28.2 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 289

ಭರತೇಶ್ ಶೆಟ್ಟಿ ,ಎಕ್ಕಾರ್

ಕೃಷ್ಣನ ಭವ್ಯ ಸ್ವಾಗತಕ್ಕೆ ಧೃತರಾಷ್ಟ್ರ ಮತ್ತು ದುರ್ಯೋಧನ ಮಾಡುತ್ತಿರುವ ತಯಾರಿಯನ್ನು ವಿದುರ ಅವಲೋಕಿಸುತ್ತಿದ್ದನು. ನಿಷ್ಟುರವಾದಿಯಾದ ಆತ ಅವರಿಬ್ಬರೂ ಇದ್ದಲ್ಲಿಗೆ ಹೋಗಿ ” ಶ್ರೀಕೃಷ್ಣ ಅಂತರ್ಮುಖಿ, ನೀವು ಬಹಿರಂಗವಾಗಿ ಏನೇ ಅದ್ದೂರಿಯ ಸಿದ್ಧತೆ ಮಾಡಿದರೂ ನಿಮ್ಮ ಅಂತರ್ಯದ ಶುದ್ಧತೆ ಇಲ್ಲದೆ ಇದ್ಯಾವುದೂ ಆತನಿಗೆ ಸ್ವೀಕೃತವಾಗದು ಎಂಬ ಸತ್ಯವನ್ನು ಮೊದಲು ಮನಗಾಣಬೇಕು. ಕೃಷ್ಣನಿಗೆ ಆಡಂಬರ, ಐಶ್ವರ್ಯ, ಡಂಬಾಚಾರ, ಹೊಗಳಿಕೆಯ ಮೇಲೆ ಆಸೆಯಿರದು. ಅವನು ಸತ್ಯಪ್ರಿಯನು, ಧರ್ಮವಂತನು. ನೀವು ಕೃಷ್ಣನನ್ನು ಒಲಿಸಿಕೊಳ್ಳಲು ಔದಾರ್ಯದ ಪಥದಲ್ಲಿ ಕ್ರಮಿಸುವ ಪ್ರಯತ್ನದಲ್ಲಿದ್ದೀರಿ. ಎಲ್ಲಿಯವರೆಗೆ ಅಂತರಂಗ ಶುದ್ಧ, ಧರ್ಮಯುತ ನಡೆ, ಆಚಾರ ವಿಚಾರದಲ್ಲಿ ಒಮ್ಮತ ಕೂಡಿ ಒಂದಾಗಿ ಬರುವುದಿಲ್ಲವೋ, ಅಲ್ಲಿಯವರೆಗೆ ಏನೇ ಮಾಡಿದರೂ ಕೃಷ್ಣನಿಗೆ ಅಂತಹ ತಯಾರಿ ನಗಣ್ಯವಾಗಿಯೆ ಪರಿಣಮಿಸುತ್ತದೆ. ನೀವು ಬಹುಮೂಲ್ಯ ವಸ್ತುಗಳನ್ನು ಸಂಪತ್ತಿನ ತೋರಿಕೆಯ ಲೆಕ್ಕದಲ್ಲಿ ಆತನಿಗೆ ಸಮರ್ಪಿಸಲು ಸಿದ್ದರಾಗಿದ್ದೀರಿ. ಅವುಗಳು ಆತನಿಗೆ ಅನಗತ್ಯ. ಏಕೆಂದರೆ ಕೃಷ್ಣ ಧರ್ಮಪಾಲಕ ಮತ್ತು ಧರ್ಮಿಷ್ಟರ ಪಕ್ಷದಲ್ಲಿ ನಿಲ್ಲುವವನು. ಪಾಂಡವರು ಅದೇ ಪಥದಲ್ಲಿ ಸಾಗುತ್ತಿದ್ದಾರೆ. ಕೃಷ್ಣನಿಗೆ ಪಾಂಡುಪುತ್ರರು ಪ್ರಿಯರಾಗಿದ್ದಾರೆ” ಎಂದನು.

ಕೇಳಿಸಿಕೊಂಡ ದುರ್ಯೋಧನನಿಗೆ ವಿದುರನ ಮಾತಿನ ಅರ್ಥ ಎಷ್ಟಾಯಿತೋ! ವೈಭವದ ಪರಾಕಾಷ್ಟೆ ಪ್ರದರ್ಶಿಸಿ ಅದ್ವಿತೀಯವಾದ ಕೊಡುಗೆಯನ್ನಿತ್ತು ಕೃಷ್ಣನನ್ನು ಒಲಿಸಿಕೊಳ್ಳಲು ಸನ್ನದ್ಧನಾಗಿದ್ದ ಕೌರವ “ನಾವು ನೀಡುವ ಮರ್ಯಾದೆ ಆ ಕೃಷ್ಣನಿಗೆ ಬೇಡವಾದರೆ ಬಿಡೋಣ, ಬೇಕಾದಾಗ ಬರಲಿ, ಬಂದು ಮಾಡಬೇಕಾದದ್ದನ್ನು ಮಾಡಿ ಹೋಗಲಿ. ನಾವು ಆ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೇಗಿದ್ದರೂ ಆತ ಪಾಂಡವ ಪಕ್ಷಪಾತಿಯಾಗಿಯೆ ವ್ಯವಹರಿಸುವವನು, ಹಾಗೆಯೆ ಮಾಡಿ ಹೋಗಲಿ. ನಾವು ಆ ಕುರಿತು ಚಿಂತೆ ಮಾಡುವುದಿಲ್ಲ” ಎಂದು ಉದ್ದಟತನದಿಂದ ಉತ್ತರಿಸಿ ಹೊರಟು ಹೋದನು. ವಿದುರನ ತಿಳುವಳಿಕೆಯ ಮಾತುಗಳು ಗೋರ್ಗಲ್ಲ ಮೇಲೆ ನೀರೆರೆದಂತೆ ಇಳಿದು ಹೋಯಿತು ಹೊರತು ಒಳಗಿಳಿಯಲಿಲ್ಲ.

ಮರುದಿನ ಮುಂಜಾನೆ ಶ್ರೀ ಕೃಷ್ಣ ಎದ್ದು ನಿತ್ಯಕರ್ಮ ಪೂರೈಸಿ ಇಂದ್ರಪ್ರಸ್ಥದಿಂದ ಹೊರಟು ಹಸ್ತಿನಾವತಿಯತ್ತ ಪ್ರಯಾಣ ಬೆಳೆಸಿದನು. ಪುರ ಸಮೀಪಿಸುತ್ತಿದ್ದಂತೆ ದುರ್ಯೋಧನನ ಅಪ್ಪಣೆಯಂತೆ ಪುರ ಶೃಂಗಾರಗೊಂಡಿದೆ. ತಳಿರು ತೋರಣಗಳು, ಅದ್ಬುತ ಗೋಪುರಗಳು, ಭವ್ಯ ಸ್ವಾಗತ, ವಿಹಾರವನಗಳು, ವಿಶ್ರಾಂತಿ ತಾಣಗಳು, ಅರವಟ್ಟಿಗೆಗಳು ತಯಾರಾಗಿದ್ದವು. ಕೃಷ್ಣ ನೇರವಾಗಿ ಹಸ್ತಿನಾವತಿ ಪುರದೆಡೆಗೆ ಸಾಗತೊಡಗಿದನು. ಆದರೆ ಮಾರ್ಗದ ಇಕ್ಕೆಲಗಳಲ್ಲಿ ಪ್ರಜಾಜನರು ಭಕ್ತಿಯಿಂದ ಕೃಷ್ಣನನ್ನು ಕಣ್ತುಂಬ ನೋಡಿ ಧನ್ಯರಾಗಲು ದರ್ಶನಾಕಾಂಕ್ಷಿಗಳಾಗಿ ಸೇರಿದ್ದಾರೆ. ತಂಡೋಪತಂಡವಾಗಿ ಕುಟುಂಬ ಸಮೇತರಾಗಿ ಮಕ್ಕಳು – ಮಡದಿ, ಅಬಾಲ – ವೃದ್ಧರೂ ಕಾತರದಿಂದ ಕಾಯುತ್ತಿದ್ದಾರೆ. ಅವರೆಲ್ಲರನ್ನೂ ಕಂಡು ಕೃಷ್ಣ ರಥದಿಂದಿಳಿದು ನಡೆದು ಬಳಿ ಹೋಗಿ ಮಾತನಾಡಿಸಿದನು. ಪುರ ಪ್ರವೇಶ ಸಮೀಪಿಸುತ್ತಿದ್ದಂತೆ ಇಂತಹ ಜನಸಂದಣಿಯೂ ಹೆಚ್ಚಾಗಿ ಜಾತ್ರೆಯಂತೆ ಜನ ಕೈ ಮುಗಿಯುತ್ತಾ ಮುಗಿಬೀಳತೊಡಗಿದರು. ಕೃಷ್ಣ ಎಲ್ಲ ಭಕ್ತ ಜನರಿಗೂ ದರ್ಶನವೀಯುತ್ತಾ ಸಾಗಿದನು. ಕೃಷ್ಣಾಗಮನ ಜನರ ದಟ್ಟಣೆಯಿಂದ ಪುರಪ್ರವೇಶ ಕಾಣುವಲ್ಲಿ ನಿಧಾನವಾಗತೊಡಗಿತು.

ಊರ ಹೊರಗಿನ ಉದ್ಯಾನವನಗಳೂ, ಲತಾ ಮಂಟಪಗಳೂ, ನೀರಿನ ತಟಾಕಗಳೂ ಆಹ್ಲಾದಕರವೆ ಆಗಿದ್ದವು. ವಿಧ ವಿಧ ಪುಷ್ಪರಾಜಿಗಳ ಸೌರಭ ಸಂಪದ ತುಂಬಿ ಬೀಸುತ್ತಿದ್ದ ಗಾಳಿಯೂ ನಿಧಾನಗೊಂಡು ಕೃಷ್ಣನಿಗೆ ಮೃದು ಮಧು ಸ್ಪರ್ಶವೀಯುತ್ತಾ ಸಾಗುತ್ತಿದೆಯೊ ಎಂಬಂತಿತ್ತು. ವೈಭವದ ಉತ್ತುಂಗದಲ್ಲಿ ಕಂಗೊಳಿಸುತ್ತಿದ್ದ ಹಸ್ತಿನಾವತಿಯ ಮಹಾನಗರ ರಾರಾಜಿಸುತ್ತಿದೆ. ರಾಜ ಮಹಾರಾಜರೂ ಬಂದು ಸೇರಿರುವ ಗಜಪುರ ದುರ್ಯೋಧನನ ದುಷ್ಟ ಕೂಟ ಸೇರಿ ಸಾಗರದಂತಾಗಿದೆ. ಪಾಂಡವರ ದುಸ್ಥಿತಿಯನ್ನು ನೆನೆದು, ಇಲ್ಲಿನ ಪರ್ವ ಸದೃಶ ಸಡಗರವನ್ನು ಕಂಡ ಕೃಷ್ಣನ ಮನ ಮರುಗಿತು. ಈ ಕೃತಕ ಸೌಂದರ್ಯಕ್ಕಿಂತ, ಚಂದ್ರಾನ್ವಯದ ಕುಲತಿಲಕರಾದ ಪಾಂಡವರು ಸದ್ಯ ಕತ್ತಲೆಯಲ್ಲಿದ್ದರೂ ಸ್ವಯಂ ಪ್ರಭೆಯಿಂದ ಹೊಳೆಯುತ್ತಿದ್ದಾರೆ ಎನ್ನುವುದು ನಿತ್ಯ ಸತ್ಯ ಎಂದು ತಿಳಿದನು. ಇಲ್ಲಿನ ವೈಭವವೇನಿದ್ದರೂ ಕೃಷ್ಣನಿಗೆ ದುರಾಡಳಿತದ ಕೊಂಪೆಯಾಗಿಯೆ ಗೋಚರಿಸಿತು. ಬಂದಿರುವ ಕಾರ್ಯ ಕಾರಣದ ಹೊಣೆ ಹೊತ್ತಿರುವ ಮುರಾರಿಯ ರಥ ರಾಜ ಬೀದಿಯಲ್ಲಿ ಮುಂದೊತ್ತಿ ಪುರದ ಹೆಬ್ಬಾಗಿಲಿಗೆ ಬಂದು ಸೇರಿತು. ಅಲ್ಲಿ ಭೀಷ್ಮ, ದ್ರೋಣಾದಿಗಳು, ಅರಮನೆಯ ಅಧಿಕಾರಿಗಳು, ಪುರ ಪ್ರಮುಖರನ್ನೆಲ್ಲಾ ಸೇರಿಸಿಕೊಂಡು ಶ್ರೀಕೃಷ್ಣನನ್ನು ಆದರದಿಂದ ಇದಿರ್ಗೊಂಡು ಕರೆದೊಯ್ದರು. ಕೃಷ್ಣನ ಜೊತೆ ಬಂದಿದ್ದ ಸೈನ್ಯ ರಾಜಗೋಪುರದ ಹೊರಗೆ ನಿಯತವಾದ ಸ್ಥಳದಲ್ಲಿ ಬೀಡು ಬಿಟ್ಟಿತು. ಅದ್ವಿತಿಯವಾಗಿ ಅಲಂಕಾರಗೊಂಡಿದೆ ಹಸ್ತಿನೆ, ಕಿಕ್ಕಿರಿದು ಸೇರಿದೆ ಜನಸಂದಣಿ. ಬೀದಿ, ಗೋಪುರ, ಉಪ್ಪರಿಗೆಗಳೂ ತುಂಬಿ ತುಳುಕಾಡುತ್ತಿವೆ. ಕೈಮುಗಿದು ನಿಂತು ಒಮ್ಮೆ ಕೃಷ್ಣನನ್ನು ನೋಡಬೇಕು ಎಂದು ಕಾಯುತ್ತಿದ್ದಾರೆ ಜನರು. ವಾಸುದೇವನನ್ನು ಕಾಣುತ್ತಿದ್ದಂತೆ ಬೊಗಸೆ ತುಂಬಾ ಅಕ್ಷತೆ, ಅರಳು, ಬಿಳಿಯ ಹೂವುಗಳನ್ನು ಎತ್ತಿ ಎತ್ತಿ ಆತನ ಮೇಲೆ ಬೀಳುವಂತೆ ಹಾರಿಸುತ್ತಿದ್ದಾರೆ. ಜಯಘೋಷಗಳು, ಸ್ತುತಿ, ವಂದನೆ ಹೀಗೆ ಏನೇನು ಬಯಸಿದ್ದರೋ ಅದನ್ನೆಲ್ಲಾ ಜನರು ಮಾಡತೊಡಗಿದ್ದಾರೆ. ಶ್ರೀಕೃಷ್ಣನು ತನ್ನನ್ನು ನೋಡಲು ಆಸೆಪಟ್ಟ ಎಲ್ಲ ಜನರಿಗೂ ಕಾಣಿಸಿಕೊಂಡನು. ಅಂತಹ ಜನರನ್ನು ಅವನೂ ನೋಡಿ ನಗುನಗುತ್ತಾ ಮುಂದೆ ಸಾಗಿದನು. ಹಸ್ತಿನೆಯ ನಗರಕ್ಕೆ ನಗರವೇ ಯಶೋದ ನಂದನನ ಲೀಲೆಯಿಂದ ಸಂಪೂರ್ಣವಾಗಿ ಆವೃತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಶ್ರೀ ಕೃಷ್ಣನು ಧೃತರಾಷ್ಟ್ರನ ಅರಮನೆಯನ್ನು ಹೊಕ್ಕು ಅಲ್ಲಿದ್ದ ಅಂಧರಾಜನನ್ನೂ, ಗಾಂಧಾರಿಯನ್ನೂ ಇನ್ನಿತರ ಹಿರಿಯರನ್ನೂ ಕಂಡು ವಂದಿಸಿದನು. ಅವರಿಂದ ಸತ್ಕೃತನಾಗಿ ಕಾಣಿಕೆ ಪಡೆದು ತಾನು ತಂದುದನ್ನು ಅವರಿಗೆ ಕಾಣಿಕೆಯಾಗಿ ನೀಡಿ ಯೋಗಕ್ಷೇಮ ವಿಚಾರಿಸಿದನು. ಮುಂದುವರಿದು ಭೀಷ್ಮ, ದ್ರೋಣ, ಕೃಪಾದಿಗಳ ಮನೆಗಳಿಗೂ ಭೇಟಿಯಿತ್ತನು. ಅಲ್ಲೂ ವಿಶೇಷವಾಗಿ ಸತ್ಕೃತನಾದನು. ಅಲ್ಲಿಂದ ಹೊರಟು ದುರ್ಯೋಧನನ ಅರಮನೆಯತ್ತ ಸಾಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page