾಕ್ಷತೆಗಳನ್ನಿಟ್ಟು ಪೂಜಿಸಿದರು. ಹಾಗೆ ಮಾಡುತ್ತಿದ್ದಂತೆಯೆ ಉರಗಗಳು ಶಾಂತವಾಗಿ ದೂರ ಸರಿದವು. ಭೀಮಸೇನನು ಪ್ರತ್ಯೇಕವಾಗಿ ಅಸುರೀ ಕ್ರಿಯೆಯಲ್ಲಿ ಭೂತಗಣಗಳಿಗೆ ಬಲಿಯನ್ನು ಸಮರ್ಪಿಸಿದನು. ತೃಪ್ತಿಗೊಂಡ ಭೂತಗಣಗಳೂ ಪ್ರಸನ್ನಗೊಂಡು ಯಾಗ ಭೂಮಿಯನ್ನು ಮುಕ್ತಗೊಳಿಸಿದವು. ಭಗವದ್ಕೃಪೆ ತಮಗಾಯಿತೆಂದು ಅರಿತುಕೊಂಡ ಯುಧಿಷ್ಠಿರನು ಆ ಕ್ಷೇತ್ರದಲ್ಲಿ ಉತ್ಖನನ ಕಾರ್ಯ ಆರಂಭಿಸಲು ತನ್ನ ಪರಿಚಾರಕರಿಗೆ ಅನುಮತಿಯಿತ್ತನು. ಕೊಂಚ ಸಮಯ ಕಳೆದಾಗ ಅಲ್ಲಿ ಅಮಿತವಾದ ನಿಧಿ ಗೋಚರಿಸಿತು. ಲೆಕ್ಕವಿಲ್ಲದಷ್ಟು ಆಳುಗಳು ಅಸಂಖ್ಯ ಬಂಡಿಗಳಲ್ಲಿ, ಆನೆ, ಒಂಟೆಗಳಲ್ಲಿ ಧನ ಕನಕದ ರಾಶಿ ರಾಶಿ, ಮೂಟೆಗಟ್ಟಲೆ ಹೊರಿಸಿ ಹೇರಿಸಿಕೊಂಡು ಹಸ್ತಿನಾವತಿಗೆ ಸಾಗಿಸತೊಡಗಿದರು. ಶಿವಾನುಗ್ರಹದಿಂದ ಮರುತ್ತನಿಗೆ ಪ್ರಾಪ್ತವಾಗಿದ್ದ ನಿಧಿಯಲ್ಲವೆ? ಅಕ್ಷಯವಾಗಿ ಸಾಗಿಸಿದಷ್ಟು ಮತ್ತೂ ಇದ್ದು ಹೇರಳವಾದ ಧನ ಕನಕ ಸಂಚಯವಾಯಿತು. ಈ ಸಾಗಾಣಿಕೆಯ ಮೆರವಣಿಗೆ ಕಂಡು ಊರ ಜನರು ದಂಗಾಗಿ ಹೋದರು. ಕೌತುಕಪ್ರದರಾದ ಜನರು ಸಜ್ಜನ ಧರ್ಮಿಷ್ಟ ಧರ್ಮರಾಯನಿಗೆ ಒದಗಿದ ಸಂಪತ್ತನ್ನು ಕಣ್ತುಂಬಿಸುತ್ತಾ ಸಂತೋಷದಿಂದ ಒಳ್ಳೆಯದಾಯ್ತು ಎಂದು ಕೊಂಡಾಡತೊಡಗಿದರು.
ಹೀಗೆ ಸಮೃದ್ಧ ಸಂಪತ್ತಿನ ಕ್ರೋಢೀಕರಣವಾದ ಬಳಿಕ ಯಾಗ ಆರಂಭಿಸಬೇಕಾದರೆ ಪೂಜಿಸಿ ಬಿಡುವ ದಿವ್ಯಾಶ್ವ ಬೇಕಲ್ಲವೆ? ಧರ್ಮರಾಯ ತನ್ನ ತಮ್ಮನಾದ ಭೀಮಸೇನನ್ನು ಕರೆದು ಆತನಿಗೆ ಬಲವಾಗಿ ಕರ್ಣ ಪುತ್ರ ವೃಷಕೇತು, ಘಟೋತ್ಕಚನ ಪುತ್ರ ಮೇಘನಾದನನ್ನು ಜೊತೆಯಾಗಿಸಿ ಸೇನಾ ಸಮೇತನಾಗಿ ಯಜ್ಞಾಶ್ವದ ವ್ಯವಸ್ಥೆ ಮಾಡಲು ರಾಜಾ ಯವನಾಶ್ವನ ಪುರವಾದ ಭದ್ರಾವತಿಯತ್ತ ತೆರಳಲು ಸೂಚಿಸಿದನು.
ಅಣ್ಣ ಧರ್ಮಜನ ಅನುಜ್ಞೆ ಶಿರಸಾವಹಿಸಿ ಭೀಮಸೇನನು ಪಶ್ಚಿಮ ದಿಕ್ಕಿನಲ್ಲಿರುವ ಭದ್ರಾವತಿ ಪುರದತ್ತ ಸಾಗಿದನು. ವೃಷಕೇತು, ಮೇಘನಾದರು ಸೇನಾಬಲ ಪರಿವೃತರಾಗಿ ಹಿಂಬಾಲಿಸಿ ಹೊರಟರು. ಎತ್ತರದ ಗಿರಿಶಿಖರಗಳನ್ನೇರಿ ಇಳಿದು ಮತ್ತೆ ಪರ್ವತಗಳನ್ನೇರಿ ನಿಂತಾಗ ಯವನಾಶ್ವನ ಭವ್ಯ ನಗರಿ ಗೋಚರಿಸತೊಡಗಿತು. ಆ ಬೆಟ್ಟದೆತ್ತರದಿಂದ ನೋಡುವಾಗ ಭದ್ರಾವತಿ ಪ್ರತಿ ಸ್ವರ್ಗದಂತೆ ಕಂಗೊಳಿಸುತ್ತಿದೆ. ಭೀಮಸೇನ ಕರ್ಣನ ಮಗನಾದ ವೃಷಕೇತು ಮತ್ತು ಮೇಘನಾದ ಯವನಾಶ್ವನ ಭವ್ಯ ನಗರ ಭದ್ರಾವತಿಯ ಶೋಭೆಯನ್ನು, ವಿಶೇಷತೆಗಳನ್ನು ಬಹುವಿಧವಾಗಿ ವರ್ಣಿಸುತ್ತಾ ವಿವರಿಸಿ ಹೇಳತೊಡಗಿದನು. ಹೀಗೆ ಮಧ್ಯಾಹ್ನವಾದರೂ ಭೀಮಸೇನನಿಂದ ಪುರ ವಿಶ್ಲೇಷಣೆ, ವೈಶಿಷ್ಟ್ಯಗಳ ಹೊಗಳಿಕೆ ಮುಗಿಯುತ್ತಿಲ್ಲ. ನೋಡ ನೋಡುತ್ತಿದ್ದಂತೆಯೆ ಬಹುದೂರದಲ್ಲಿ ಕಂಗೊಳಿಸುತ್ತಿರುವ ಭದ್ರಾವತಿ ಪಟ್ಟಣದ ರಾಜ ಮೈದಾನಕ್ಕೆ ಸರ್ವಾಂಗ ಸರ್ವಾಲಂಕೃತ, ಸರ್ವಾಭರಣ ಭೂಷಿತವಾದ ಶ್ವೇತವರ್ಣದ ಕುದುರೆ ರಕ್ಷಣಾ ಪಡೆಯ ಮುಂದೆ ರಾಜಗಾಂಭೀರ್ಯದಿಂದ ಗತ್ತಿನ ಹೆಜ್ಜೆಗಳನ್ನಿಡುತ್ತಾ ಬರುತ್ತಿರುವುದು ಕಾಣಿಸಿತು. ಎಲ್ಲರ ಗಮನ ಅತ್ತ ಕೇಂದ್ರೀಕೃತವಾಯಿತು. ನಮಗೆ ಬೇಕಾಗಿರುವ ಅಶ್ವ ಇದುವೆ ಆಗಿರಬೇಕು. ಈಗ ಅದನ್ನು ನಮ್ಮ ವಶಕ್ಕೆ ಪಡೆಯುವ ಬಗೆ ಹೇಗೆ ಎಂಬ ವಿಚಾರ ಮಂಥನ ಆರಂಭವಾಯಿತು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರು



















