ಭಾಗ – 483
ಭರತೇಶ ಶೆಟ್ಟಿ, ಎಕ್ಕಾರು

ಆಗ ಆ ಕಾಡ ಕಿರಾತನು ಋಷಿವರ್ಯನನ್ನು ಕಂಡು ವಂದಿಸಿ “ಓ ಮಹಾತ್ಮರೇ! ನೀವು ಉತ್ತಮರು ಮೇಲಾಗಿ ತಪೋನಿಧಿಗಳು. ನಾನು ಅಂತ್ಯಜನು, ನನ್ನ ಮನೆಯೊಳಗೆ ಬಂದು ಮೃಗ ಮಾಂಸವನ್ನು, ಅದೂ ಕದ್ದು ತಿಂದಿದ್ದೀರಿ. ಕೇಳುತ್ತಿದ್ದರೆ ಅಥವಾ ಹಸಿವಾಗಿದೆ ಎಂದು ಹೇಳುತ್ತಿದ್ದರೆ ಕಾಡಿನೊಳಗೆ ಹುಡುಕಾಡಿ ಗೆಡ್ಡೆಯನ್ನೋ ಇಲ್ಲಾ ಹೆಮ್ಮರದಲ್ಲೆಲ್ಲಾದರು ಉಳಿದ ಫಲವನ್ನೋ ತಂದು ನೀಡುವ ಪ್ರಯತ್ನ ಖಂಡಿತಾ ಮಾಡುತ್ತಿದ್ದೆ. ಏನು ಮಾಡಿಬಿಟ್ಟಿರಿ? ನಾಳೆಯ ಭವಿಷ್ಯತ್ತಿನಲ್ಲಿ ನಿಮ್ಮ ಉನ್ನತ ಕುಲದ ಪಾಲನೆಗೆ ತೊಡಕಾಗದೆ?” ಎಂದು ದೀನನಾಗಿ ಪ್ರಶ್ನಿಸಿದನು. ಆಗ ಪ್ರಾಜ್ಞರೂ ಜ್ಞಾನಿಯೂ ಆದ ವಿಶ್ವಾಮಿತ್ರರು “ಅಯ್ಯಾ ಈಗ ನನಗಾಗುತ್ತಿದ್ದ ಹಸಿವನ್ನು ನಿವಾರಿಸದೆ ಹೋಗಿದ್ದರೆ ಜೀವವೇ ಹೋಗಿ ಬಿಡುತ್ತಿತ್ತು. ಹಾಗಾಗಿ ಆಪದ್ಧರ್ಮ ಪಾಲಿಸಿ ಶರೀರಕ್ಕೆ ತೀರಾ ಅಗತ್ಯವಾಗಿದ್ದ ಆಹಾರವನ್ನು ಸ್ವೀಕರಿಸಿದೆ. ಈ ಕಾಲಕ್ಕೆ ಅದು ಪ್ರಮುಖವಾದ ಕಾರಣ ನನ್ನ ಜೀವ ಉಳಿಸಿಕೊಳ್ಳಲು ಹಾಗೆ ಮಾಡಿದೆ. ಮುಂದೆ ಒಳ್ಳೆಯ ಕಾಲ ಬಂದಾಗ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದು” ಎಂದರು.
ಅಜ್ಜ ಭೀಷ್ಮಾಚಾರ್ಯರು ಈ ಕಥೆ ಹೇಳಿ ಧರ್ಮರಾಯನಲ್ಲಿ “ವತ್ಸಾ, ಸರಿಯಾಗಿ ಕೇಳು, ತಾನು ಬದುಕಿದರೆ ಸಮಾಜಕ್ಕೆ ಉಪಕೃತಿ ಆಗುವುದಾದರೆ ಆಪದ್ಧರ್ಮವನ್ನು ಪಾಲಿಸಿಯಾದರೂ ಬದುಕಿಕೊಳ್ಳಬೇಕು. ಹಾಗೆಯೆ ಇತರರನ್ನು ಬದುಕಿಸುವಲ್ಲೂ ತನ್ನದ್ದಾದ ಯಾವ ಆಚಾರವನ್ನೂ ಯೋಚಿಸದೆ ಜೀವವೊಂದನ್ನು ಉಳಿಸುವಲ್ಲಿ ತ್ಯಾಗಪೂರ್ಣನಾಗಿ ಮುಂದುವರಿಯಬೇಕು. ಇಂತಹ ಸಂದರ್ಭ ಸಮಯ ಅತಿ ನಿಕೃಷ್ಟವಾಗಿ ಬದಲಾದ ಕಾರಣ, ಅನ್ಯ ಮಾರ್ಗಗಳು ಇಲ್ಲದೆ ಹೋದ ಕಾಲದಲ್ಲಿ, ಅದರಿಂದ ಪಾರಾಗಲು ಉಳಿದಿರುವ ದಾರಿಯನ್ನು ಅನುಸರಿಸಿ ಮಾಡುವ ಕರ್ಮ ಕನಿಷ್ಟವಾಗದು. ಅಂತಹ ಸಮಯ ಶತ್ರುವೆಂದು ಸಹ ಭೇದ ಮಾಡದೆ ಹೊಟ್ಟೆಗಿಲ್ಲದೆ ಹಸಿವೆಯಿಂದ ಸಾಯುವ ಕಷ್ಟಕ್ಕೆ ಸಿಲುಕಿದ ವೈರಿಯನ್ನಾದರೂ ಬದುಕಿಸುವಲ್ಲಿ ಕಾರ್ಯೋನ್ಮುಖನಾಗುವುದು ರಾಜಧರ್ಮ.”
ಇದಕ್ಕೆ ಪೂರಕವಾದ ಒಂದು ಕಥೆಯನ್ನು ಹೇಳುತ್ತೇನೆ ಕೇಳು ಮಗನೇ. ಹಿಂದೊಮ್ಮೆ ಬೇಡನೊಬ್ಬನು ಗೊಂಡಾರಣ್ಯದಲ್ಲೆಲ್ಲಾ ಅಲೆದಲೆದು ಬಳಲಿದರೂ ಅವನಿಗೆ ಆ ದಿನ ಯಾವ ಬೇಟೆಯೂ ಸಿಗಲಿಲ್ಲ. ಆದರೂ ಹಠ ಬಿಡದೆ ತನ್ನ ಮಡದಿ ಮಕ್ಕಳು ಹಸಿದಿದ್ದಾರೆ ಎಂದು ಸ್ಮರಿಸಿ, ಸ್ವತಃ ತಾನು ಹಸಿವೆಯಿಂದ ಬಳಲಿ ಬಸವಳಿದಿದ್ದರೂ ಬೇಟೆಯನ್ನರಸುತ್ತಾ ಸುತ್ತಾಡುತ್ತಿದ್ದನು. ಆದರೆ ಹೊತ್ತು ಪಡುವಣ ದಿಕ್ಕಿನತ್ತ ಇಳಿಯುತ್ತಾ ಬಂದು ಅಸ್ತಮಾನವೂ ಆಯಿತು. ಅವನಿಗೆ ಏನೂ ಸಿಗಲಿಲ್ಲ. ಕತ್ತಲೆ ಎಲ್ಲೆಡೆ ಆವರಿಸಿತು. ಮುಂದೆ ಹೋಗಲು ಕಾಣಿಸುತ್ತಿಲ್ಲ. ಅಷ್ಟರಲ್ಲಿ ಆತನು ನಿಂತಿದ್ದ ಸ್ಥಳದಲ್ಲಿ ಹೆಮ್ಮರವಿದ್ದು, ಅದರಲ್ಲಿ ಪಾರಿವಾಳಗಳು ಕುಳಿತಿದ್ದವು. ಬೇಟೆಗಾರನು ಬಂದುದನ್ನು ಕಂಡು ಅವುಗಳು ಹಾರಿ ಹೋಗುವ ಸಿದ್ಧತೆಯಲ್ಲಿದ್ದವು. ಕೂಡಲೆ ಅರೆಕ್ಷಣವೂ ವಿಳಂಬಿಸದೆ ಬೇಟೆಗಾರ ಬಲೆಯನ್ನು ಎತ್ತಿ ಬೀಸಿ ಎಸೆದು ಕೆಲವು ಪಾರಿವಾಳಗಳನ್ನು ಹಿಡಿದು ಬಿಟ್ಟನು. ಹಿಡಿದ ಹಕ್ಕಿಗಳನ್ನು ತನ್ನ ಚೀಲದಲ್ಲಿ ತುಂಬಿಸಿಕೊಂಡನು. ಪಾರಿವಾಳಗಳನ್ನು ಕಂಡ ಕ್ಷಣ ದಣಿದಿದ್ದ ಬೇಡ ಉಲ್ಲಾಸಗೊಂಡು ಚೈತನ್ಯ ಪಡೆದಿದ್ದನಾದರೂ, ಈಗ ಮತ್ತೆ ಆಯಾಸ ಉಕ್ಕೇರಿ ಬಂದು ಆತನಿಗೆ ನಡೆಯಲಾಗಲಿಲ್ಲ. ತುಸು ದೂರ ಕೆಲ ಹೆಜ್ಜೆ ಸಾಗಿ ಒಂದು ವಿಶಾಲ ಬಂಡೆಯ ಬಳಿ ಕುಳಿತು, ಅಲ್ಲಿಯೆ ಒರಗಿ ಮಲಗಿದನು. ರಾತ್ರಿಯ ಹೊತ್ತು ವಿಪರೀತ ಚಳಿಯೂ ಇದ್ದ ಕಾರಣ , ಹೊಟ್ಟೆಯೂ ಖಾಲಿಯಿದ್ದು, ದಿನವಿಡಿ ಬೇಟೆ ಅರಸುತ್ತಾ ಓಡಾಡಿದ ಕಾರಣ ಶರೀರದಲ್ಲಿ ಬಲವೂ ಕುಂದಿ ಹೋಗಿತ್ತು. ಆತ ಮಲಗಿದ ಬಂಡೆಯ ಬಳಿಯಲ್ಲೊಂದು ಮರವಿತ್ತು. ಆ ಮರದ ಮೇಲೆ ಒಂದು ಪಾರಿವಾಳದ ಗೂಡಿನಲ್ಲಿ ಎಳೆ ಮರಿಗಳೂ, ಅವುಗಳ ತಂದೆಯೂ ಸೇರಿದ ಚಿಕ್ಕ ಚೊಕ್ಕ ಸಂಸಾರವಿತ್ತು. ಮರಿಗಳಿಗೆ ರೆಕ್ಕೆ ಬಲಿತಿರದ ಕಾರಣ ಗಂಡು ಹಕ್ಕಿ ಗೂಡಲ್ಲಿದ್ದರೆ ಹೆಣ್ಣು ಹಕ್ಕಿ ಆಹಾರ ಅರಸಿ ತರಲು ಹೊರಹೋಗುತ್ತಿತ್ತು. ಅಮ್ಮ ಹಕ್ಕಿ ಬಂದಾಗ ಅಪ್ಪ ಹಕ್ಕಿ ಹೊರ ಹೋಗುತ್ತಿತ್ತು. ಆದರೆ ಈಗ ಅಪ್ಪ ಪಾರಿವಾಳ ತಾನು ತಂದ ಆಹಾರ ಮರಿಗಳಿಗೆ ತಿನ್ನಿಸಿ ಗೂಡಿನಲ್ಲಿ ಮರಿಗಳ ಜೊತೆ ಅಮ್ಮ ಪಾರಿವಾಳಕ್ಕಾಗಿ ಕಾಯುತ್ತಿದ್ದವು. ತಡ ರಾತ್ರಿಯಾದರು ಮರಳಿ ಬಾರದೆ ಇದ್ದ ಕಾರಣ ಚಿಂತೆಗೊಳಗಾಗಿದ್ದವು. ಆದರೆ ಕಾಕತಾಳೀಯ ಎಂಬಂತೆ ಅಮ್ಮ ಪಾರಿವಾಳ ಅಲ್ಲಿಯೆ ಇದ್ದರೂ ಗೂಡು ಸೇರುವಂತಿರಲಿಲ್ಲ. ಕಾರಣ ಬೇಡ ಬೀಸಿದ ಬಲೆಯೊಳಗೆ ಸಿಲುಕಿ, ತನ್ನ ಬಳಗದ ಕೆಲವು ಪಾರಿವಾಳಗಳ ಜೊತೆ ಅದೂ ಆತನ ಚೀಲದೊಳಗೆ ಸೇರಿತ್ತು.
✍🏻


































