ಭಾಗ 298
ಭರತೇಶ ಶೆಟ್ಟಿ, ಎಕ್ಕಾರ್

ದುರ್ಯೋಧನ ಕೃಷ್ಣನನ್ನುದ್ದೇಶಿಸಿ ಮಾತಿಗಾರಂಭಿಸಿದನು “ಕೃಷ್ಣಾ! ನಿನ್ನ ಏಕ ಪಕ್ಷೀಯ ವಾದ ಆಲಿಸಿದ ಸರ್ವರಿಗೂ ಅದು ಸರಿಯೆಂದು ಭಾಸವಾಗಿರಬಹುದು. ನಾನೀಗ ಕೇಳುವುದೇನೆಂದರೆ, ಪಾಂಡವ ಕೌರವ ದ್ವೇಷದಲ್ಲಿ ಕೌರವರದ್ದು ಮಾತ್ರ ತಪ್ಪಿರುವುದೆ? ಪಾಂಡವರದ್ದು ಅಥವಾ ಈ ವಂಶದ ಹಿರಿಯರ ತಪ್ಪು ಇಲ್ಲವೆ? ನೋಡು ಕೃಷ್ಣಾ, ನನ್ನ ತಂದೆ ಜೇಷ್ಠ ಪುತ್ರರು ಆದರೆ ಆರಂಭದಲ್ಲಿ ಜನ್ಮಾಂಧನೆಂಬ ಕಾರಣವಿತ್ತು ಹಿರಿಯ ಮಗನಾಗಿದ್ದರೂ ಹಸ್ತಿನೆಯ ಅಧಿಕಾರ ನಿರಾಕರಿಸಲ್ಪಟ್ಟಿತು. ಎರಡನೆಯ ಪುತ್ರನೂ ಪೂರ್ಣಾರ್ಹನಲ್ಲ, ರೋಗಿಯಾಗಿದ್ದವರು ಚಿಕ್ಕಪ್ಪ ಪಾಂಡು. ಇನ್ನು ಮೂರನೆಯವರಾದ ವಿದುರನಿಗೆ ಸಿಂಹಾಸನ ಏರುವ ಅಧಿಕಾರ ದಾಸಿ ಪುತ್ರನೆಂಬ ಕಾರಣದಿಂದ ಕೈ ತಪ್ಪಿತು. ಮಧ್ಯಮ ಅರ್ಹತೆಯ ಆಧಾರದಿಂದ ನನ್ನ ಪಿತನಿಗಿಂತ ಕಿರಿಯವರಾದ ಪಾಂಡು ಮಹಾರಾಜರಾದರು. ಅಂಧತ್ವ ನನ್ನ ತಂದೆಯ ಸಂಪಾದನೆಯೆ? ಮೊದಲಿಗೆ ನೀಡಲಾಗದ ಅಧಿಕಾರ ನಂತರ ಅನಿವಾರ್ಯವಾದಾಗ, ಆ ಜಾಗಕ್ಕೆ ಯಾರೂ ಇಲ್ಲ ಎಂದಾಗ ಹೇಗೆ ಸಮ್ಮತವಾಯಿತು? ಅಭಿಷಿಕ್ತ ದೊರೆ ಆಗದಿದ್ದರೂ ಅಧಿಕಾರ ನೀಡಿದರಲ್ಲವೇ? ಜೇಷ್ಠರಾದ ನಮ್ಮ ತಂದೆಗೆ ಮೊದಲೆ ರಾಜ್ಯಾಧಿಕಾರ ನೀಡುತ್ತಿದ್ದರೆ ಈಗ ನಮ್ಮೊಳಗೆ ಯಾವುದೆ ರೀತಿಯ ಗೊಂದಲ ಉತ್ಪತ್ತಿಯಾಗದೆ ನಾನೀಗ ಉತ್ತರಾಧಿಕಾರಿ ಆಗುತ್ತಿದ್ದೆ.
ಇನ್ನು ನಾವು ಹುಟ್ಟಿದಾಗ ಚಿಕ್ಕಪ್ಪ ಪಾಂಡು ಹಸ್ತಿನೆಯಲ್ಲಿ ಇರಲಿಲ್ಲ. ಹುಟ್ಟಿನಿಂದಲೆ ರಾಜಕುಮಾರರು ಎಂದು ಗೌರವ ಪಡೆದು, ಅದೇ ಭಾವನೆಯಲ್ಲಿ ನಾವು ಬೆಳೆಯುತ್ತಿದ್ದೆವು. ಚಿಕ್ಕಪ್ಪನ ನಿಧನದಿಂದ ಕಾಡಾಡಿಗಳಾಗಿದ್ದ ಯಾರೊ ಐದು ಮಂದಿ ನಮಗೆ ಅಧಿಕಾರದ ಸ್ಪರ್ಧಿಗಳಾಗಿ, ಇವರೂ ರಾಜಕುಮಾರರು ಎಂದು ನಮ್ಮ ಗೌರವದಲ್ಲಿ ಪಾಲು ಪಡೆದು, ಮುಂದೆ ಅಧಿಕಾರ ಪಡೆಯಲಿದ್ದಾರೆ ಎಂಬ ವಿಚಾರ ಬಂದಾಗ ಸ್ವಭಾವ ಸಹಜವಾಗಿ ಅವರ ಮೇಲೆ ನಮಗೆ ಮತ್ಸರ, ದ್ವೇಷ ಹುಟ್ಟಿಕೊಂಡಿತು. ಆ ಸಂದರ್ಭ ನಮ್ಮಲ್ಲಿ ಆಗುತ್ತಿದ್ದ ಜಗಳದಲ್ಲಿ ಭೀಮಸೇನ ನಮಗೆ ನೀಡುತ್ತಿದ್ದ ತೊಂದರೆ ಯಾಕೆ ಯಾರಿಗೂ ತಪ್ಪಾಗಿ ಕಾಣಲಿಲ್ಲ? ನಮ್ಮನ್ನು ನೀರಲ್ಲಿ ಮುಳುಗಿಸಿ ಎಷ್ಟು ಬಾರಿ ಉಸಿರುಗಟ್ಟಿಸಿದ್ದ? ಹೇಗೆ ಉಳಿದು ಬದುಕಿದೆವೋ ನಮ್ಮ ಅದೃಷ್ಟ. ಅದೆಷ್ಟೋ ಸಲ ಮರದ ತುದಿಯಿಂದ ಬೀಳಿಸಿದ್ದ, ಆಗಲೂ ಹೇಗೋ ಮಾರಣಾಂತಿಕವಾಗಿ ನಮಗೆ ಗಾಯಗಳಾದರೂ ಮರಣ ಬಾರಲಿಲ್ಲ. ಮತ್ತೆ ನಮ್ಮ ಬೆನ್ನಟ್ಟಿ ಆ ಭೀಮಸೇನ ಹೊಡೆದು ಗುದ್ದಿ ಗುದ್ದಿ ಹಣ್ಣುಗಾಯಿ – ನೀರುಗಾಯಿ ಮಾಡಿದ್ದೆಷ್ಟು ಬಾರಿ – ಆಗಲೂ ಪೆಟ್ಟು ತಿಂದು ಯಾರದ್ದೋ ಪುಣ್ಯ ನಮ್ಮನ್ನು ಕಾಯುತ್ತಿತ್ತು – ನಾವು ಸಾಯಲಿಲ್ಲ ಬದುಕಿದೆವು. ಇವೆಲ್ಲಾ ಕೊಲೆಯತ್ನಗಳಾಗಿಕೊಲೆಯತ್ನಗಳಾಗಿ ನಿಮಗೇಕೆ ಕಾಣಿಸುತ್ತಿಲ್ಲ? ಅಪರಾಧಗಳಲ್ಲವೇ ಇವು? ಪ್ರತಿಯಾಗಿ ನಮಗೆ ಬಾಧೆ ನೀಡುತ್ತಿದ್ದ, ಆ ಕಾಲದಲ್ಲಿ ಸೋಲಿಸಲಾಗದೆ ಉಳಿದು ಹಿಂಸೆ ನೀಡುತ್ತಿದ್ದ ಭೀಮಸೇನನಿಗೆ ನಾವು ವಿಷವಿತ್ತರೆ ಅದು ಕೊಲೆ ಯತ್ನವೆಂದು ಪ್ರಚಾರ ಪಡೆಯಿತು. ಇದು ಯಾವ ನ್ಯಾಯ? ನಾವು ಭೀಮಸೇನನಿಂದ ಸಾವಿನ ಸನಿಹದವರೆಗೆ ಸಂದು ಬದುಕುಳಿದೆವು. ಅವನೂ ಹಾಗೆಯೇಕೊಲೆಯತ್ನಗಳಾಗಿಕೊಲೆಯತ್ನಗಳಾಗೆ ನಮ್ಮ ಯತ್ನದಲ್ಲಿ ಸಾಯದೆ ಬದುಕಿ ಉಳಿದವನು. ಅಂದರೆ ವಿಧಿ ಇತ್ತಂಡಗಳಿಗೂ ಸಾವು ಬಾರದಂತೆ ಸಮಾನವಾಗಿ ಕಾಪಾಡಿದೆ. ಆದರೆ ನಾನು ಮಾತ್ರ ಅಪರಾಧಿ ಹೇಗಾಗುತ್ತೇನೆ? ಇನ್ನು ನಾವು ಬೆಳೆಯುತ್ತಾ ನಮ್ಮೊಂದಿಗೆ ಬೆಳೆದ ದ್ವೇಷವೂ ಹಿರಿದಾಗಿ ಹೆಮ್ಮರವಾದ ಕಾಲ, ನಮ್ಮ ರಕ್ಷಣೆಗಾಗಿ ಈ ಪಾಂಡವರನ್ನು ಕೊಲ್ಲುವ ಪ್ರಯತ್ನವಾಗಿ ಅರಗಿನ ಅರಮನೆಯ ಉಪಾಯದಲ್ಲಿ ಮುಗಿಸುವ ಯೋಜನೆ ಮಾಡಿದೆವು. ಆದರೆ ಅಲ್ಲಿ ಅವರೇನು ಮಾಡಿದರು? ಯಾರೋ ಅಮಾಯಕ ಬೇಡತಿ ಮತ್ತವಳ ಐವರು ಮಕ್ಕಳನ್ನು ಕೂಡಿ ಹಾಕಿ ಅರಮನೆಗೆ ಅಗ್ನಿ ಸ್ಪರ್ಶ ಮಾಡಿ ತಪ್ಪಿಸಿಕೊಂಡು ಹೊರ ಹೋಗಿ ಬದುಕಿದರು. ನಮ್ಮ ಉಳಿವಿಗಾಗಿ ಇವರ ಅಂತ್ಯ ಬಯಸಿದ್ದು ನಿಜ. ಆದರೆ ಇವರೂ ಅದನ್ನೇ ಮಾಡಿದ್ದಲ್ಲವೆ? ತಮ್ಮ ಉಳಿವಿಗಾಗಿ ಅಮಾಯಕ ತಾಯಿ ಮಕ್ಕಳ ಸಜೀವ ದಹನ ಮಾಡಿ ಬದುಕಿಕೊಂಡರಲ್ಲ ಅದು ನ್ಯಾಯವೇ? ಹೀಗೆಲ್ಲಾ ಸತ್ಯ ವಿಚಾರವಿದ್ದರೂ, ಅವರೇ ಅರಮನೆ ಸುಟ್ಟರೂ, ನಾವು ಕೊಲೆ ಯತ್ನ ಮಾಡಿದೆವು ಎಂದು ಅಪಪ್ರಚಾರವಾಯಿತಲ್ಲ ಅದು ಸರಿಯೆ? ಒಂದು ಸತ್ಯ ಹೇಳುತ್ತೇನೆ ಕೇಳು ಕೃಷ್ಣಾ! ನನ್ನ ಅಧಿಕಾರದ ಆಸೆಯ ಪ್ರಯತ್ನ ಬಹಿರಂಗವಾಗಿತ್ತು ಎಲ್ಲರಿಗೂ ಕಾಣುತ್ತಿತ್ತು. ಕಾರಣ ನಾನು ಪ್ರಾಮಾಣಿಕವಾಗಿ ಎದುರಿನಲ್ಲೆ ಪ್ರಯತ್ನಿಸುತ್ತಿದ್ದೆ. ಪಾಂಡವರಿಗೂ ಅಧಿಕಾರದ ಆಸೆ ಇರಲಿಲ್ಲವೆ? ಅವರು ಜಾಣರು, ತಾವು ಸಜ್ಜನರೆಂಬ ಮುಖವಾಡದೊಳಗೆ ಅದರ ಪೂರೈಕೆಗಾಗಿ ಪ್ರಯತ್ನ ಮಾಡುತ್ತಲೆ ಬಂದಿದ್ದಾರೆ. ಈಗ ನೀನೇ ಘಂಟಾಘೋಷವಾಗಿ ಹೇಳಿದೆಯಲ್ಲಾ ಅರ್ಜುನನಲ್ಲಿ ಸಕಲ ಶಸ್ತ್ರ ಸಂಚಯವಾಗಿದೆ ಜಗತ್ತನ್ನೇ ಗೆಲ್ಲಬಲ್ಲ ವೀರನು ಅವನೆಂದು ನೀನು ಹೇಳಿರುವೆ. ಈ ಮಂತ್ರಾಸ್ತ್ರ ಸಂಪಾದನೆಯ ಉದ್ದೇಶವೇನು? ಹಗೆಗಳಾದ ನಮ್ಮ ವಧೆಯಲ್ಲವೇ? ಸಾತ್ವಿಕರಾದ ಪಾಂಡವರ ಅಂತರ್ಯವೂ ಪ್ರಕಟವಾಗಿಲ್ಲವೇ? ದ್ರೌಪದಿಯ ಮಾನಹರಣ ಸಮಯ ನಮ್ಮನ್ನೆಲ್ಲಾ ಕೊಂದು ಕೆಡಹ ಬೇಕೆಂದಿರುವ ಅವರ ಅಂತರಂಗದ ಭಾವ ಪ್ರತಿಜ್ಞಾ ರೂಪದಲ್ಲಿ ಪ್ರಕಟವಾಗಲಿಲ್ಲವೆ?
ಇನ್ನು ದ್ರೌಪದಿಯ ವಸ್ತ್ರಾಪಹಾರ ಯತ್ನದ ಬಗ್ಗೆ ಪ್ರಶ್ನಿಸುತ್ತಿರುವೆ. ನಾನೂ ಒಪ್ಪುತ್ತೇನೆ ಹೆಣ್ಣಾದವಳು ಮಾನನಿಧಿ, ಸಾರ್ವಕಾಲಿಕ ಪೂಜನೀಯಳು. ಸ್ತ್ರೀ ಯಾರೇ ಇರಲಿ ದಾಸಿಯಾಗಿರಲಿ – ರಾಣಿಯಾಗಿರಲಿ ಮಾನಭಂಗ ಮಾಡುವುದು ಅಪರಾಧ. ಹಾಗಾಗಬಾರದಿತ್ತು. ಏನೋ ದ್ವೇಷ ಬಲವಾಗಿ ಹೊತ್ತಿ ಉರಿದಾಗ ಹಾಗಾಗಿ ಹೋಯಿತು. ಆದರೆ, ರಾಜಸೂಯ ಯಾಗ ಸಮಯ, ಅತಿಥಿಗಳಾಗಿ ನಮ್ಮವರ ಸಂಭ್ರಮದಲ್ಲಿ ಪಾಲ್ಗೊಳ್ಳಲೆಂದು ಪಾಲ್ಗೊಳ್ಳಲೆಂದು ನಾವು ಹೋಗಿದ್ದೆವು. ಅಲ್ಲಿ ಅವರ ವೈಭವ ಪ್ರದರ್ಶನದ ನೆಪದಲ್ಲಿ ಮಯ ನಿರ್ಮಿತ ಮಂಟಪ ತೋರಿಸಲು ಕರೆದೊಯ್ದರು. ಈ ದ್ರೌಪದಿಗೆ ವಂದನೀಯನಾದವನಯ ನಾನು. ಅವಳ ಮುಂಭಾಗದಲ್ಲಿ ಕಣ್ತಪ್ಪಿ ಎಡವಿ ಬಿದ್ದಾಗ ಏನು ಮಾಡಿದಳು? ಹೆಂಗಳೆಯರ ಸಮ್ಮುಖದಲ್ಲಿ ಮಾನ ಹರಣಗೈದು ಕುತ್ಸಿತ ಬುದ್ದಿ ತೋರಿ, ಅಪಮಾನಿಸಿ ನಕ್ಕಳು – ಅದು ಅಪರಾಧವಲ್ಲವೇ? ಆ ಅವಮಾನದಿಂದ ಪ್ರಜ್ವಲಿಸಿದ ಪ್ರತಿಕಾರದ ಸೇಡು ನನ್ನ ಕೈಯಲ್ಲಿ ಈ ಕೃತ್ಯವೆಸಗುವಂತೆ ಮಾಡಿಸಿತು. ಘೋಷಯಾತ್ರೆಯೂ, ಪಾಂಡವರು ಅವರ ಶ್ರೇಷ್ಟತೆಯ ದರ್ಶನ ಮಾಡಿಸಿದ್ದಕ್ಕೆ ಪ್ರತಿಯಾಗಿ ನಮ್ಮ ವೈಭವದ ಪ್ರದರ್ಶನ ಮಾಡುವ ಉದ್ದೇಶದಿಂದಲೆ ಮಾಡಿದ್ದೆವು.
ಕೃಷ್ಣಾ! ಈಗ ಹೇಳು ನಾನು ಮಾತ್ರ ಅಪರಾಧಿಯೆ? ಏನೇ ಇರಲಿ, ನನ್ನ ನಿರ್ಧಾರ ಬದಲಾಗದು. ಈಗ ನಾನು ಹೇಳುವ ತೀರ್ಮಾನ ಕೇಳು…..
ಮುಂದುವರಿಯುವುದು..








