ಭಾಗ 290
ಭರತೇಶ್ ಶೆಟ್ಟಿ, ಎಕ್ಕಾರ್

ದುರ್ಯೋಧನನ ಅರಮನೆ ಎಂದಿಗಿಂತಲೂ ಇಂದು ವೈಭವೋಪೇತವಾಗಿದೆ. ಏನೇನೆಲ್ಲ ಸೊಬಗು ಸಾಧ್ಯವೋ ಅದೆಲ್ಲಾ ಇಂದು ಅಲ್ಲಿದೆ. ಉತ್ತಮ ಆಸನಗಳು, ಅಲಂಕಾರಗಳು, ವಿವಿಧ ಶೃಂಗಾರದ ದೀಪಗಳು, ಅತ್ಯುತ್ತಮ ವಸ್ತ್ರ ವಿನ್ಯಾಸ ಹೀಗೆ ಯಾವುದೆಲ್ಲಾ ನೋಡಿ ಕೇಳಿ ತಿಳಿದಿದೆಯೋ ಅದನ್ನೆಲ್ಲಾ ತನ್ನ ಮನೆಯಲ್ಲಿ ಕೌರವ ಸಜ್ಜುಗೊಳಿಸಿದ್ದಾನೆ. ಇಂದ್ರನ ಅಮರಾವತಿಯಂತೆ ವಿವಿಧ ವಿನೋದಾವಳಿಗಳು, ಗಾಯನ, ವಾದನ, ನರ್ತನ ಎಲ್ಲವೂ ಸೇರಿ ಹಸ್ತಿನೆ ಸುಧರ್ಮ ಸಭೆಯಂತೆ ಭಾಸವಾಗುತ್ತಿದೆ. ಆ ರೀತಿ ವ್ಯವಸ್ಥೆಯಾಗಿದೆ ಹಸ್ತಿನಾವತಿಯ ದುರ್ಯೋಧನನ ಆಸ್ಥಾನ. ಒಳ ಹೊಕ್ಕರೆ ಬೆಂಬಲಿಗರಾಗಿ ಸೇನಾಸಹಿತ ಬಂದು ಸೇರಿರುವ ರಾಜ ಮಹಾರಾಜರು ಉಪಸ್ಥಿತರಿದ್ದಾರೆ. ಮಧ್ಯದಲ್ಲಿ ಉತ್ಕೃಷ್ಟವಾದ ಆಸನದಲ್ಲಿ ದುರ್ಯೋಧನ ವಿರಾಜಮಾನನಾಗಿದ್ದಾನೆ. ಕೃಷ್ಣನನ್ನು ಕಂಡೊಡನೆ ಅವನ ಮಂತ್ರಿಗಳು ಎದ್ದು ಬಂದು ಸತ್ಕರಿಸಿ ಸ್ವಾಗತಿಸಿದರು. ಬಂಗಾರದ ಆಸನಕ್ಕೆ ಉತ್ತಮ ಮೆತ್ತೆಗಳನ್ನಿತ್ತು ಕೃಷ್ಣನಿಗೆ ಪೀಠವಾಗಿಸಿದರು. ಆರಂಭದಲ್ಲಿ ಕುಶಲೋಪರಿ ಪ್ರಶ್ನೋತ್ತರಗಳು ಪರಸ್ಪರ ಕೇಳಿ ಹೇಳಲ್ಪಟ್ಟವು. ನಂತರ ಊಟದ ಸಮಯವಾದ್ದರಿಂದ ದುರ್ಯೋಧನ “ಕೃಷ್ಣಾ! ನೀನು ನಮಗೆ ಆತ್ಮೀಯ ಬಂಧುವಾಗಿರುವೆ. ಊಟದ ವ್ಯವಸ್ಥೆ ಸಿದ್ಧವಾಗಿದೆ. ನಾವೆಲ್ಲರೂ ರಾಜೋಚಿತವಾದ ಭೋಜನಕೂಟಕ್ಕೆ ಹೋಗೋಣ” ಎಂದನು. ಆಗ ಕೃಷ್ಣ “ದುರ್ಯೋಧನನಲ್ಲಿ ನನಗೆ ಈಗ ಇಲ್ಲಿ ಊಟ ಬೇಡ” ಎಂದನು. ಕಳವಳಕ್ಕೊಳಗಾದ ದುರ್ಯೋಧನ “ಏನಿದು ? ನಿನ್ನ ಆಗಮನದ ಸುದ್ದಿ ತಿಳಿದು ಈ ಭೋಜನ ಕೂಟದ ವ್ಯವಸ್ಥೆ ಮಾಡಲಾಗಿದೆ. ನೀನು ನೋಡಿದರೆ ಈಗ ಬೇಡವೆನ್ನುತ್ತಿರುವೆ? ಮತ್ತೆ ಯಾವಾಗ ಬೇಕು? ಮಾತ್ರವಲ್ಲ ದಾರಿಯುದ್ದಕ್ಕೂ ನಿನಗಾಗಿ ಏನೇನೋ ಉತ್ತಮೋತ್ತಮ ವ್ಯವಸ್ಥೆಗಳನ್ನು ಮಾಡಿಸಿದ್ದೆ. ಕೇಳಿ ತಿಳಿದಂತೆ ನೀನು ಅವ್ಯಾವುದನ್ನೂ ಉಪಯೋಗಿಸಲೂ ಇಲ್ಲ – ಸ್ವೀಕರಿಸಲೂ ಇಲ್ಲ. ಯಾಕೆ ಈ ಭೇದ ಭಾವ? ಸಂಬಂಧದಲ್ಲೂ ನೀನು ಭಾವ. ಆದರೂ ನಿನಗೆ ಬಂಧು ಎಂಬ ಭಾವವೇ ಇಲ್ಲವಾಗಿದೆ. ನಿನ್ನ ಮೇಲೆ ನಮಗೆ ಹಗೆಯಂತೂ ಇಲ್ಲ. ಹಾಗಿರುವಾಗ ಈ ತಿರಸ್ಕಾರ ಏಕೆ?” ಎಂದು ಪ್ರಶ್ನಿಸಿದನು.
ಕೃಷ್ಣ ಮುಗುಳ್ನಗುತ್ತಾ, “ಮೊದಲಾಗಿ ಆಹಾರ ಸ್ವೀಕರಿಸಬೇಕಾದರೆ ಹಸಿವಾಗಿರಬೇಕು. ಈ ವರೆಗೆ ನನಗೆ ಹಸಿವೆ ಆಗಿಲ್ಲ. ಶಾಸ್ತ್ರದಂತೆ ಹಸಿವಾಗದೆ ಉಣ್ಣಬಾರದು. ಹಾಗೂ ಅನಿವಾರ್ಯತೆಗೆ ಉಣ್ಣ ಬೇಕಾದರೆ ತೀರ ಪ್ರೀತಿಗಾಗಿ, ಇಲ್ಲವಾದರೆ ಆಪತ್ಕಾಲದಲ್ಲಿ ಸಿಲುಕಿದ ಕಾರಣದಿಂದ, ಅಥವಾ ಭಯದಿಂದ ಉಣ್ಣಬೇಕು. ನಾನು ಕಂಡಂತೆ ನೀನು ಬಾಯಿಯಲ್ಲಿ ಮಾತ್ರ ಬಂಧುವೆಂದು ಹೇಳುವೆ ಹೊರತು ಮನದಲ್ಲಿ ನಿನಗೆ ಅಂತಹ ಪ್ರೀತ ಭಾವನೆ ಇಲ್ಲ. ಹಾಗಾಗಿ ಪ್ರೀತಿಗಾಗಿ ಉಣ್ಣಬೇಕಾಗಿಲ್ಲ. ಇನ್ನು ನನಗೆ ಆಪತ್ಕಾಲ ಒದಗಿಲ್ಲ. ಭಯವಂತೂ ನನಗಾಗುವುದೇ ಇಲ್ಲ. ಇದೆಲ್ಲವನ್ನೂ ಮೀರಿ ಶಿಷ್ಟಾಚಾರಕ್ಕಾಗಿ ಉಣ್ಣಲೂ ಆಗದು. ಕಾರಣ ನೀನು ಶಿಷ್ಟಾಚಾರ ಪಾಲಿಸುವವನಲ್ಲ. ಇನ್ನೂ ನಿನಗೆ ಸ್ಪಷ್ಟವಾಗಿ ಹೇಳುವುದಾದರೆ ಕರ್ತವ್ಯ ಪ್ರಜ್ಞೆಯಿಂದಲೂ ನನಗೆ ಉಣ್ಣುವಲ್ಲಿ ತೊಡಕಿದೆ. ಪಾಂಡವರ ದೌತ್ಯ ಕಾರ್ಯಕ್ಕಾಗಿ ರಾಜ ನಿಯೋಜಿತನಾಗಿ ಬಂದಿರುವ ದೂತ ನಾನು. ಧರ್ಮರಾಯನ ಮುಖವಾಣಿ ಆಗಿ ಬಂದಿರುವ ನನಗೆ ಬಂದ ಕಾರ್ಯ ಸಫಲವಾಗುವವರೆಗೆ ಉಣ್ಣಲಾಗದು. ನಿನಗೆ ಪಾಂಡವರು ಹಗೆಗಳಾಗಿದ್ದಾರೆ. ನಿಮ್ಮ ನಡುವೆ ಯುದ್ದದ ಕಾರ್ಮೋಡ ಕವಿದಿರುವ ಈ ಹೊತ್ತು ಆತನ ಪಕ್ಷದಿಂದ ರಾಯಭಾರಿಯಾಗಿ ಬಂದಿರುವ ನನಗೆ ನಿನ್ನ ಆಸ್ಥಾನದಲ್ಲಿ ವೈರಿ ಪಾಳಯದಿಂದ ಬಂದ ಕಾರಣ ಅವರಿಗಿರುವ ಆ ಸ್ಥಾನವೇ ಕಲ್ಪಿತವಾಗುತ್ತದೆ. ರಾಜನೀತಿಯಂತೆ ನಮ್ಮ ಮಿತ್ರರ ಮಿತ್ರರು ನಮಗೂ ಮಿತ್ರರು, ಮತ್ತು ಶತ್ರುವಿನ ಶತ್ರುಗಳು ಮಿತ್ರರಾಗುತ್ತಾರೆ. ಮಾತ್ರವಲ್ಲ ಮಿತ್ರರ ಶತ್ರುಗಳು ನಮಗೆ ಶತ್ರುಗಳಾಗುತ್ತಾರೆ. ಈ ಸೂತ್ರದ ನೆಲೆಯಲ್ಲಿ ಪಾಂಡವರ ಮಿತ್ರನಾಗಿರುವ ನನಗೆ ಅವರ ಶತ್ರುವಾಗಿರುವ ನೀನು ಸದ್ಯ ಶತ್ರುವೇ ಆಗುವೆ. ಆದುದರಿಂದ ಶತ್ರುವಿನ ಮನೆಯ ಅನ್ನ ದುಷ್ಟಾನ್ನವಾಗುವ ಕಾರಣ ಪರಿಗ್ರಾಹ್ಯವಾಗದು. ಶತ್ರುಗಳ ಮತ್ತು ಅವರ ಜನರ- ಮನೆಯಲ್ಲಿ ಆಹಾರ, ಪಾನೀಯ ಸ್ವೀಕರಿಸುವುದು ಮತ್ತು ನೀಡುವುದು ಎರಡೂ ರಾಜನೀತಿಯಂತೆ ವರ್ಜ್ಯ ಎಂಬ ಸತ್ಯ ನಿನಗೂ ತಿಳಿದಿದೆ. ಹೇಗಾದರೂ ಮಾಡಿ ಕೃಷ್ಣನನ್ನು ಒಮ್ಮೆ ಊಟ ಮಾಡಿಸಬೇಕು ಎಂಬ ತವಕ ನಿನಗಿರಬಹುದು. ಅದು ಸಾಧ್ಯವಿಲ್ಲ, ಏಕೆಂದರೆ ಪಾಂಡವ ಪಕ್ಷ ಸೇರಲು ಬಂದ ಮಾದ್ರಾಧೀಶನನ್ನು ನಿನ್ನೆಡೆಗೆ ಸೆಳೆದದ್ದು ಅನ್ನದ ಋಣದಿಂದಲ್ಲವೆ? ಆತನಿಗೆ ನಿನ್ನ ಪಕ್ಷದ ಊಟವಿತ್ತು, ಸಂತುಷ್ಟಗೊಳಿಸಿ ಒಲಿಸಿಕೊಂಡಿರುವೆ. ಹಾಗೆ ಆತುರದಲ್ಲಿ ಉಂಡರೆ ಅಪವಾದಕ್ಕೆ ಹೇತುವಾಗುತ್ತದೆ. ನಾನು ಆತನಂತೆ ಕೇವಲ ಊಟದಿಂದ ಒಲಿದು ನಿನ್ನ ಕೈಗೆ ಸಿಲುಕಲಾರೆ. ದುರ್ಯೋಧನಾ, ಖಂಡಿತವಾಗಿಯೂ ನಿನ್ನ ಮನೆಯಲ್ಲಿ ಉಣ್ಣುವ ಅಪೇಕ್ಷೆ ನನಗಿದೆ. ಆದರೆ, ಈಗ ಅಲ್ಲ. ಸದ್ಯ ಇರುವ ವೈರ ನಿನ್ನ ಮನದಲ್ಲಿ ಉಪಶಮನವಾಗಿ – ಪಾಂಡವರ ದಾಯ ಭಾಗ ಅವರಿಗಿತ್ತು, ನೀವು ದಾಯಾದ್ಯ ಕಲಹ ಮರೆತು ಸೋದರ ಬಂಧುಗಳಾದರೆ ಆಗ ಮೃಷ್ಟಾನ್ನ ಭೋಜನ ಮಾಡಲು ಈ ಕೃಷ್ಣ ಮೊದಲ ಪಂಕ್ತಿಯಲ್ಲಿ ಸಿದ್ದನಾಗಿ ಕೂರುತ್ತಾನೆ. ಈಗ ನೀವು ನಿಶ್ಚಿಂತೆಯಿಂದ ಊಟ ಮಾಡಿಕೊಳ್ಳಿ, ನಾನು ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರ ನಡೆದನು.
ಅಲ್ಲಿಂದ ಬೇರೆ ಎಲ್ಲಿಗೂ ಹೋಗದೆ ನೇರವಾಗಿ ವಿದುರನ ಮನೆಗೆ ಹೋದನು. ಅಲ್ಲಿ ಶೃಂಗಾರವಿಲ್ಲ, ಸಡಗರವಿಲ್ಲ, ಸಂಭ್ರಮವೂ ಇಲ್ಲ. ನೀರವ ಪ್ರಶಾಂತತೆ ತುಂಬಿದೆ. ವಿದುರನ ಅಂಗಳದಲ್ಲಿ ಕೃಷ್ಣ ಬಂದು ನಿಂತಿದ್ದಾನೆ.
ವಿದುರನಿಗೆ ಶ್ರೀ ಕೃಷ್ಣ ತನ್ನ ಮನೆಗೆ ಬರುತ್ತಾನೆ ಎಂಬ ನಿರೀಕ್ಷೆ ಇರಲಿಲ್ಲ. ಅವನಿಗೆ ಆಶ್ಚರ್ಯವೂ, ಸಂತೋಷವೂ ಏಕಕಾಲದಲ್ಲಿ ಒಟ್ಟಾಗಿ ಮೈಮರೆತು ಹೋದನು. ತನ್ನ ಮನೆ ಬಾಗಿಲಲ್ಲಿ ಬಂದು ನಿಂತಿರುವ ನೀಲ ಮೇಘ ಶ್ಯಾಮನ ಪ್ರಫುಲ್ಲ ವದನಾರವಿಂದವನ್ನು, ಅದರಿಂದ ಹೊರ ಸೂಸುತ್ತಿರುವ ಮೃದು ಮಧುರವಾದ ಮಂದಹಾಸವನ್ನು ಕಂಡು ಥಟ್ಟನೆ ಎದ್ದು ಓಡಿ ಬಂದು ವಾಸುದೇವನ ಪಾದ ಪದ್ಮಗಳೆಡೆಯಲ್ಲಿ ತನ್ನ ಶಿರವೂರಿ, ಚರಣಗಳನ್ನು ಬಿಗಿದಪ್ಪಿ ಹಿಡಿದು ಮುದ್ದಿಸಿದನು. ಕೃಷ್ಣನ ಸುತ್ತ ಒಂದು ಸುತ್ತು ಹೊರಳಾಡಿ ಮೇಲೆದ್ದನು. ಮತ್ತೆ ಅಪಾದಮಸ್ತಕವಾಗಿ ಕೃಷ್ಣನ ರೂಪರಾಶಿ ಚೆಲುವನ್ನು ನೋಡುತ್ತಾ ಪ್ರದಕ್ಷಿಣೆ ಬಂದು ನಮಸ್ಕರಿಸಿ, ಮತ್ತೆ ಮತ್ತೆ ವಂದಿಸಿ ಕೈ ಮುಗಿದು ಆ ಚೇತನ, ಲಾವಣ್ಯ ಸವಿಯುತ್ತಾ ಪರಮಾನಂದ ಪರವಶನಾಗಿ ತನ್ಮಯತೆಯಿಂದ ಕುಣಿದಾಡಿದನು. ಯಾವ ವಾಸುದೇವನು ಕಶ್ಯಪ, ವಸಿಷ್ಟಾದಿ ಮಹರ್ಷಿಗಳ ದೃಷ್ಟಿಗೆ ಸುಲಭದಲ್ಲಿ ಕಾಣ ಸಿಗಲಿಲ್ಲವೋ.. ಅಂತಹ ಪರಮ ಪುರುಷ ಇಂದು ಶ್ರೀ ಕೃಷ್ಣನ ರೂಪದಲ್ಲಿ ನನ್ನಂತಹ ಪಾಮರನ ಮನೆ ಬಾಗಿಲಿಗೆ ನಡೆದು ಬಂದು ನಿಂತಿದ್ದಾನೆ. ಹುಚ್ಚೆದ್ದು ಕುಣಿದ – ನಲಿದ. ಏನು ಮಾಡಿದರೂ ವಿದುರನ ಮನ ತಣಿಯುತ್ತಿಲ್ಲ. ಪರಮ ಭಾಗವತೋತ್ತಮ ವಿದುರ ಇನ್ನೇನು ಮಾಡಬಲ್ಲ! ಹೊಗಳಿದ, ಕೊಂಡಾಡಿದ, ಕುಣಿ ಕುಣಿದು ಕೀರ್ತನೆ ಮಾಡಿದ, ನಲಿ ನಲಿದು ಸ್ತುತಿಸಿದ. ಅಡಿಗಡಿಗೆ ವಂದಿಸಿದ, ಹೆಜ್ಜೆ ಹೆಜ್ಜೆಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದ. ಆತನ ಉದ್ವೇಗ ಉಪಶಮನಗೊಳ್ಳುವಷ್ಟು ಕಿರಿದಾಗಿದೆಯೆ? ಶ್ರೀ ಕೃಷ್ಣನ ದಿವ್ಯ ಮಂಗಲ ಮೂರ್ತಿಯನ್ನು ಕಣ್ದಣಿಯೆ ನೋಡಿದ – ಮನ ತಣಿಯೆ ಆಸ್ವಾದಿಸಿದ. ಮತ್ತೆ ಮತ್ತೆ ನೋಡಿ ನೋಡಿ… ತನಗೆ ಚಿವುಟಿ – ಹೊಡೆದು ಕನಸೋ ನನಸೋ ಎಂದು ಖಚಿತ ಪಡಿಸಿಕೊಂಡನು. ನಿಜ ಎಂದು ತಿಳಿದು ಮತ್ತೆ ಹಿರಿ ಹಿರಿ ಹಿಗ್ಗಿ ನಲಿದಾಡಿ ಆವೇಗವೋ – ಆವೇಶವೋ ಏನೋ ಹೇಳಲಾಗದ ಭಾವನೆ! ಅಂತೂ ತನ್ನ ಭಕ್ತಿಯ ಸಾಗರದಲ್ಲಿ ಮುಳುಗೇಳತೊಡಗಿದನು. ವಿದುರನ ಸಂಭ್ರಮ ನೋಡಿದ ಕೃಷ್ಣ ತನ್ನ ಭಕ್ತನ ಭಾವಪರವಶತೆಗೆ ಸುಪ್ರಸನ್ನನಾಗಿ ವಿದುರನನ್ನು ಹಿಡಿದು ಬರಸೆಳೆದು ಬಿಗಿದಪ್ಪಿದನು. ಭಾವ ಸಮ್ಮಿಲನ – ದೇವ ಭಕ್ತನ ಆಲಿಂಗನ. ಏನು ಹಿತ – ಎಂತಹ ಸುಖ. ಕಣ್ಮುಚ್ಚಿದನು ವಿದುರ. ಯಾರಿಗಿದೆ ಈ ಭಾಗ್ಯ! ಧನ್ಯನಾದೆ ಸ್ವಾಮೀ… ಧನ್ಯನಾದೆ.. ಎಂದು ಮನ ತಣಿಸುತ್ತಿದ್ದನು. ಈ ತನಕ ಮನಸ್ಸೆಂಬ ನಭೋ ಮಂಡಲದಲ್ಲಿ ತೇಲಿ ಘರ್ಷಿಸುತ್ತಿದ್ದ ಭಕ್ತಿಯ ಮೇಘಗಳು ತಣಿದು, ಮಹಾವರ್ಷ ಸುರಿಸುವಂತೆ ಕಂಗಳಿಂದ ಜಳ ಜಳನೆ ಆನಂದ ಭಾಷ್ಪ ಸುರಿದವು. ಮಂಡಿಯೂರಿ ಕುಳಿತು ತನ್ನ ಅಂತರಂಗದ ಭಾವಜಲದಿಂದ ಮುದ್ದು ಮುಕುಂದನ ಪಾದ ತೋಯಿಸತೊಡಗಿದನು.
ಶ್ರೀ ಕೃಷ್ಣನಿಗೂ ಮನತುಂಬಿತೊ ಏನೋ! ಭುಜಗಳನ್ನಾವರಿಸಿ ಹಿಡಿದೆತ್ತಿ, ಮೈದಡವಿ ” ಹೇ! ವಿದುರಾ!! ಏನಿದು? ನಾನು ನಿನ್ನವನಲ್ಲವೆ? ಯಾಕೀ ತೆರನಾದ ಉದ್ವೇಗ?” ಎಂದು ಹೇಳುತ್ತಾ.. ತನ್ನೆರಡೂ ಬಾಹುಗಳನ್ನು ತೆರೆದು, ವಿದುರನನ್ನು ಸೆಳೆದು ಎದೆಗೊತ್ತಿ ಹಿಡಿದನು. ಆತನ ಭುಜದಲ್ಲಿ ತನ್ನ ಶಿರವಿಟ್ಟು, ವಿದುರನ ಬೆನ್ನು ತಟ್ಟಿ ಭಾವನಾತ್ಮಕ ಲೋಕದಿಂದ ಹೊರ ಪ್ರಪಂಚಕ್ಕೆಳೆದು ತಂದನು.
ಎಚ್ಚೆತ್ತ ವಿದುರ “ಅರೆ ನನಗೇನಾಯಿತು? ಅಯ್ಯೋ ನನ್ನ ಬುದ್ದಿಯೇ! ದೇವಾ ನಿನ್ನನ್ನು ಇಷ್ಟು ಹೊತ್ತು ಹೊರಗೆ ನಿಲ್ಲಿಸಿದೆನೆ? ಮನ್ನಿಸಬೇಕು ಕೃಷ್ಣಾ… ಹೀಗೆ ಬಾ ಹೀಗೆ ಬಾ… ಎಂದು ಕೈ ಹಿಡಿದು ತನ್ನ ಮನೆಯೊಳಗೆ ಕರೆದೊಯ್ದನು.
ಮುಂದುವರಿಯುವುದು



















