33.1 C
Udupi
Wednesday, April 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 506

ಭರತೇಶ್ ಶೆಟ್ಟಿ ಎಕ್ಕಾರು

ಕೃಷ್ಣಾಗಮನವನ್ನು ಕಂಡು ಧರ್ಮರಾಯ ಮತ್ತು ಸೋದರರೆಲ್ಲರಿಗೂ ಸಂತೋಷವಾಯಿತು. ಬಂದಂತಹ ಕೃಷ್ಣನನ್ನು ಸತ್ಕರಿಸಿದ ಬಳಿಕ ವೇದವ್ಯಾಸರು ತಿಳಿಸಿ ನಿರ್ದೇಶಿಸಿದ ಯಾಗದ ಸರ್ವ ವಿಚಾರ ವೃತ್ತಾಂತಗಳನ್ನು ವಿವರಿಸಿದನು. ವಿಷಯವೆಲ್ಲವನ್ನೂ ತಿಳಿದ ಕೃಷ್ಣನು “ಅತ್ಯುತ್ತಮ ವಿಚಾರ, ಮಹಾರಾಜನಾದವನೊಬ್ಬ ಸಾಮರ್ಥ್ಯವಂತನಾದರೆ ಮಾಡಬೇಕಾದ ಯೋಗ್ಯ ಕಾರ್ಯವಿದು. ಧರ್ಮರಾಯಾ! ನಿನ್ನ ಮನದಲ್ಲಿ ಬಂಧುಹತ್ಯಾ ದೋಷದ ಬಗ್ಗೆ ಶಂಕೆ ಇದೆ. ಅದರ ಪರಿಹಾರಕ್ಕಾಗಿ ಇದು ಯುಕ್ತ ಕಾರ್ಯ. ಯಾವುದಕ್ಕೂ ಸಂದೇಹಪಡದೆ ಅಶ್ವಮೇಧ ಯಾಗ ನಡೆಯಲಿ. ಎಲ್ಲವೂ ಶುಭಪ್ರದವಾಗಲಿ” ಎಂದು ಹರಸಿದನು.

ಶ್ರೀಕೃಷ್ಣ ಪರಮಾತ್ಮ ಬೆಂಬಲಿಸಿ ಸೂಕ್ತವೆಂದು ಹೇಳಿದಲ್ಲಿಗೆ ಪಾಂಡವರ ಹುಮ್ಮಸ್ಸು ಇಮ್ಮಡಿಯಾಯಿತು. ಎಲ್ಲರೂ ಹರ್ಷಚಿತ್ತರಾಗಿ ಜಯಕಾರ ಕೂಗಿದರು. ಸುಮುಹೂರ್ತದಲ್ಲಿ ಅಶ್ವಮೇಧ ಯಾಗಕ್ಕೆ ಮನಃ ಸಂಕಲ್ಪವನ್ನು ನೆರವೇರಿಸಲಾಯಿತು.

ಅರ್ಜುನ ಕುಮಾರ ಭಾರತರತ್ನ ಅಭಿಮನ್ಯು ಕುರುಕ್ಷೇತ್ರ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರೂ ಆತನ ಮಡದಿ ಉತ್ತರೆಯ ಗರ್ಭದಲ್ಲಿ ವಂಶೋದ್ಧಾರಕ ಬೆಳೆಯುತ್ತಿದ್ದನು. ದಿನ ಮಾಸಗಳು ಕಳೆಯುತ್ತಾ ಉತ್ತರೆಗೆ ಸೀಮಂತಾದಿ ಸತ್ಕಾರ್ಯಗಳು ವಿಜ್ರಂಭಣೆಯಿಂದ ನೆರವೇರಿದವು. ಆಕೆಯ ಪಿತ ವಿರಾಟರಾಯ, ಸೋದರ ಉತ್ತರಕುಮಾರ, ಪತಿ ಅಭಿಮನ್ಯು ಕುಮಾರ ಈ ಹೊತ್ತು ಇಲ್ಲದೆ ಹೋದರೂ ನೆನಪಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದರು. ಗರ್ಭದಲ್ಲಿ ಬೆಳೆಯುತ್ತಿದ್ದ ವಂಶದ ಕುಡಿಯನ್ನು ಬೆಳೆಸಲೋಸುಗ ತಾನು ಸ್ಥೈರ್ಯ ತಳೆದು ಪೋಷಕಳಾಗಿ ಮಾತೆಯಾಗಿ ತನ್ನ ಕರ್ತವ್ಯವನ್ನು ಚಂದ್ರವಂಶಕ್ಕಾಗಿ ನಿಭಾಯಿಸುತ್ತಿದ್ದಳು. ಹೀಗಿರಲು ಒಂದೆಡೆ ಅಶ್ವಮೇಧ ಯಾಗಕ್ಕೆ ಮುಹೂರ್ತ ನಿಗದಿಯಾಗಿರುವ ಈ ಸಮಯ ಆಕೆಯ ಗರ್ಭಾಂಬುಧಿಗೂ ನವಮಾಸ ತುಂಬಿತು. ಶುಭ ಮುಹೂರ್ತದಲ್ಲಿ ಅವಳು ಗಂಡು ಮಗುವಿಗೆ ಜನ್ಮವಿತ್ತಳು. ತನ್ನ ಜೀವನದ ಉತ್ಕೃಷ್ಟ ಸ್ಥಾನ ತಾಯಿಯಾಗಿ ಹೆಣ್ತನದ ಅದ್ಬುತ ಸುಖವನ್ನು ಅನುಭವಿಸುತ್ತಿದ್ದಾಳೆ. ಆದರೆ ಹುಟ್ಟಿರುವ ಮಗು ಅಳುತ್ತಿಲ್ಲ. ನಿಶ್ಚಲವಾಗಿದೆ. ಅಳವಂತೆಯೂ ಕಾಣಿಸುತ್ತಿಲ್ಲ. ಎಲ್ಲರೂ ಯಾಕೆ ಹೀಗಾಯಿತು? ಏನಿದು ದುರಂತ? ಚಂದ್ರವಂಶದ ಕುಡಿ ಏಕೆ ಈ ರೀತಿ ಅಲುಗದೆ ಬಿದ್ದುಕೊಂಡಿದೆ ಎಂಬ ಗೊಂದಲಕ್ಕೊಳಗಾದರು. ಅಂದು ಅಶ್ವತ್ಥಾಮನಿಂದ ಪ್ರಯೋಗಿಸಲ್ಪಟ್ಟಿದ್ದ ಬ್ರಹ್ಮಾಸ್ತ್ರ ಶ್ರೀಕೃಷ್ಣನ ದಯೆಯಿಂದ ಉಪಶಮನಗೊಂಡಿದೆ. ಅದರ ದುಷ್ಪರಿಣಾಮದಿಂದ ಮಗುವಿಗೆ ಈ ಸ್ಥಿತಿ ಒದಗಿರಬಹುದೆ? ಎಂಬಿತ್ಯಾದಿ ಪ್ರಶ್ನೆಗಳು ಗುಸುಗುಡತೊಡಗಿದವು. ಮಗುವನ್ನು ನೋಡಿದರೆ ಸುಪುಷ್ಟವಾದ ಅಂಗಸೌಷ್ಟವ, ಸಕಲ ಸುಲಕ್ಷಣ ಭರಿತವಾಗಿ ಶೋಭಿಸುತ್ತಿದೆ. ಆದರೆ ಉಸಿರಿಲ್ಲ, ಮಿಸುಗಾಡುತ್ತಿಲ್ಲ, ಸ್ಪಂದಿಸುತ್ತಿಲ್ಲ, ಅಳುತ್ತಿಲ್ಲ. ಅಂದರೆ ಮಗು ಮೃತ್ಯುವನ್ನಪ್ಪಿ ಜನಿಸಿದೆಯೆ? ಎಂದು ಎಲ್ಲರೂ ಹಾಹಾಕಾರಗೈಯುತ್ತಾ ರೋದಿಸತೊಡಗಿದರು. ಆಗ ಶ್ರೀಕೃಷ್ಣನು ಅಳುತ್ತಿದ್ದವರೆಲ್ಲರನ್ನೂ ಸಂತೈಸುತ್ತಾ “ಇಲ್ಲ, ಇಲ್ಲ ಮಗುವಿಗೆ ಏನೂ ಆಗಿಲ್ಲ. ಮಲಗಿ ನಿದ್ರಿಸುತ್ತಿರಬೇಕು. ಅಷ್ಟಕ್ಕೆ ಇಷ್ಟೆಲ್ಲಾ ರಂಪ ಮಾಡದಿರಿ” ಎಂದು ಹೇಳುತ್ತಾ ಒಳ ಬಂದನು. ಮಗುವನ್ನು ದಿಟ್ಟಿಸಿ ನೋಡುತ್ತಾ “ನಾನೇನಾದರೂ ಈ ಹಿಂದೆ ಸುಳ್ಳನ್ನು ವಿನೋದಕ್ಕಾಗಿಯಾದರೂ ಆಡದಿರುವುದು ಸತ್ಯವಾದರೆ, ಯುದ್ದದಲ್ಲಿ ಹಿಮ್ಮೆಟ್ಟದಿದ್ದುದು ಸತ್ಯವಾದರೆ, ಧರ್ಮವೂ, ಆಚಾರವುಳ್ಳ ಬ್ರಾಹ್ಮಣ್ಯವೂ ನನಗೆ ಪ್ರಿಯವಾದುದು ಸತ್ಯವಾದರೆ, ಈ ಮಗು ಬದುಕಿರುವುದೂ ಅಷ್ಟೇ ಸತ್ಯ” ಎಂದು ಹೇಳುತ್ತಾ ಶಿಶುವನ್ನು ಎತ್ತಿಕೊಂಡನು. ಆಗ ಮಗು ಎಚ್ಚೆತ್ತುಕೊಂಡಂತೆ ಕೈಕಾಲು ಬಡಿಯುತ್ತಾ ಜೋರಾಗಿ ಕೂಗತೊಡಗಿತು. “ಛೇ! ಛೇ! ಏನು ಪ್ರಮಾದವಾಯ್ತು ನಿಮ್ಮೆಲ್ಲರಿಂದ? ಇಷ್ಟು ಮುದ್ದಾದ ಮಗುವಿನ ಬಗ್ಗೆ ಏನೇನೊ ಕಲ್ಪಿಸಿಕೊಂಡಿರಿ?” ಎಂದು ಹೇಳುತ್ತಾ ಅಳುತ್ತಿದ್ದ ಮಗುವನ್ನು ವಿಸ್ಮಯಕ್ಕೊಳಗಾಗಿರುವ ತಾಯಿ ಉತ್ತರೆಯ ಬಳಿಯಲ್ಲಿ ಮಲಗಿಸಿದನು.

ಬಳಿಕ ಅಲ್ಲಿಯೆ ನಿಂತು ಈ ಮಗುವಿನ ಉತ್ಪತ್ತಿ ಕಾಲದಿಂದ ಈ ತನಕ ಪರೀಕ್ಷೆಗೊಳಪಡುತ್ತಲೆ ಹುಟ್ಟಿದೆ. ಇಂದು ಎಲ್ಲರೂ ಪರೀಕ್ಷಣೆ ಮಾಡಿದರೂ ಮಗುವಿನ ಬಗ್ಗೆ ಸತ್ಯ ತಿಳಿಯುವಲ್ಲಿ ಅರೆಕ್ಷಣದ ಗೊಂದಲವಾಯಿತು. ಈ ರೀತಿ ಪರೀಕ್ಷೆಗೊಳಗಾಗಿ ಸರ್ವರಿಂದ ಪರೀಕ್ಷಿತನಾಗಿ ಹುಟ್ಟಿದ ಈ ಮಗುವಿಗೆ ಪರೀಕ್ಷಿತ ಎಂದು ನಾಮಕರಣ ಮಾಡೋಣ ಎಂದು ಶ್ರೀಕೃಷ್ಣ ಸೂಚಿಸಿದನು.

ಪುಣ್ಯಾತ್ಮ ಮಗು ಶ್ರೀಕೃಷ್ಣನಿಂದ ತನ್ನ ಜಾತಕರ್ಮಗಳಲ್ಲೊಂದಾದ ನಾಮಕರಣದ ಸೌಭಾಗ್ಯ ಪಡೆದಿದೆ. ಹಿಂದೆ ಹದಿನೆಂಟು ದಿನಗಳ ಭಾರತ ಯುದ್ದ ಮುಗಿದರೂ ಹಠ ಬಿಡದ ಗುರುಪುತ್ರ ಅಶ್ವತ್ಥಾಮನಿಂದ ಕರಾಳ ರಾತ್ರಿಯ ರಕ್ತಪಾತದ ಕಾರ್ಯ ನಡೆದಿತ್ತು. ಅಂತಹ ಕ್ರೌರ್ಯ, ಅಧರ್ಮ ಪ್ರದರ್ಶಿಸಿದ ದ್ರೌಣಿಯನ್ನು ಅರಸುತ್ತಾ ವ್ಯಾಸಾಶ್ರಮದ ಬಳಿ ಬಂದಾಗ ಪಾಂಡವರನ್ನು ಕಂಡು ಅವರ ನಾಶಗೈವೆನೆಂದು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದನು. ಅರ್ಜುನನೂ ಕೃಷ್ಣ ನಿರ್ದೇಶನದಂತೆ ತಾನೂ ಬ್ರಹ್ಮಾಸ್ತ್ರ ಅನುಸಂಧಾನ ಮಾಡಿ ಪ್ರಯೋಗಿಸಿದ್ದನು. ಬಳಿಕ ಕೃಷ್ಣ ನಿರ್ದೇಶನದಂತೆ ಬ್ರಹ್ಮಾಸ್ತ್ರಗಳ ಪರಸ್ಪರ ಸಂಘರ್ಷದಿಂದ ಲೋಕ‌ ನಾಶವಾದೀತು ಎಂಬ‌ ವಿವೇಚನೆಯಿಂದ ಅರ್ಜುನ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಿ ಹಿಂದೆ ಸೆಳೆದಿದ್ದನು. ಆದರೆ ಅಶ್ವತ್ಥಾಮ‌ನ ಬ್ರಹ್ಮಾಸ್ತ್ರ ಪ್ರಯೋಗದ ಮನೋ ಸಂಕಲ್ಪ ಪಾಂಡುಪುತ್ರರ ವಂಶ ನಿರ್ವಂಶವಾಗಲಿ ಎಂದಾಗಿತ್ತು. ಅದಕ್ಕಾಗೊ ಬ್ರಹ್ಮಾಸ್ತ್ರಕ್ಕೆ ಉತ್ತರೆಯ ಗರ್ಭವನ್ನು ಗುರಿಯಾಗಿಸಿದ್ದನು. ಹೀಗಿರಲು ಶ್ರೀಕೃಷ್ಣನ ಲೀಲಾಮಾನುಷ ಮಹಿಮೆಯಿಂದ ಈ ಪರೀಕ್ಷಿತ ಸುರಕ್ಷಿತನಾಗಿದ್ದ. ಆ ಅರ್ಥದಲ್ಲೂ ಹರಿಯಿಂದ ರಕ್ಷಿತನಾಗಿದ್ದು ಹರಿರಕ್ಷಿತನಾದವನು ಈ ಪರೀಕ್ಷಿತ. ಅಂತೂ ಆತಂಕ ದೂರವಾಗಿ ಈ ಕ್ಷಣ ಚಂದ್ರವಂಶದ ಕುಡಿ ಕ್ಷೇಮವಾಗಿ ಕಣ್ತೆರೆದಿದೆ. ಎಲ್ಲರಿಗೂ ಶುಭವಾಗಲಿ, ಸನ್ಮಂಗಲವಾಗಲಿ, ಭವಿಷ್ಯ ಉಜ್ವಲವಾಗಲಿ ಎಂದು ನುಡಿದು ಎಲ್ಲರೂ‌ ಹರಸಿ ಆಶೀರ್ವಾದ ಮಾಡಿ ಸಂಭ್ರಮಿಸಿದರು. ಮತ್ತೆ ಹಸ್ತಿನೆಯಲ್ಲಿ ಸಂಭ್ರಮೋತ್ಸವದ ಕಳೆ ತುಂಬಿದೆ. ಜಾತಕರ್ಮಾದಿ ಪ್ರಕ್ರಿಯೆಗಳು ಸಾಗಿ ಪುತ್ರೋತ್ಸವದ ಸಂತೋಷದಲ್ಲಿ ನಗರ ಕಂಗೊಳಿಸಿತು. ಬಹುವಿಧದ ಹೇರಳ ದಾನ ಧರ್ಮಾದಿಗಳು, ಸತ್ಕಾರ ಕೂಟಗಳು, ಧರ್ಮ ಕಾರ್ಯಗಳು ನಿರಂತರ ನಡೆದವು.

ಇದೆಲ್ಲ ನಡೆದ ಬಳಿಕ ಶ್ರೀಕೃಷ್ಣನು ಧರ್ಮರಾಯನನ್ನು ಕರೆದು “ಇನ್ನು ಸಂಕಲ್ಪಿತ ಅಶ್ವಮೇಧ ಯಾಗದ ಸಿದ್ಧತೆಗಳು ಆರಂಭವಾಗಬೇಕು. ಬೇಕಾಗುವ ಧನಕನಕದ ವ್ಯವಸ್ಥೆಯೂ, ಮತ್ತು ಯಾಗಾಶ್ವವನ್ನು ತರಿಸುವ ಕಾರ್ಯಕ್ಕೂ ವ್ಯವಸ್ಥೆಯಾಗಬೇಕು. ನೀನು ಆ ಕುರಿತಾದ ಸಿದ್ಧತೆಗಳನ್ನು ನೋಡಿಕೋ. ನಾನು ಅಗತ್ಯ ಕಾರ್ಯ ನಿಮಿತ್ತವಾಗಿ ದ್ವಾರಕೆಗೆ ಹೋಗಿಬರಬೇಕು. ಮತ್ತೆ ಸಕಾಲದಲ್ಲಿ ಬಂದು ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ” ಎಂದು ಶ್ರೀಕೃಷ್ಣ ನುಡಿದು ಬಳಿಕ ಹೊರಟು ದ್ವಾರಕೆಯತ್ತ ಸಾಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page